ಬೆಂಗಳೂರಿನಲ್ಲಿ ಡೆಡ್ಲಿ ಮರಗಳಿಗೆ ಸಿಗದ ಮುಕ್ತಿ: ಮರ ಬಿದ್ದು ಅವಾಂತರ ಸೃಷ್ಟಿಯಾದ್ರೂ ಪಾಲಿಕೆ ಡೋಂಟ್ ಕೇರ್
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಮಳೆ ಮತ್ತು ಅಪಾಯಕಾರಿ ಮರಗಳಿಂದಾಗಿ ಅನೇಕ ಅನಾಹುತಗಳು ಸಂಭವಿಸುತ್ತಿವೆ. ಇತ್ತೀಚೆಗೆ ಮರ ಬಿದ್ದು ಆಟೋ ಚಾಲಕ ಸಾವನ್ನಪ್ಪಿದ್ದರು. ಇದು ಬಿಬಿಎಂಪಿಯ ಅರಣ್ಯ ವಿಭಾಗದ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ. ಬೇಸಿಗೆಯಲ್ಲಿ ಒಣಗಿದ ಮರಗಳನ್ನು ತೆರವು ಮಾಡಲು ಪಾಲಿಕೆ ವಿಫಲವಾಗಿದ್ದು, ಮಳೆಗಾಲದಲ್ಲಿ ಇನ್ನಷ್ಟು ಅಪಾಯಗಳು ಎದುರಾಗುವ ಸಾಧ್ಯತೆಯಿದೆ.

ಬೆಂಗಳೂರು, ಮೇ 04: ರಾಜಧಾನಿಯಲ್ಲಿ ಕಳೆದೆರಡು ದಿನಗಳಿಂದ ವರುಣನ ಅಬ್ಬರ ಶುರುವಾಗಿದೆ. ಇತ್ತ ಮಳೆಯ ಆರ್ಭಟದ ಜೊತೆಗೆ ಮರಗಳಿಂದ ಆಗುತ್ತಿರುವ ಅನಾಹುತ ಕೂಡ ಸದ್ದುಮಾಡುತ್ತಿವೆ. ಮೊನ್ನೆಯಷ್ಟೇ ಮರಬಿದ್ದು ಆಟೋ ಚಾಲಕ ಸಾವನ್ನಪ್ಪಿದ್ದರು. ಜೊತೆಗೆ ಒಂದಷ್ಟು ಏರಿಯಾಗಳಲ್ಲಿ ಮರಗಳಿಂದ (trees) ವಾಹನಗಳಿಗೆ ಹಾನಿಯಾಗಿರೋದು ಬಿಬಿಎಂಪಿಯ (bbmp) ಅರಣ್ಯ ವಿಭಾಗದ ವೈಫಲ್ಯತೆಯನ್ನ ಅನಾವರಣ ಮಾಡಿದೆ. ಬೇಸಿಗೆ ವೇಳೆ ಒಣಗಿ ನಿಂತ ಮರಗಳು, ರೆಂಬೆ-ಕೊಂಬೆಗಳನ್ನ ತೆರವು ಮಾಡಬೇಕಿದ್ದ ಪಾಲಿಕೆ, ಇದೀಗ ಮಳೆ ಶುರುವಾಗುತ್ತಿದ್ದರೂ ಕ್ಯಾರೇ ಎನ್ನದಿರೋದು ಸಿಟಿ ಜನರು ಆತಂಕದಲ್ಲೇ ಓಡಾಡುವ ಸ್ಥಿತಿ ತಂದಿಟ್ಟಿದೆ.
ಗಾರ್ಡನ್ ಸಿಟಿ ಬೆಂಗಳೂರಿನಲ್ಲಿ ಮಾನ್ಸೂನ್ ಆರಂಭಕ್ಕೂ ಮೊದಲೇ ವರುಣನ ಆಗಮನವಾಗಿದೆ. ಇತ್ತ ಒಂದೆರಡು ಮಳೆಗೆ ಬಿಬಿಎಂಪಿಯ ನಿರ್ಲಕ್ಷ್ಯದ ಅನಾವರಣವಾಗಿದ್ದು, ರಾಜಧಾನಿಯ ಜನರಿಗೆ ಡೆಡ್ಲಿ ಮರಗಳಿಂದ ಆಗುವ ಅನಾಹುತಗಳಿಗೆ ಬ್ರೇಕ್ ಬೀಳದಂತಾಗಿದೆ. ಸದ್ಯ ಬೆಂಗಳೂರಿನ ಕಬ್ಬನ್ ಪಾರ್ಕ್ ರಸ್ತೆ, ಮಲ್ಲೇಶ್ವರಂ ಸೇರಿ ಹಲವೆಡೆ ಮರಗಳು ಒಣಗಿ ನಿಂತಿದ್ರೂ ಪಾಲಿಕೆ ಕ್ಯಾರೇ ಎನ್ನದಿರುವುದು ಮಳೆಗಾಲದಲ್ಲಿ ಮರಗಳಿಂದ ಆಗೋ ಅವಾಂತರಗಳ ಮುನ್ಸೂಚನೆ ಕೊಡುತ್ತಿದೆ.
ಇದನ್ನೂ ಓದಿ: ಬೆಂಗಳೂರಿನ ಚಿನ್ಮಯ್ ಹೆಗ್ಡೆಯ ಸಹಾಯ ಬಾಲಕಿಯ ಜೀವನ ಬದಲಿಸಿದ್ದು ನಿಜವೇ? ಕತೆ ಕೇಳಿ ಮೋಸ ಹೋಗದಿರಿ
ಸದ್ಯ ಪ್ರತಿ ವರ್ಷ ಮಾನ್ಸೂನ್ಗೂ ಮೊದಲೇ ರಾಜಧಾನಿಯ ಅಪಾಯಕಾರಿ ಮರಗಳು, ರೆಂಬೆ-ಕೊಂಬೆಗಳನ್ನ ತೆರವು ಮಾಡೋಕೆ ಪಾಲಿಕೆಯ ಅರಣ್ಯ ವಿಭಾಗ ಒಂದಷ್ಟು ಹಣ ಮೀಸಲಿಡುತ್ತೆ. ಆದರೆ ಪ್ರತಿ ಬಾರೀ ಸಣ್ಣ ಮಳೆ ಬಂದರೆ ಸಾಕು ಸಾಕಷ್ಟು ಅವಾಂತರ ಸೃಷ್ಟಿಯಾಗ್ತಿರೋದು ಬಿಬಿಎಂಪಿಯ ಅರಣ್ಯ ವಿಭಾಗದ ಬೇಜವಾಬ್ದಾರಿತನವನ್ನ ಪ್ರದರ್ಶನ ಮಾಡ್ತಿದೆ. ಇತ್ತ ಮೊನ್ನೆಯಷ್ಟೇ ಮರಬಿದ್ದು ಆಟೋಚಾಲಕ ಮೃತಪಟ್ಟಿದ್ರೂ, ಡೆಡ್ಲಿ ಮರಗಳನ್ನ ಪತ್ತೆಹಚ್ಚಿ ತೆರವು ಮಾಡದೇ ಸೈಲೆಂಟ್ ಆಗಿರುವ ಪಾಲಿಕೆ ನಡೆಗೆ ಸಿಟಿಜನರು ಕಿಡಿಕಾರುತ್ತಿದ್ದಾರೆ.

ಇನ್ನು ಕಳೆದೆರಡು ದಿನ ಸುರಿದ ಮಳೆಗೆ ಪಾಲಿಕೆ ವ್ಯಾಪ್ತಿಯಲ್ಲಿ ನೂರಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ಇತ್ತ ಮರಗಳಿಂದ ವಾಹನಗಳು, ಜೀವಹಾನಿ ಸಂಭವಿಸಿದ್ರೂ ಪಾಲಿಕೆ ಮಾತ್ರ ಮರಗಳಿಂದ ಎಚ್ಚರವಾಗಿರಿ ಅಂತಾ ಬೇಕಾಬಿಟ್ಟಿಗೆ ಸುತ್ತೋಲೆ ಹೊರಡಿಸಿ ಸೈಲೆಂಟ್ ಆಗಿಬಿಟ್ಟಿದೆ.
ಇದನ್ನೂ ಓದಿ: ಛೀ..ಥೂ…ಬೆಂಗಳೂರಿನಲ್ಲಿ ಬೆತ್ತಲೆಯಾಗಿ ಓಡಾಡಿದ ಯುವತಿ, ವಿಡಿಯೋ ವೈರಲ್
ಸದ್ಯ ಮಳೆಗಾಲ ಆರಂಭಕ್ಕೂ ಮುನ್ನ ಅಪಾಯಕಾರಿ ಮರಗಳನ್ನ ತೆರವುಗೊಳಿಸಬೇಕಿದ್ದ ಪಾಲಿಕೆ ನಿದ್ದೆಗೆ ಜಾರಿರೋದು ಯಾವ ಕ್ಷಣದಲ್ಲಿ ಎಲ್ಲಿ ಏನಾಗುತ್ತೋ ಅನ್ನೋ ಆತಂಕ ತಂದಿಟ್ಟಿದೆ. ಸದ್ಯ ಈಗಾಗಲೇ ಮಾನ್ಸೂನ್ ಆರಂಭದ ಮುನ್ಸೂಚನೆ ಸಿಗ್ತಿದ್ದು, ಪಾಲಿಕೆಯ ಅರಣ್ಯ ವಿಭಾಗ ಅಪಾಯ ಆಗುವ ಮೊದಲೇ ಕಾರ್ಯಪ್ರವೃತರಾಗುತ್ತಾ ಅನ್ನೋದನ್ನ ಕಾದುನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.







