ಸುಲಿಗೆಗೆ ನಿಂತ ಕೆಸಿ ಜನರಲ್ ಆಸ್ಪತ್ರೆ ಸಿಬ್ಬಂದಿ: ಲೋಕಾಯುಕ್ತ ದಾಳಿ ವೇಳೆ ಬಯಲಾಯ್ತು ಕರ್ಮಕಾಂಡ

ಕೆ.ಸಿ.ಜನರಲ್ ಆಸ್ಪತ್ರೆಗೆ ದಿಢೀರ್​ ಭೇಟಿ ಕೊಟ್ಟ ಲೋಕಾಯುಕ್ತ ಅಧಿಕಾರಿಗಳು, ಕೆಂಡಾಮಂಡಲರಾಗಿದ್ದಾರೆ. ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಬಗ್ಗೆ ರೋಸಿ ಹೋಗಿದ್ದಾರೆ. ಸರಣಿ ದೂರುಗಳ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿದ ಅವರಿಗೆ ಶಾಕ್ ಕಾದಿತ್ತು.

ಸುಲಿಗೆಗೆ ನಿಂತ ಕೆಸಿ ಜನರಲ್ ಆಸ್ಪತ್ರೆ ಸಿಬ್ಬಂದಿ: ಲೋಕಾಯುಕ್ತ ದಾಳಿ ವೇಳೆ ಬಯಲಾಯ್ತು ಕರ್ಮಕಾಂಡ
ಕೆಸಿ ಜನರಲ್ ಆಸ್ಪತ್ರೆ
Follow us
ರಾಚಪ್ಪಾಜಿ ನಾಯ್ಕ್
| Updated By: Ganapathi Sharma

Updated on: Nov 29, 2024 | 3:05 PM

ಬೆಂಗಳೂರು, ನವೆಂಬರ್ 29: ಕೆಸಿ ಜನರಲ್​ ಆಸ್ಪತ್ರೆಯ ಬಗ್ಗೆ ಸರಣಿ ದೂರುಗಳು ಕೇಳಿಬಂದ ಕಾರಣ ಲೋಕಾಯುಕ್ತ ಅಧಿಕಾರಿಗಳು ಶುಕ್ರವಾರ ದಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ, ರೋಗಿಗಳಿಂದ ದುಡ್ಡು ಸುಲಿಗೆ ಮಾಡುತ್ತಿರುವ ವಿಚಾರ ತಿಳಿದ ಲೋಕಾಯುಕ್ತ ಅಧಿಕಾರಿಗಳು ಕೆಂಡಾಮಂಡಲರಾಗಿದ್ದಾರೆ.

ಸಿಕ್ಕಸಿಕ್ಕದ್ದಕ್ಕೆಲ್ಲಾ ರೋಗಿಗಳಿಂದ ದುಡ್ಡು ಸುಲಿಯುವ ಸಿಬ್ಬಂದಿ ಬಗ್ಗೆ ಜನ ರೋಸಿ ಹೋಗಿದ್ದರು. ಹಿಂದಿನಿಂದಲೂ, ಆಸ್ಪತ್ರೆಯ ಮೇಲೆ ಸರಣಿ ದೂರುಗಳು ಬರುತ್ತಲೇ ಇದ್ದವು. ಈ ಹಿನ್ನೆಲೆ ಲೋಕಾಯುಕ್ತ ನ್ಯಾಯಾಧೀಶರಾದ ಬಿಎಸ್ ಪಾಟೀಲ್, ನ್ಯಾ. ವೀರಪ್ಪ ಮತ್ತು ನ್ಯಾ. ಪಣೀಂದ್ರ ದಿಢೀರ್​ ಆಸ್ಪತ್ರೆಗೆ ದಾಳಿ ನಡೆಸಿದ್ದಾರೆ. ಈ ವೇಳೆ ಲೋಕಾಯುಕ್ತ ಅಧಿಕಾರಿಗಳ ಮುಂದೆ ರೋಗಿಗಳು, ರೋಗಿಗಳ ಕುಟುಂಬಸ್ಥರು ತಮ್ಮ ನೋವು ತೋಡಿಕೊಂಡರು. ನೂರಿನ್ನೂರು ಮುಟ್ಟಲ್ಲ ಸರ್, 500 ರೂಪಾಯಿ ಕೊಡಲೇಬೇಕು. ಇಲ್ಲದಿದ್ದರೆ ತಾಯಿ ಕಾರ್ಡೇ ಕೊಡಲ್ಲ ಅಂತ ಎತ್ತಿಟ್ಟುಕೊಳ್ಳುತ್ತಾರೆ ಸರ್​ ಎಂದು ದೂರು ನೀಡಿದರು.

ಗಲೀಜಾದ ಬೆಡ್​ಗಳು, ಅವ್ಯವಸ್ಥೆಗಳ ಆಗರವಾದ ಆಸ್ಪತ್ರೆ

ಇಷ್ಟೆಲ್ಲಾ ಸುಲಿಗೆಗಳ ನಡುವೆ ಆಸ್ಪತ್ರೆಯ ಸ್ಥಿತಿಯಂತೂ ಶೋಚನೀಯವಾಗಿದೆ. ಐಸಿಯು ಬೆಡ್​​ಗಳು ಧೂಳುಮಯವಾಗಿದೆ. ಐಸಿಯು ಬೆಡ್​​ಗಳನ್ನೆಲ್ಲಾ ಒಂದು ಕಡೆ ಗುಡ್ಡೆ ಹಾಕಿದ್ದಾರೆ. ಕೇಳಿದರೆ ಎಲ್ಲದಕ್ಕೂ ಸಿಬ್ಬಂದಿ ಕೊರತೆ ಸಮಸ್ಯೆ ಇದೆ ಎನ್ನುತ್ತಾರೆ. ಶೌಚಾಲಯಕ್ಕೆ ಕಾಲಿಡುವ ಹಾಗೆಯೇ ಇಲ್ಲ. ಪ್ರಶ್ನೆ ಮಾಡಿದರೆ ಅದಕ್ಕೊಂದು ನೆಪ ಹೇಳುತ್ತಾರೆ ಎಂಬುದು ಲೋಕಾಯುಕ್ತ ಅಧಿಕಾರಿಗಳ ಗಮನಕ್ಕೂ ಬಂತು.

ಸಮಯಕ್ಕೆ ಸರಿಯಾಗಿ ವೈದ್ಯರು ಇರುವುದಿಲ್ಲ. ಚಿಕಿತ್ಸೆ ಸಿಗುವುದಿಲ್ಲ. ಔಷಧಿಗಳ ಕೊರತೆ ಇದೆ. ಲೋಕಾಯುಕ್ತ ನ್ಯಾ. ಬಿಎಸ್ ಪಾಟೀಲ್​ ಅವರೇ ಆಸ್ಪತ್ರೆ ಆಡಳಿತ ವರ್ಗದ ವಿರುದ್ಧ ಆಕ್ರೋಶಿತರಾಗಿದ್ದರು. ಆಸ್ಪತ್ರೆ ಅವ್ಯವಸ್ಥೆ ಆಗರವಾಗಿದೆ. ವೈದ್ಯರು ಸರಿಯಾಗಿ ಬರುತ್ತಿಲ್ಲ. ಐವರು ವೈದ್ಯರಲ್ಲಿ ಓರ್ವ ಮಾತ್ರ ಈವತ್ತು ಲೋಕಾಯುಕ್ತರ ಕಣ್ಣಿಗೆ ಬಿದ್ದಿದ್ದು! ಹೀಗಾಗಿ ಮೇಲಾಧಿಕಾರಿಗಳನ್ನ ಪಾರ್ಟಿ ಮಾಡಿ ದೂರು ದಾಖಲಿಸಿಕೊಳ್ಳಲು ಲೋಕಾಯುಕ್ತರು ಮುಂದಾಗಿದ್ದಾರೆ.

ಇದನ್ನೂ ಓದಿ: ದೇಶಕ್ಕೆ ಮಾರಕವಾಗುವ ತೀರ್ಪುಗಳು ಬರುತ್ತಿವೆ: ನ್ಯಾಯಾಲಯಗಳ ಬಗ್ಗೆ ಯತೀಂದ್ರ ವಿವಾದಾತ್ಮಕ ಹೇಳಿಕೆ

ಹೆರಿಗೆ ಮತ್ತು ಮಕ್ಕಳ ವಾರ್ಡ್​​ಗೆ ಭೇಟಿ ನೀಡಿದ ಉಪಲೋಕಾಯುಕ್ತ ಕೆ.ಎನ್ ಫಣೀಂದ್ರ ಕೂಡ ಆಸ್ಪತ್ರೆ ಅವ್ಯವಸ್ಥೆ ಕಂಡು ಸಿಟ್ಟಾಗಿದ್ದಾರೆ.

ಆಸ್ಪತ್ರೆಯಲ್ಲ ಭೂತಬಂಗಲೆ ರೀತಿ ಇದೆ ಎಂದಿರುವ ನ್ಯಾ. ವೀರಪ್ಪ, ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ದಿಗ್ಭ್ರಾಂತರಾಗಿದ್ದರು. ಮುಂದಾದರೂ ಆಸ್ಪತ್ರೆ ಆಡಳಿತವರ್ಗ ಎಚ್ಚೆತ್ತುಕೊಳ್ಳುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ