ಮನೆ ಬಾಗಿಲಿಗೆ ಡ್ರೋನ್ ಡೆಲಿವರಿ! ಹೊಸ ಪ್ರಯೋಗ ಆರಂಭಿಸಿದ ಬೆಂಗಳೂರು ಅಪಾರ್ಟ್​ಮೆಂಟ್

ಡ್ರೋನ್ ಮೂಲಕ ದಿನಸಿ, ಔಷಧಿ ಮತ್ತು ಇತರ ದೈನಂದಿನ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ವಿತರಿಸುವ ನಿಟ್ಟಿನಲ್ಲಿ ಬೆಂಗಳೂರಿನ ಅಪಾರ್ಟ್​​​ಮೆಂಟ್ ಒಂದು ಮಹತ್ವದ ಹೆಜ್ಜೆ ಇಟ್ಟಿದೆ. ವಸ್ತುಗಳನ್ನು ಡ್ರೋನ್ ಮೂಲಕ ಗ್ರಾಹಕರಿಗೆ ತಲುಪಿಸಲು ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಪ್ರೆಸ್ಟೀಜ್ ಫಾಲ್ಕನ್ ಸಿಟಿ ವಸತಿ ಸಮುಚ್ಚಯವು ಬಿಗ್‌ಬಾಸ್ಕೆಟ್ ಜೊತೆಗೂಡಿ ಒಪ್ಪಂದ ಮಾಡಿಕೊಂಡಿದೆ. ವಿವರಗಳು ಇಲ್ಲಿವೆ.

ಮನೆ ಬಾಗಿಲಿಗೆ ಡ್ರೋನ್ ಡೆಲಿವರಿ! ಹೊಸ ಪ್ರಯೋಗ ಆರಂಭಿಸಿದ ಬೆಂಗಳೂರು ಅಪಾರ್ಟ್​ಮೆಂಟ್
ಸಾಂದರ್ಭಿಕ ಚಿತ್ರ

Updated on: May 05, 2025 | 7:58 AM

ಬೆಂಗಳೂರು, ಮೇ 5: ದೊಡ್ಡ ದೊಡ್ಡ ಅಪಾರ್ಟ್​​​ಮೆಂಟ್​​ಗಳಲ್ಲಿ ವಾಸಿಸುವ ನಿವಾಸಿಗಳಿಗೆ ಸಣ್ಣಪುಟ್ಟ ವಸ್ತುಗಳನ್ನು ತರಬೇಕೆಂದರೆ ಅದೊಂದು ದೊಡ್ಡ ಸಾಹಸ. ಅಪಾರ್ಟ್​​ಮೆಂಟ್​​ ಆವರಣದಿಂದ ಹೊರಬಂದು ಟ್ರಾಫಿಕ್ ಜಾಮ್​ಗಳಲ್ಲಿ ಸಿಲುಕಿಕೊಂಡು ಹೋಗಿ ಬರಬೇಕಾದ ಅನಿವಾರ್ಯತೆ ಇನ್ನು ದೂರವಾಗಲಿದೆ. ಡ್ರೋನ್​ ಮೂಲಕ ವಸ್ತುಗಳು ಮನೆ ಬಾಗಿಲಿಗೆ ಬರುವ ದಿನಗಳು ದೂರವಿಲ್ಲ. ದಿನಸಿ, ಔಷಧಿ ಮತ್ತು ದೈನಂದಿನ ಅಗತ್ಯ ವಸ್ತುಗಳನ್ನು ನೇರವಾಗಿ ಮನೆ ಬಾಗಿಲಿಗೆ ಡ್ರೋನ್ ಮೂಲಕ ತಲುಪಿಸುವ ಯೋಜನೆ ಬೆಂಗಳೂರಿನ (Bengaluru) ಕನಕಪುರ ರಸ್ತೆಯಲ್ಲಿರುವ ಪ್ರೆಸ್ಟೀಜ್ ಫಾಲ್ಕನ್ ಸಿಟಿ ವಸತಿ ಸಮುಚ್ಛಯದಲ್ಲಿ ಈಗಾಗಲೇ ಆರಂಭವಾಗಿದೆ. ಐದರಿಂದ 10 ನಿಮಿಷಗಳ ಒಳಗಾಗಿ ಡ್ರೋನ್ ಮೂಲಕ ಮನೆ ಬಾಗಿಲಿಗೆ ವಸ್ತುಗಳ ಡೆಲಿವರಿಗಾಗಿ ಬಿಗ್​ಬಾಸ್ಕೆಟ್ ಜತೆ ಪ್ರೆಸ್ಟೀಜ್ ಫಾಲ್ಕನ್ ಸಿಟಿ ಒಪ್ಪಂದ ಮಾಡಿಕೊಂಡಿದೆ.

ದಿನಸಿ, ಔಷಧಿ ಮತ್ತು ಅಗತ್ಯ ವಸ್ತುಗಳನ್ನು ಡ್ರೋನ್ ಮೂಲಕ ವಿತರಣೆ ಮಾಡುವ ವಿಚಾರದಲ್ಲಿ ಅಪಾರ್ಟ್​​ಮೆಂಟ್ ಹಾಗೂ ಇ ಕಾಮರ್ಸ್​​ ಸಂಸ್ಥೆ ಜತೆ ಇಂಥದ್ದೊಂದು ಒಪ್ಪಂದ ಏರ್ಪಟ್ಟಿರುವುದು ಬೆಂಗಳೂರಿನಲ್ಲಿ ಇದೇ ಮೊದಲನೆಯದು ಎನ್ನಲಾಗಿದೆ.

ಮಾರ್ಚ್​​ನಲ್ಲೇ ಶುರುವಾಗಿತ್ತು ಡ್ರೋನ್ ಮೂಲಕ ಅಗತ್ಯ ವಸ್ತುಗಳ ವಿತರಣೆ ಪ್ರಯೋಗ

ಡ್ರೋನ್ ಮೂಲಕ ಅಗತ್ಯ ವಸ್ತುಗಳ ವಿತರಣೆ ಮಾಡುವ ಸಂಬಂಧ ಪ್ರಾಯೋಗಿಕ ಯೋಜನೆ ಮಾರ್ಚ್‌ನಲ್ಲೇ ಆರಂಭವಾಗಿತ್ತು. ಆದರೆ, ಕಳೆದ ವಾರ ವಾಣಿಜ್ಯ ಕಾರ್ಯಾಚರಣೆಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು ಎಂದು ಬಿಗ್‌ಬಾಸ್ಕೆಟ್ ಸಿಬ್ಬಂದಿಯೊಬ್ಬರು ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ. ಈ ವ್ಯವಸ್ಥೆಯಲ್ಲಿ ಗ್ರಾಹಕರು ಆರ್ಡರ್ ಮಾಡಿದ ವಸ್ತುಗಳು ಮೊದಲು ಡ್ರೋನ್ ಮೂಲಕ ಅಪಾರ್ಟ್​ಮೆಂಟ್ ಆವರಣಕ್ಕೆ ಬರುತ್ತದೆ. ಅಪಾರ್ಟ್​​ಮೆಂಟ್​​ನಲ್ಲಿ ವಸ್ತುಗಳ ವಿತರಣೆಗೆಂದೇ ಸಿಬ್ಬಂದಿ ನಿಯೋಜನೆಯಾಗಿರುತ್ತಾರೆ. ಈ ಸಿಬ್ಬಂದಿ ಡ್ರೋನ್​​ನಲ್ಲಿ ಬಂದ ವಸ್ತುಗಳನ್ನು ಆರ್ಡರ್ ಮಾಡಿದ ಗ್ರಾಹಕರಿಗೆ ವಿತರಿಸುತ್ತಾರೆ ಎಂದು ಪ್ರೆಸ್ಟೀಜ್ ಫಾಲ್ಕನ್ ಸಿಟಿಯ ನಿವಾಸಿಗಳ ಕಲ್ಯಾಣ ಸಂಘದ ಸದಸ್ಯ ಅವಿನಾಶ್ ಹೆಚ್‌ವಿ ತಿಳಿಸಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಇದನ್ನೂ ಓದಿ
ಡೆಡ್ಲಿ ಮರಗಳಿಗೆ ಸಿಗದ ಮುಕ್ತಿ: ಮರ ಬಿದ್ದು ಅವಾಂತರ, ಪಾಲಿಕೆ ಡೋಂಟ್ ಕೇರ್
ಬೆಂಗಳೂರಿನ ಚಿನ್ಮಯ್ ಹೆಗ್ಡೆಯ ಸಹಾಯ ಬಾಲಕಿಯ ಜೀವನ ಬದಲಿಸಿದ್ದು ನಿಜವೇ?
ಕೆಎಎಸ್ ಪರೀಕ್ಷೆ ಹಾಲ್ ಟಿಕೆಟ್ ಗೊಂದಲ: ಸರ್ಕಾರದ ವಿರುದ್ಧ ಜೋಶಿ ವಾಗ್ದಾಳಿ
ಯೆಲ್ಲೋ ಲೈನ್ ಬಗ್ಗೆ ಮಹತ್ವದ ಅಪ್​ಡೇಟ್, ಬೆಂಗಳೂರಿನತ್ತ 3ನೇ ಚಾಲಕರಹಿತ ರೈಲು

ಏಳು ಕಿಲೋ ವರೆಗಿನ ವಸ್ತುಗಳನ್ನು ಮಾತ್ರ ಡ್ರೋನ್ ಮೂಲಕ ತಲುಪಿಸಬಹುದಾಗಿದೆ. ಸಂಚಾರ ದಟ್ಟಣೆ ಕಿರಿಕಿರಿಯಿಂದ ಗ್ರಾಹಕರು ಬಚಾವಾಗಲು ಮತ್ತು ವಸ್ತುಗಳ ಡೆಲಿವರಿಗಾಗಿ ಅಪಾರ್ಟ್​​ಮೆಂಟ್ ಆವರಣ ಪ್ರವೇಶಿಸುವವರ ಸಂಖ್ಯೆಯನ್ನು ಕಡಿಮೆಗೊಳಿಸುವ ಮೂಲಕ ವಿತರಣೆ ಪ್ರಕ್ರಿಯೆಯನ್ನು ಹೆಚ್ಚು ಅನುಕೂಲಕರವಾಗಿಸಲು ನಾವು ಬಿಗ್‌ಬಾಸ್ಕೆಟ್‌ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದ್ದೇವೆ ಎಂದು ಅವಿನಾಶ್ ಹೇಳಿದ್ದಾರೆ.

4 ರಿಂದ 5 ನಿಮಿಷದಲ್ಲಿ ಡ್ರೋನ್ ಮೂಲಕ ವಸ್ತುಗಳ ವಿತರಣೆ

ಡ್ರೋನ್ ಮೂಲಕ ಅಗತ್ಯವಸ್ತುಗಳ ವಿತರಣೆ ಸೇವೆ ಬೆಳಿಗ್ಗೆ 7 ರಿಂದ ರಾತ್ರಿ 8 ರವರೆಗೆ ಲಭ್ಯವಿದೆ. ಆರ್ಡರ್ ಏಳು ಕಿಲೋಗಿಂತ ಕಡಿಮೆ ತೂಕವಿದ್ದರೆ, ವಸ್ತುಗಳನ್ನು ನಾಲ್ಕರಿಂದ ಐದು ನಿಮಿಷಗಳಲ್ಲಿ ಪ್ರೆಸ್ಟೀಜ್ ಫಾಲ್ಕನ್ ಸಿಟಿಗೆ ತಲುಪಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಡಾರ್ಕ್ ಸ್ಟೋರ್ (ಶೇಖರಣಾ ಸೌಲಭ್ಯ) ಅಪಾರ್ಟ್‌ಮೆಂಟ್​ನಿಂದ ಸುಮಾರು ಆರು ಕಿಲೋಮೀಟರ್ ದೂರದಲ್ಲಿದೆ ಮತ್ತು ಪ್ರಸ್ತುತ ಎರಡು ಡ್ರೋನ್‌ಗಳನ್ನು ಬಳಸಿಕೊಂಡು ವಿತರಣೆಯನ್ನು ನಡೆಸಲಾಗುತ್ತಿದೆ ಎಂದು ಬಿಗ್‌ಬಾಸ್ಕೆಟ್ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಡೆಡ್ಲಿ ಮರಗಳಿಗೆ ಸಿಗದ ಮುಕ್ತಿ: ಮರ ಬಿದ್ದು ಅವಾಂತರ ಸೃಷ್ಟಿಯಾದ್ರೂ ಪಾಲಿಕೆ ಡೋಂಟ್ ಕೇರ್

ವೈಯಕ್ತಿಕ ಗೌಪ್ಯತೆಯನ್ನು ಖಚಿತಪಡಿಸಿಕೊಳ್ಳಲು ಡ್ರೋನ್‌ಗಳು ಕ್ಯಾಮೆರಾಗಳನ್ನು ಹೊಂದಿಲ್ಲ ಮತ್ತು ಜಿಪಿಎಸ್ ಆಧಾರಿತ ನ್ಯಾವಿಗೇಷನ್ ಮೂಲಕ ಮಾತ್ರ ಕಾರ್ಯನಿರ್ವಹಿಸುತ್ತವೆ ಎಂದು ಅವರು ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ