
ಬೆಂಗಳೂರು, ಸೆಪ್ಟೆಂಬರ್ 03: ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿ ಐಪಿಎಸ್ ಅಧಿಕಾರಿಯ ಹೆಸರಿನಲ್ಲಿ ಜನರಿಂದ ಹಣ ವಸೂಲಿ ಮಾಡುತ್ತಿದ್ದ ಆರೋಪದಡಿ ರಾಜಸ್ಥಾನದ 17 ವರ್ಷದ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ವಿಭಾಗದ ಡಿಸಿಪಿ ಐಪಿಎಸ್ ಅಧಿಕಾರಿ ನಾರಾಯಣ ಎಂ. ಅವರ ಹೆಸರಿನಲ್ಲಿ ಆರೋಪಿ ನಕಲಿ ಖಾತೆ ಸೃಷ್ಟಿಸಿದ್ದ ಎನ್ನಲಾಗಿದೆ. ಬಂಧಿತನನ್ನು ರಾಜಸ್ಥಾನದ ಕೊಟಕುರ್ದ್ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ.
ನಾರಾಯಣ್ ಅವರ ಭಾವಚಿತ್ರ ಬಳಸಿ ನಕಲಿ ಫೇಸ್‌ಬುಕ್ ಖಾತೆ ಸೃಷ್ಟಿಸಿದ್ದ ಆರೋಪಿ ಅವರ ಪರಿಚಿತರು ಮತ್ತು ಸಾರ್ವಜನಿಕರಿಂದ ಹಣ ವಸೂಲಿಗಿಳಿದಿದ್ದ. ನಕಲಿ ಖಾತೆ ಮೂಲಕ ಕಡಿಮೆ ಬೆಲೆಗೆ ಪೀಠೋಪಕರಣ ಮಾರಾಟ ಆಮಿಷ ಒಡ್ಡುತ್ತಿದ್ದ ಈತ, ತನ್ನ ಸ್ನೇಹಿತ ಸಿಆರ್‌ಪಿಎಫ್ ಕಮಾಂಡೆಂಟ್ ಆಗಿದ್ದಾನೆ. ಅವನ ಬಳಿ ಪೀಠೋಪಕರಣಗಳು ಮತ್ತು ಗೃಹ ಬಳಕೆಯ ವಸ್ತುಗಳು ಇವೆ. ಅವುಗಳನ್ನು ಕಡಿಮೆ ಬೆಲೆ ಖರೀದಿಸಬಹುದು ಎಂದು ನಂಬಿಸಿ ಹಣ ಪಡೆದು ಸಾರ್ವಜನಿಕರಿಗೆ ವಂಚಿಸುತ್ತಿದ್ದ. ಈ ಸಂಬಂಧ ಜುಲೈನಲ್ಲಿ ಸಂತ್ರಸ್ತರೊಬ್ಬರು ನೀಡಿದ ದೂರಿನ ಬಳಿಕ ವಂಚನೆ ಪ್ರಕರಣ ಬೆಳಕಿಗೆ ಬಂದಿತ್ತು.
ಇದನ್ನೂ ಓದಿ: ಬಾಡಿಗೆ ಮನೆಯಲ್ಲಿ ಅಕ್ರಮ ಹುಕ್ಕಾ ಬಾರ್: ಸಾಫ್ಟ್‌ವೇರ್ ಸಂಸ್ಥೆಯ ಹಿರಿಯ ವಿಶ್ಲೇಷಕ ಸೇರಿ ಇಬ್ಬರ ಬಂಧನ!
ಪೊಲೀಸರು ಆರೋಪಿ ಬಾಲಕನಿಂದ 2 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದು, ಈ ಹಣ ನಕಲಿ ಬ್ಯಾಂಕ್ ಖಾತೆಗಳ ಮೂಲಕ ವಂಚಿಸಿ ಸಂಗ್ರಹಿಸಿದ ಮೊತ್ತದ ಭಾಗವೆಂದು ಶಂಕಿಸಲಾಗಿದೆ. ಇನ್ನು ವಿಚಾರಣೆ ವೇಳೆ ಬಾಲಕ ಕೆಲವು ಸಹಚರರೊಂದಿಗೆ ಸೇರಿ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ. ದೇಶದಾದ್ಯಂತ ಹಲವು ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆಗಳನ್ನು ಸೃಷ್ಟಿಸಿ, ಅವರಂತೆ ನಟಿಸುವ ಮೂಲಕ ಜನರಿಂದ ಹಣ ವಸೂಲಿ ಮಾಡುತ್ತಿದ್ದುದಾಗಿ ತಿಳಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹೀಗಾಗಿ ಉಳಿದ ಆರೋಪಿಗಳಿಗಾಗಿಯೂ ಶೋಧ ಮುಂದುವರಿದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.