
ಬೆಂಗಳೂರು, ಜೂನ್ 25: ತಂದೆ, ತಾಯಿ ಮಕ್ಕಳಿಗೆ ಕೈತುತ್ತು ನೀಡಿ, ಸಾಕಿ ಸಲುಹಿ ದೊಡ್ಡವರನ್ನಾಗಿ ಮಾಡುತ್ತಾರೆ. ಎದೆ ಎತ್ತರಕ್ಕೆ ಬೆಳೆದು ನಿಂತ ಮಕ್ಕಳು ಮುಪ್ಪಿನ ಕಾಲದಲ್ಲಿ ನಮ್ಮನ್ನು ನೋಡಿಕೊಳ್ಳುತ್ತಾರೆ ಅಂತ ತಂದೆ, ತಾಯಿ ಅಂದುಕೊಂಡಿರುತ್ತಾರೆ. ಆದರೆ, ಕೆಲ ಮಕ್ಕಳು ವೃದ್ಧ ತಂದೆ, ತಾಯಿಯನ್ನು ನೋಡಿಕೊಳ್ಳುವ ಬದಲಿಗೆ ವೃದ್ಧಾಶ್ರಮಕ್ಕೆ (Old Age Home) ಸೇರಿಸುತ್ತಾರೆ. ಪುತ್ರ ವೃದ್ಧಾಶ್ರಮಕ್ಕೆ ಸೇರಿಸಿದ್ದಕ್ಕೆ ಮನನೊಂದ ವೃದ್ಧ ದಂಪತಿ (Couple) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ (Benagluru) ಜೆ.ಪಿ.ನಗರದ 8ನೇ ಹಂತದಲ್ಲಿ ನಡೆದಿದೆ. ಕೃಷ್ಣಮೂರ್ತಿ (81 ವರ್ಷ), ರಾಧಾ (74 ವರ್ಷ) ಮೃತ ದಂಪತಿಗಳು.
ಸೊಸೆ ಮಾಡಿದ ಅಡುಗೆ ಇಷ್ಟವಿಲ್ಲ, ಹೊಂದಾಣಿಕೆಯಾಗದ ಕಾರಣ ಬೇರ ಮನೆ ಮಾಡಿಕೊಡುವಂತೆ ಮಗನಿಗೆ ತಂದೆ, ತಾಯಿ ಕೇಳಿದ್ದರು. ಆದರೆ, ಪುತ್ರ 2021ರಲ್ಲಿ ತಂದೆ, ತಾಯಿಯನ್ನು ಬ್ಯಾಟರಾಯನಪುರದ ವೃದ್ಧಾಶ್ರಮಕ್ಕೆ ಸೇರಿಸಿದ್ದನು. 2023ರಲ್ಲಿ ತಂದೆ, ತಾಯಿಯನ್ನು ವಾಪಸ್ ಮನೆಗೆ ಕರೆದುಕೊಂಡು ಬಂದಿದ್ದನು. ವೃದ್ಧಾಶ್ರಮದಿಂದ ವಾಪಸ್ ಬಂದ ನಂತರ ವೃದ್ಧ ದಂಪತಿಗೆ ಮನೆಯಲ್ಲಿ ಹೊಂದಾಣಿಕೆಯಾಗಿರಲಿಲ್ಲ. ಹೀಗಾಗಿ, ಕಳೆದ ತಿಂಗಳು ಮತ್ತೆ ಬನಶಂಕರಿ ನಗರದಲ್ಲಿರುವ ವೃದ್ಧಾಶ್ರಮಕ್ಕೆ ತಂದೆ, ತಾಯಿಯನ್ನು ಪುತ್ರ ಸೇರಿಸಿದ್ದನು.
ಇದನ್ನೂ ಓದಿ: ಅಯ್ಯೋ ವಿಧಿಯೇ..ಸಮವಸ್ತ್ರ ಧರಿಸದೇ ಶಾಲೆಗೆ ಹೋದ್ರೆ ಬೈಯುತ್ತಾರೆಂದು ಜೀವ ಕಳೆದುಕೊಂಡ ವಿದ್ಯಾರ್ಥಿನಿ
ಆದರೆ, ವೃದ್ಧ ದಂಪತಿ ಮೊನ್ನೆ ಬೆಳಿಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಸಂಬಂಧ ತಲಘಟ್ಟಪುರ ಪೊಲೀಸ್ ಠಾಣೆ ಪೊಲೀಸರು ಅಸ್ವಾಭಾವಿಕ ಸಾವು (UDR) ಎಂದು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಆದರೆ, ಟಿವಿ ನೋಡುವ ವಿಚಾರಕ್ಕೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು ಎಂದು ವೃದ್ಧಾಶ್ರಮದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಪ್ರಕರಣ ಸಂಬಂಧ ವೃದ್ದಾಶ್ರಮದ ಮೇಲ್ವಿಚಾರಕಿ ಶೋಭಾ ಮಾತನಾಡು, ಮೇ 15 ರಂದು ಅವರ ಮಗ ವಿಜಯ್ ಎಂಬುವರು ಆಶ್ರಮಕ್ಕೆ ಸೇರಿಸಿದರು. ಆಶ್ರಮಕ್ಕೆ ಬಂದ ದಿನವೇ ಅವರನ್ನು ನಾವು ಕೌನ್ಸಲಿಂಗ್ ಮಾಡಿದ್ವಿ. ಆದರೂ, ಅವರು ಇಲ್ಲೇ ಇರುತ್ತೇವೆ ಅಂತ ಒಪ್ಪಿಕೊಂಡರು. ಇನ್ನೊಂದು ತಿಂಗಳಲ್ಲಿ ಮನೆಗೆ ವಾಪಸ್ ಹೋಗುವುದಾಗಿ ಹೇಳಿದ್ದರು. ಸೊಸೆ ಟ್ರೈನಿಂಗ್ಗೆ ಹೋಗುತ್ತಾಳೆ ಆಗ ವಾಪಸ್ ಹೋಗುತ್ತೇವೆ ಅಂದಿದ್ದರು ಎಂದು ತಿಳಿಸಿದರು.
ಸೋಮವಾರ ಸಂಜೆ ರಾಧ ಮತ್ತು ಕೃಷ್ಣಕುಮಾರ್ ಒಟ್ಟಿಗೆ ಟಿವಿ ನೋಡುತ್ತಿದ್ದರು. ಈ ವೇಳೆ ರಾಧ ಅವರಿಗೆ ಸಿರಿಯಲ್ ನೋಡಬೇಕಿತ್ತು, ಕೃಷ್ಣಕುಮಾರ್ ಅವರಿಗೆ ದೇವರ ಗೀತೆಗಳು ನೋಡಬೇಕಿತ್ತು. ಈ ವಿಚಾರಕ್ಕೆ ಇಬ್ಬರ ನಡುವೆ ಮನಸ್ತಾಪ ಆಗಿತ್ತು. ನಂತರ ಇಬ್ಬರು ರೂಮ್ಗೆ ಹೋಗಿದ್ದರು. ಮಂಗಳವಾರ ಬೆಳಿಗ್ಗೆ ತಿಂಡಿ ಕೊಡಲು ಹೋದ ವೇಳೆ ಬಾಗಿಲು ತೆರೆಯಲಿಲ್ಲ. ನಮ್ಮ ಸಿಬ್ಬಂದಿ ಬಾಗಿಲು ತೆರೆದ ವೇಳೆ ಇಬ್ಬರು ನೇಣಿಗೆ ಶರಣಾಗಿರುವುದು ಗೊತ್ತಾಗಿದೆ ಎಂದರು.
ವರದಿ: ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು
Published On - 6:56 pm, Wed, 25 June 25