
ಬೆಂಗಳೂರು, ಜೂನ್ 18: ಬೆಂಗಳೂರಿನಲ್ಲಿ ಬೀದಿನಾಯಿಗಳ (Stray Dogs) ಹಾವಳಿ ದಿನದಿಂದ ದಿನಕ್ಕೆ ಮಿತಿಮೀರುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಇತ್ತೀಚಿನ ಅಧಿಕೃತ ಅಂಕಿ-ಅಂಶಗಳ ಪ್ರಕಾರ, ನಗರದಲ್ಲಿ ನಾಯಿ ಕಡಿತದ ಪ್ರಕರಣಗಳ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿಸಿದರೆ ಬರೋಬ್ಬರಿ ಶೇಕಡಾ 55 ರಷ್ಟು ಭಾರಿ ಏರಿಕೆ ಕಂಡಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಬೆಂಗಳೂರು ಮಹಾನಗರ ಪ್ರದೇಶದಲ್ಲಿ (ಈಗಿನ ಗ್ರೇಟರ್ ಬೆಂಗಳೂರು ಅಥಾರಿಟಿ – GBA ವ್ಯಾಪ್ತಿ) 2026ರ ಮೊದಲ ಐದು ತಿಂಗಳಲ್ಲೇ ಬರೋಬ್ಬರಿ 18,140 ನಾಯಿ ಕಡಿತದ ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಅಂದರೆ 2025ರ ಇದೇ ಅವಧಿಯಲ್ಲಿ (ಹಳೆಯ ಬಿಬಿಎಂಪಿ ವ್ಯಾಪ್ತಿ) ಈ ಸಂಖ್ಯೆ 11,647 ಆಗಿತ್ತು. ಕೇವಲ ಒಂದು ವರ್ಷದ ಅವಧಿಯಲ್ಲಿ ದಾಖಲಾದ ಈ ಬೃಹತ್ ಜಿಗಿತವು ನಗರದ ನಿವಾಸಿಗಳು, ವಿಶೇಷವಾಗಿ ಮಕ್ಕಳು ಮತ್ತು ವೃದ್ಧರ ಸುರಕ್ಷತೆಯ ಬಗ್ಗೆ ತೀವ್ರ ಕಳವಳವನ್ನು ಹುಟ್ಟುಹಾಕಿದೆ.
ಕೇವಲ ಐದು ತಿಂಗಳಲ್ಲಿ 18 ಸಾವಿರಕ್ಕೂ ಹೆಚ್ಚು ಜನರು ನಾಯಿ ಕಡಿತಕ್ಕೆ ಒಳಗಾಗಿದ್ದು, ದಿನನಿತ್ಯ ಸರಾಸರಿ ನೂರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿವೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳ ವ್ಯಾಪ್ತಿಯಲ್ಲಿ ನಾಯಿಗಳ ದಾಳಿ ತೀವ್ರಗೊಂಡಿದೆ. ರಾಜಧಾನಿಯಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕಾಗಿ ಜಾರಿಯಲ್ಲಿರುವ ರೇಬೀಸ್ ಮುಕ್ತ ಯೋಜನೆ ಹಾಗೂ ಸಂತಾನಹರಣ ಚಿಕಿತ್ಸೆಗಳು (ABC) ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗುತ್ತಿಲ್ಲ ಎಂಬುದನ್ನು ಈ ದತ್ತಾಂಶಗಳು ಸಾಬೀತುಪಡಿಸುತ್ತಿವೆ.
ಈ ಭಾರಿ ಏರಿಕೆಗೆ ಕೇವಲ ನಾಯಿಗಳ ದಾಳಿ ಹೆಚ್ಚಿರುವುದು ಮಾತ್ರ ಕಾರಣವಲ್ಲ, ಬದಲಿಗೆ ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಹೆಚ್ಚಿದೆ. ಹೀಗಾಗಿ ನಾಯಿಗಳಿಂದ ಸಣ್ಣ ಗೀರು ಅಥವಾ ಕಡಿತಕ್ಕೊಳಗಾದರೂ ಆಸ್ಪತ್ರೆಗೆ ಬಂದು ದೂರು ದಾಖಲಿಸುತ್ತಿರುವುದು ಮತ್ತು ಆಸ್ಪತ್ರೆಗಳಲ್ಲಿ ನಿಖರವಾದ ವರದಿ ಸಿದ್ಧವಾಗುತ್ತಿರುವುದು ಕೂಡ ಒಂದು ಪ್ರಮುಖ ಕಾರಣ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ ಬೆಂಗಳೂರಲ್ಲಿ ಮಿತಿ ಮೀರಿದ ಶ್ವಾನಗಳ ದಾಳಿ ಪ್ರಕರಣ: 5 ತಿಂಗಳಲ್ಲಿ 9.7 ಸಾವಿರ ಕೇಸ್
ಪ್ರಸ್ತುತ ಕರ್ನಾಟಕದಲ್ಲಿ ರೇಬೀಸ್ ರೋಗವನ್ನು ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಕಡ್ಡಾಯವಾಗಿ ವರದಿ ಮಾಡಬೇಕಾದ ಕಾಯಿಲೆ ಎಂದು ಘೋಷಿಸಲಾಗಿದೆ. ಆದಾಗ್ಯೂ, ತಳಮಟ್ಟದಲ್ಲಿ ಬೀದಿನಾಯಿಗಳ ಸಂಖ್ಯೆಯನ್ನು ಶಾಶ್ವತವಾಗಿ ನಿಯಂತ್ರಿಸಲು ಮತ್ತು ಸಾರ್ವಜನಿಕರಿಗೆ ಸೂಕ್ತ ಸುರಕ್ಷತೆ ಒದಗಿಸಲು ಸ್ಥಳೀಯ ಆಡಳಿತವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ ಎಂದು ನಾಗರಿಕರು ಆಗ್ರಹಿಸುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:31 pm, Thu, 18 June 26