ಸಾವಿನಲ್ಲೂ ರಾಜಕೀಯ ಮಾಡಲು ಹೋಗಬಾರದು, ಬಿಜೆಪಿಯವರು ಕ್ಷಮೆ ಕೇಳಬೇಕು: ಮಾಜಿ ಸಿಎಂ ಸಿದ್ದರಾಮಯ್ಯ
ಬಿಜೆಪಿಯವರು ಮಾಡಿದ್ದ ಆರೋಪ ಸುಳ್ಳು ಅಂತಾ ಆಗಿದೆ. ಬಿಜೆಪಿಯವರು ಈಗ ಕ್ಷಮೆ ಕೇಳಬೇಕು. ಸಾವಿನಲ್ಲೂ ರಾಜಕೀಯ ಮಾಡಲು ಹೋಗಬಾರದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.
ಬೆಂಗಳೂರು: ನಾನು ಸಿಎಂ ಆಗಿದ್ದಾಗ 8 ಕೇಸ್ಗಳನ್ನು ಸಿಬಿಐಗೆ ವಹಿಸಿದ್ದೆ. ಅದರಲ್ಲಿ ಪರೇಶ್ ಮೇಸ್ತ ಪ್ರಕರಣ ಕೂಡ ಒಂದು. ಬಿಜೆಪಿಯವರು ಬಹಳ ದೊಡ್ಡ ಗಲಾಟೆ ಮಾಡಿದ್ದರು. RSS, ಬಜರಂಗದಳದವರೂ ಪ್ರತಿಭಟನೆ ಮಾಡಿದ್ದರು. ಈಗ ಪ್ರಕರಣ ಸಂಬಂಧ ಸಿಬಿಐ ಬಿ ರಿಪೋರ್ಟ್ ನೀಡಿದೆ. ಬಿಜೆಪಿಯವರು ಮಾಡಿದ್ದ ಆರೋಪ ಸುಳ್ಳು ಅಂತಾ ಆಗಿದೆ. ಬಿಜೆಪಿಯವರು ಈಗ ಕ್ಷಮೆ ಕೇಳಬೇಕು. ಸಾವಿನಲ್ಲೂ ರಾಜಕೀಯ ಮಾಡಲು ಹೋಗಬಾರದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ಇನ್ನು ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂಬ ಬಿಜೆಪಿ ಆಗ್ರಹ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಸಿಬಿಐ ಯಾರ ಕೈಯಲ್ಲಿರೋದು? ಆಗ ಯಾರು ಪ್ರಧಾನ ಮಂತ್ರಿಯಾಗಿದ್ದರು? ಬಿಜೆಪಿಯವರು ಸುಳ್ಳುಗಳನ್ನು ಮುಚ್ಚಿಕೊಳ್ಳೋಕೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಡಿಕೆ ರವಿ ಪ್ರಕರಣ ಬಿ ರಿಪೋರ್ಟ್ ಆಯ್ತು, ಗಣಪತಿ ಕೇಸ್, ಪರೇಶ್ ಮೆಸ್ತಾ ಕೇಸ್ ಬಿ ರಿಪೋರ್ಟ್ ಆಗಿದೆ. ಯಾವ ಪ್ರಕರಣ ಸಾಬೀತಾಗಿದೆ ಎಂದು ಪ್ರಶ್ನಿಸಿದರು.
ಪರೇಶ್‌ಮೆಸ್ತಾ ಪ್ರಕರಣವನ್ನು ಪ್ರಧಾನಿ ಮೋದಿ ಇದ್ದಾಗ ಸಿಬಿಐಗೆ ನೀಡಿದ್ದು. ಇವರು ಕಾಲದಲ್ಲಿ ಸಿಬಿಐಗೆ ಕೊಡಿ ಅಂತ ಹೇಳಿದರೆ ಕಾಂಗ್ರೆಸ್ ಬಚಾವೋ ಇನ್ಸ್ಟಿಟ್ ಅಂತ ಹೇಳುತ್ತಿದ್ದರು. ಈಗ ಮೂರು ವರ್ಷದಿಂದ ಯಾವ ಪ್ರಕರಣವನ್ನು ಬಿಜೆಪಿಯವರು ಸಿಬಿಐಗೆ ನೀಡಿದ್ದಾರೆ. ತನಿಖೆ ಮಾಡಿ ಅಂದರೆ ದಾಖಲೆ ಕೊಡಿ ಅಂತ ಹೇಳುತ್ತಾರೆ. ಇವರು ಮಾಡಿದ ಭ್ರಷ್ಟಾಚಾರ ಮುಚ್ಚಿಕೊಳ್ಳೋಕೆ ಸುಳ್ಳು ಆಪಾದನೆ ಮಾಡುತ್ತಾರೆ. ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ಸುಳ್ಳನ್ನೆ ಸತ್ಯ ಮಾಡೋ ನಿಸ್ಸೀಮರು. ಅವರು ತಪ್ಪು ಮಾಡಿ ತಪ್ಪಿತಸ್ಥರಾದಾಗ ಸುಳ್ಳು ಹೇಳುವುದು ಸಾಮಾನ್ಯ ಎಂದು ಸಿದ್ದರಾಮಯ್ಯ ಕಿಡಿಕಾರಿದರು.
ಪಾಪಿ ಬಿಜೆಪಿಯ ಸುಳ್ಳುಗಳು ಅವರದ್ದೇ ಆಡಳಿತದಲ್ಲಿರುವ ಸಿಬಿಐನಿಂದ ಬೆತ್ತಲಾಗುತ್ತಿವೆ: ಕೈ ತಿರುಗೇಟು
ಪರೇಶ್ ಮೇಸ್ತ ಸಾವು ಪ್ರಕರಣ ಹಾಗೂ ಸಿಬಿಐ ಬಿ ರಿಪೋರ್ಟ್ ವಿಚಾರ ಇದೀಗ ಆಡಳಿತ ಪಕ್ಷ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ನಾಯಕರ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ. ಪಾಪಿ ಬಿಜೆಪಿಯ ಸುಳ್ಳುಗಳು ಅವರದ್ದೇ ಆಡಳಿತದಲ್ಲಿರುವ ಸಿಬಿಐನಿಂದ ಬೆತ್ತಲಾಗುತ್ತಲೇ ಇವೆ ಎಂದು ಹೇಳುವ ಮೂಲಕ ರಾಜ್ಯ ಕಾಂಗ್ರೆಸ್ ಘಟಕ ಬಿಜೆಪಿ ಆರೋಪಕ್ಕೆ ಟಾಂಗ್ ಕೊಟ್ಟಿದೆ.
ಅಂದು ಭಾರೀ ರಾಜಕೀಯ ಕೋಲಾಹಲ ಸೃಷ್ಟಿಸಿದ್ದ ಹೊನ್ನಾವರ ಪರೇಶ್ ಮೇಸ್ತಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ತನಿಖಾ ವರದಿಯನ್ನು ಹೊನ್ನಾವರ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ವರದಿಯಲ್ಲಿ ಪರೇಶ್ ಮೇಸ್ತಾ ಸಾವು ಹತ್ಯೆಯಲ್ಲ, ಆಕಸ್ಮಿಕವಾಗಿ ಘಟಿಸಿದೆ ಎಂದು ಉಲ್ಲೇಖಿಸಲಾಗಿದೆ. ವರದಿ ಪರಿಶೀಲಿಸಿದ ಹೊನ್ನಾವರ ನ್ಯಾಯಾಲಯ ನವೆಂಬರ್ 16ಕ್ಕೆ ತೀರ್ಪು ಕಾಯ್ದಿರಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.