
ಬೆಂಗಳೂರು, ಜುಲೈ 27: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರ ಕಚೇರಿ ಹಾಗೂ ದೇವನಹಳ್ಳಿಯಲ್ಲಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempegowda International Airport) ಬಾಂಬ್ ಸ್ಫೋಟಿಸುವುದಾಗಿ (Bomb Threat) ಇ-ಮೇಲ್ ಸಂದೇಶ ಬಂದಿದೆ. ಮಾಹಿತಿ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಹಾಗೂ ಬಾಂಬ್ ಪತ್ತೆ ದಳ ಸಿಬ್ಬಂದಿ ಪರಿಶೀಲನೆ ನಡೆಸಿದರು. ಯಾವುದೇ ಬಾಂಬ್ ಪತ್ತೆಯಾಗದ ಹಿನ್ನೆಲೆಯಲ್ಲಿ ಹುಸಿ ಬಾಂಬ್ ಬೆದರಿಕೆ ಸಂದೇಶ ಎಂದು ಗೊತ್ತಾಗಿದೆ. ಬಾಂಬ್ ಬೆದರಿಕೆ ಸಂದೇಶದಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
bhagwanthmann@yandex.com ಮೇಲ್‌ನಿಂದ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಟರ್ಮಿನಲ್ 1, 2ರಲ್ಲಿ ಬಾಂಬ್ ಇಟ್ಟಿದ್ದು ಎಲ್ಲರನ್ನೂ ತೆರವುಗೊಳಿಸಿ. ಏಕಕಾಲದಲ್ಲಿ ಡಿಸಿಎಂ ಕಚೇರಿ, ಏರ್‌ಪೋರ್ಟ್‌ನಲ್ಲಿ ಬ್ಲಾಸ್ಟ್ ಆಗಲಿದೆ ಎಂದು ಮೇಲ್ನಲ್ಲಿ ಬರೆಯಲಾಗಿತ್ತು. ಈ ಸಂಬಂಧ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಫ್‌ಐಆರ್ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕೆಲ ದಿನಗಳ ಹಿಂದೆ ಬೆಂಗಳೂರು ನಗರದ ಆರ್.ಆರ್ ನಗರ, ಕೆಂಗೇರಿ ಸೇರಿದಂತೆ 40 ಖಾಸಗಿ ಶಾಲೆಗಳಿಗೆ (schools) ಕಿಡಿಗೇಡಿಗಳಿಂದ ಬಾಂಬ್ ಬೆದರಿಕೆ ಸಂದೇಶ ಬಂದಿತ್ತು. roadkill333@atomicmail.io ಎಂಬ ಇ-ಮೇಲ್‌ನಿಂದ ಸಂದೇಶ ಬಂದಿತ್ತು. ಶಾಲೆಯ ಸಿಬ್ಬಂದಿ ಕೂಡಲೇ ಪೊಲೀಸರಿಗೆ ಮಾಹಿತಿ ತಿಳಿಸಿದ್ದರು. ಮಾಹಿತಿ ತಿಳಿದು ಶಾಲೆಗೆಳಿಗೆ ಭೇಟಿ ನೀಡಿದ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯದಳ ಸಿಬ್ಬಂದಿ ಮಕ್ಕಳನ್ನು ಹೊರಗೆ ಕಳುಹಿಸಿ ತಪಾಸಣೆ ಮಾಡಿದ್ದರು. ತಪಾಸಣೆ ಬಳಿಕ ಹುಸಿ ಬಾಂಬ್ ಬೆದರಿಕೆ ಸಂದೇಶ ಅಂತ ಗೊತ್ತಾಗಿತ್ತು.
ಇದನ್ನೂ ಓದಿ: ಬೀದರ್ನ ಗುರುದ್ವಾರದಲ್ಲಿ ಬಾಂಬ್ ಸ್ಫೋಟಿಸುವುದಾಗಿ ಕಿಡಿಗೇಡಿಗಳಿಂದ ಬಂತು ಬೆದರಿಕೆ ಸಂದೇಶ!
ಇತ್ತೀಚೆಗೆ ಕರ್ನಾಟಕದಲ್ಲಿ ಬಾಂಬ್ ಬೆದರಿಕೆ ಪ್ರಕರಣಗಳು ಹೆಚ್ಚಾಗಿವೆ. ತಿಂಗಳ ಹಿಂದೆ ಬೆಂಗಳೂರು ವಿಮಾನ ನಿಲ್ದಾಣದಿಂದ ಹೊರಡಲಿದ್ದ ಇಂಡಿಗೋ ವಿಮಾನಕ್ಕೆ ಬೆದರಿಕೆ ಸಂದೇಶ ಬಂದಿತ್ತು. ಅದಾದ ಕೆಲವು ದಿನಗಳ ನಂತರ ವಿಮಾನ ನಿಲ್ದಾಣಕ್ಕೂ ಬಾಂಬ್ ಬೆದರಿಕೆ ಬಂದಿತ್ತು. ಬೆಂಗಳೂರಿನ, ಹಾಸನದ, ಉಡುಪಿಯ ಕೆಲವು ಶಾಲೆಗಳಿಗೂ ಬೆದರಿಕೆ ಸಂದೇಶ ಬಂದಿತ್ತು.
Published On - 7:17 pm, Sun, 27 July 25