ಬೆಂಗಳೂರು: ಸಿಸಿಬಿ ದಾಳಿ, 71 ಲಕ್ಷ ರೂ. ಮೌಲ್ಯದ ಡ್ರಗ್ ವಶ
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಡ್ರಗ್ಸ್ ಪೆಡ್ಲರ್‌ಗಳ ಮೇಲೆ ಬೃಹತ್ ಕಾರ್ಯಾಚರಣೆ ನಡೆದಿದೆ. ಸಿಸಿಬಿ ಪೊಲೀಸರು 71 ಲಕ್ಷ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡು ಕೇರಳ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೊಂದು ಪ್ರಕರಣದಲ್ಲಿ, ಕಳ್ಳತನದಿಂದ ಬೇಸತ್ತ ನಾಲ್ವರು ಯುವಕರು ಗಾಂಜಾ ಮಾರಾಟ ಮಾಡುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು, ಡಿಸೆಂಬರ್ 06: ಹೊಸ ವರ್ಷಾಚರಣೆ (New Year) ಹಿನ್ನೆಲೆಯಲ್ಲಿ ಡ್ರಗ್ (Drug) ಪೆಡ್ಲರ್ಗಳು ಹಾಗೂ ವ್ಯಸನಿಗಳ ಮೇಲೆ ಬೆಂಗಳೂರು ನಗರ ಪೊಲೀಸರು (Bengaluru Police) ಮತ್ತು ಸಿಸಿಬಿ (CCB) ಅಧಿಕಾರಿಗಳು ಕಣ್ಣಿಟ್ಟಿದ್ದಾರೆ. ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ ನಗರದಲ್ಲಿ ಕಾರ್ಯಾಚರಣೆ ನಡೆಸಿದ್ದು, ಕೇರಳ ಮೂಲದ ವ್ಯಕ್ತಿ ಸೇರಿ ಇಬ್ಬರು ಡ್ರಗ್ ಪೆಡ್ಲರ್ಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 71 ಲಕ್ಷ ರೂಪಾಯಿ ಮೌಲ್ಯದ ಮಾದಕ ವಸ್ತು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಕುಮಾರಸ್ವಾಮಿ ಲೇಔಟ್ನ ಚಂದ್ರಾನಗರದಲ್ಲಿನ ಮನೆಯೊಂದರಲ್ಲಿ 15.05 ಗ್ರಾಂ ಎಂಡಿಎಂಎ ಕ್ರಿಸ್ಟಲ್, 520 ಗ್ರಾಂ. ಹೈಡ್ರೋ ಗಾಂಜಾ, 2 ಕೆಜಿ 223 ಗ್ರಾಂ. ಗಾಂಜಾ ಮತ್ತು ತೂಕದ ಯಂತ್ರ, ಮೊಬೈಲ್ ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಕೇರಳದಿಂದ ಕಡಿಮೆ ಬೆಲೆಗೆ ಮಾದಕ ವಸ್ತುವನ್ನು ತಂದು, ಇಲ್ಲಿ ಮಾರುತ್ತಿದ್ದರು.
ಈ ವೇಳೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಇನ್ನು, ಜೈಲು ಸೇರಿದ ಆರೋಪಿ ಕೂಡ ಇವರ ಸಂಪರ್ಕಕ್ಕೆ ಇದ್ದಾರೆ ಎಂಬ ಅಂಶ ತನಿಖೆ ವೇಳೆ ತಿಳಿದುಬಂದಿದೆ. ಜೈಲಿನಲ್ಲಿರು ಓರ್ವ ಆರೋಪಿಯ ಸೂಚನೆಯಂತೆ ಆರೋಪಿಗಳು ಪೋರ್ಟಲ್ ಮೂಲಕ ಗಾಂಜಾ ಡೆಲಿವರಿ ಮಾಡುತ್ತಿದ್ದರು. ಸಿಸಿಬಿ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಗಾಂಜಾ ಮಾರಾಟಕ್ಕೆ ಇಳಿದಿದ್ದ ಗೆಳೆಯರು ಅರೆಸ್ಟ್
ಕಳ್ಳತನ ರಿಸ್ಕ್ ಅಂತ ಗಾಂಜಾ ಮಾರಾಟಕ್ಕೆ ಮುಂದಾಗಿದ್ದ ನಾಲ್ವರು ಗೆಳೆಯರನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಅಜಿತ್, ಕಾರ್ತಿಕ್, ಕಾರ್ತಿಕ್ ಮತ್ತು ರಾಕೇಶ್ ಬಂಧಿತ ಆರೋಪಿಗಳು. ಯಲಹಂಕ ಭಾಗದವರಾಗಿದ್ದ ಆರೋಪಿಗಳು ಈ ಹಿಂದೆ ಕಳ್ಳತನ ಮಾಡುತ್ತಿದ್ದರು. ಕಳ್ಳತನ ರಿಸ್ಕ್ ಅಂತ ಗಾಂಜಾ ಮಾರಾಟ ಮಾಡಲು ಪ್ಲಾನ್ ಮಾಡಿದ್ದರು.
ಇದನ್ನೂ ಓದಿ: ಹೊಸ ವರ್ಷಾಚರಣೆ: ಲಾಡ್ಜ್, ರೆಸ್ಟೋರೆಂಟ್ ಮೇಲೆ ಪೊಲೀಸ್ ಕಣ್ಣು, ಹಲವರ ವಿಚಾರಣೆ
ಒರಿಸ್ಸಾದಿಂದ ಗಾಂಜಾ ತರಿಸಿಕೊಂಡು ಆಟೋ ರಿಕ್ಷಾದಲ್ಲಿ ಮಾರಾಟಕ್ಕೆ ಮುಂದಾದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಬಂಧಿತರಿಂದ 8 ಕೆಜಿ 600 ಗ್ರಾಂ ಗಾಂಜಾ ಹಾಗೂ ಆಟೋ ರಿಕ್ಷಾ ವಶಕ್ಕೆ ಪಡೆಯಲಾಗಿದೆ.
ಹಳೇ ಡ್ರಗ್ ಪೆಡ್ಲರ್‌ಗಳ ತಪಾಸಣೆ: ದಯಾನಂದ
ಹೊಸ ವರ್ಷ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಅಹಿತಕರ ಘಟನೆ ಆಗದಂತೆ ಪೊಲೀಸರು ಸಿದ್ದತೆ ನಡೆಸಿದ್ದಾರೆ ಎಂದು ಪೊಲೀಸ್ ಆಯುಕ್ತ ಬಿ.ದಯಾನಂದ್ ಹೇಳಿದರು. ನಗರದಲ್ಲಿ ಅಹಿತಕರ ಘಟನೆ ಆಗದಂತೆ ಕಟ್ಟೆಚ್ಚರ ವಹಿಸಲಾಗಿದೆ. ಸಿಸಿಬಿ ಸೇರಿದಂತೆ ಎಲ್ಲಾ ವಿಭಾಗದವರು ಡ್ರಗ್ಸ್ ವಿರುದ್ದ ಕಾರ್ಯಾಚರಣೆ ನಡೆಸಿದ್ದಾರೆ. ಹಳೇ ಡ್ರಗ್ ಪೆಡ್ಲರ್ಗಳು, ರೌಡಿ ಹಿನ್ನೆಲೆಯುಳ್ಳವರ ತಪಾಸಣೆ ನಡೆಯುತ್ತಿದೆ ಎಂದರು.
ಹೊಸ ವರ್ಷ ಆಯೋಜಕರನ್ನು ಕರೆಸಿ ಸಲಹೆ ಸೂಚನೆ ನೀಡಲಾಗುತ್ತಿದೆ. ಬೇರೆ ಬೇರೆ ಇಲಾಖೆ ಜೊತೆಯೂ ಹೊಸ ವರ್ಷ ಆಚರಣೆ ಬಗ್ಗೆ ಚರ್ಚೆ ಆಗುತ್ತಿದೆ. ಎಲ್ಲೆಲ್ಲಿ ಲೈಟಿಂಗ್, ಬೇರೆ ವ್ಯವಸ್ಥೆ ಆಗಬೇಕು ಅಂತ ಚರ್ಚೆ ಆಗುತ್ತಿದೆ ಎಂದು ಹೇಳಿದರು.
ವರದಿ: ಪ್ರದೀಪ್
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ