ಬೆಂಗಳೂರು, ಡಿಸೆಂಬರ್ 07: ಹೊಸ ವರ್ಷಾಚರಣೆ (New Year) ಹಿನ್ನೆಲೆಯಲ್ಲಿ ಡ್ರಗ್ (Drug) ಜಾಲದ ಮೇಲೆ ಬೆಂಗಳೂರು ನಗರ ಪೊಲೀಸರು (Bengaluru City Police) ಮತ್ತು ಸಿಸಿಬಿ (CCB) ಪೊಲೀಸರು ಕಣ್ಣಿಟ್ಟಿದ್ದಾರೆ. ಅಧಿಕಾರಿಗಳು ನಿರಂತರ ಕಾರ್ಯಾಚರಣೆ ನಡೆಸಿದ್ದು, ಈಗಾಗಲೆ ಕೋಟ್ಯಾಂತರ ಮೌಲ್ಯದ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ. ಸಿಸಿಬಿ ಪೊಲೀಸರು ಶನಿವಾರ (ಡಿಸೆಂಬರ್ 07) ನಗರದ ವಿವಿಧೆಡೆ ವಿಶೇಷ ಕಾರ್ಯಾಚರಣೆ ನಡೆಸಿದರು. ಬೆಂಗಳೂರಿನ ಕೊರಿಯರ್ ಏಜೆನ್ಸಿ ಮತ್ತು ಅಂಚೆ ಕಚೇರಿಗಳಲ್ಲಿ ಪರಿಶೀಲನೆ ನಡೆಸಿದ್ದಾರೆ. ಸಂಪಂಗಿ ರಾಮನಗರದ ಕೊರಿಯರ್ ಏಜೆನ್ಸಿಯಲ್ಲಿ ಸಿಸಿಬಿ ಮತ್ತು ಶ್ವಾನದಳ ಪಾರ್ಸೆಲ್ಗಳ ಪರಿಶೀಲನೆ ನಡೆಸಿತು.
ಈ ವಿಚಾರವಾಗಿ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಚಂದ್ರಗುಪ್ತ ಮಾತನಾಡಿ, ವಿದೇಶದಿಂದ ಬರುತ್ತಿದ್ದ ಪಾರ್ಸಲ್‌ಗಳಲ್ಲಿ ಡ್ರಗ್ಸ್ ಪತ್ತೆಯಾಗಿತ್ತು. ಹೀಗಾಗಿ, ಒಟ್ಟು ಏಳು ಕಡೆ ಪರಿಶೀಲನೆ ನಡೆಸಲಾಗಿದೆ. ಹೊಸ ವರ್ಷ ಹಿನ್ನೆಲೆ ಡ್ರಗ್ಸ್ ಹೆಚ್ಚಾಗಿ ಪೂರೈಸುತ್ತಿರುವ ಮಾಹಿತಿ ಇದೆ. ತಪ್ಪು ವಿಳಾಸ ಕೊಟ್ಟು ಕೊರಿಯರ್ಗಳಲ್ಲಿ ಸರಬರಾಜು ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಕೊರಿಯರ್ ಕಚೇರಿ, ಅಂಚೆ ಕಚೇರಿಗಳಲ್ಲಿ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಮಂಗಳೂರು ಸಿಸಿಬಿ ಪೊಲೀಸರು ಕೂಡ ಶನಿವಾರ ಕಾರ್ಯಾಚರಣೆ ನಡೆಸಿದ್ದು, 10 ಲಕ್ಷ ರೂ. ಮೌಲ್ಯದ 200 ಗ್ರಾಂ ಎಮ್ಡಿಎಮ್ಎ ವಶಪಡಿಸಿಕೊಂಡಿದ್ದಾರೆ. ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬೆಂಗಳೂರಿನ ದರ್ಶನ್ ಕೆ.ಜಿ (25), ನೈಜೀರಿಯಾ ಮೂಲದ ಚಿಕ ಜೋಸೇಫ್ ಇಝಿ (26) ಬಂಧಿತ ಆರೋಪಿಗಳು.
ಇತ್ತಿಚೆಗೆ ಮಾದಕವಸ್ತು ಮಾರಾಟ ಆರೋಪದಲ್ಲಿ ಬಜ್ಪೆ ಪೊಲೀಸರು ಇಕ್ಬಾಲ್ ಎಂಬಾತನನ್ನು ಬಂಧಿಸಿದ್ದರು. ಈ ವೇಳೆ ಡ್ರಗ್ ಪೆಡ್ಲರ್ಗಳ ಬಗ್ಗೆ ಸಿಸಿಬಿ ಪೊಲೀಸರು ಮಾಹಿತಿ ಪಡೆದಿದ್ದರು. ಖಚಿತ ಮಾಹಿತಿ ಆಧರಿಸಿ ಪ್ರತ್ಯೇಕ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು, ಬೆಂಗಳೂರಿನಲ್ಲಿದ್ದುಕೊಂಡು ಡ್ರಗ್ ಮಾರಾಟ, ಸಾಗಾಟ ಮಾಡುತ್ತಿದ್ದರು.
ಆರೋಪಿ ಚಿಕ ಜೋಸೆಫ್ ಇಝಿ 2023ರಲ್ಲಿ ಉದ್ಯೋಗ ವೀಸಾದಲ್ಲಿ ಭಾರತಕ್ಕೆ ಬಂದಿದ್ದನು. ಚಿಕ ಜೋಸೆಫ್ ಬೆಂಗಳೂರಿನ ಯಲಹಂಕದಲ್ಲಿ ಹೇರ್ ಕಟ್ಟಿಂಗ್ ಉದ್ಯೋಗ ಮಾಡಿಕೊಂಡಿದ್ದನು. ಈಗಾಗಲೇ ಈತನ ವಿರುದ್ಧ ಬೆಂಗಳೂರು ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ ದಾಖಲಾಗಿ, ಬಂಧಿತನಾಗಿದ್ದನು. ನಾಲ್ಕು ತಿಂಗಳ ಹಿಂದೆ ಜಾಮೀನಿನಲ್ಲಿ ಬಿಡುಗಡೆಯಾಗಿದ್ದನು. ಇದೀಗ ಮತ್ತೆ ಪೊಲೀಸರ ಅತಿಥಿಯಾಗಿದ್ದಾನೆ.
ಸಿಸಿಬಿ ಪೊಲೀಸರು ಎಮ್ಡಿಎಮ್ಎ ಜೊತೆಗೆ ಕಾರು, 5 ಮೊಬೈಲ್ ಫೋನ್, ಡೆಬಿಟ್ ಕಾರ್ಡ್, ಏಳು ಸಿಮ್ ಕಾರ್ಡ್ಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಒಟ್ಟು 18 ಲಕ್ಷ 25 ಸಾವಿರ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ