ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯಲು ಒತ್ತಾಯಿಸಿ ರೈತರಿಂದ ಪ್ರತಿಭಟನೆ
ಪೊಲೀಸರು ಮತ್ತು ರೈತರ ನಡುವೆ ತಳ್ಳಾಟ ನೂಕಾಟ ನಡೆಯಿತು. ಬ್ಯಾರಿಕೇಡ್ ಎದುರು ಕುಳಿತ ರೈತರು ಪ್ರತಿಭಟನೆ ನಡೆಸಿದರು.
ಬೆಂಗಳೂರು: ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಿ ರೈತರು ನಗರದಲ್ಲಿ ಸೋಮವಾರ (ಫೆ.14) ಪ್ರತಿಭಟನಾ ಮೆರವಣಿಗೆ ನಡೆಸಿದರು. ಬ್ಯಾರಿಕೇಡ್ ಹಾಕಿ ರೈತರನ್ನು ತಡೆಯಲು ಸಿದ್ಧತೆ ಮಾಡಿಕೊಂಡಿದ್ದ ಪೊಲೀಸರು ಫ್ರೀಡಂಪಾರ್ಕ್ ಬಳಿ ರೈತರನ್ನು ತಡೆಯಲು ಯತ್ನಿಸಿದರು. ಈ ವೇಳೆ ಪೊಲೀಸರು ಮತ್ತು ರೈತರ ನಡುವೆ ತಳ್ಳಾಟ ನೂಕಾಟ ನಡೆಯಿತು. ಬ್ಯಾರಿಕೇಡ್ ಎದುರು ಕುಳಿತ ರೈತರು ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಬಂದ ವೆಸ್ಟ್ ಡಿಸಿಪಿ ಡಾ.ಸಂಜೀವ್ ಪಾಟೀಲ್ ರೈತರೊಂದಿಗೆ ಮಾತನಾಡಲು ಯತ್ನಿಸಿದರು.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ರೈತರು ಜಾಥಾದಲ್ಲಿ ನಡೆದು ಬಂದರು. ರಾಯಣ್ಣ ಸರ್ಕಲ್ ಬಳಿ ರೈತರು ರಸ್ತೆ ಮೇಲೆ ಕುಳಿತ ಕಾರಣ ಟ್ರಾಫಿಕ್ ಜಾಮ್ ಆಯಿತು. ರೈತರು ರಾಯಣ್ಣ ಫ್ಲೈ ಓವರ್ ಮೇಲೆ ಕುಳಿತು ಪ್ರತಿಭಟನೆ ಮುಂದುವರಿಸುತ್ತಿದ್ದಾರೆ.
ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಒಂದು ವರ್ಷಕ್ಕೂ ಹೆಚ್ಚಿನ ಕಾಲ ರೈತರು ಪ್ರತಿಭಟನೆ ನಡೆಸಿ, ಸತತ ಒತ್ತಡ ಹೇರಿದ್ದರಿಂದ ಪ್ರಧಾನಿ ಕೃಷಿ ಕಾಯ್ದೆಗಳನ್ನು ರದ್ದುಪಡಿಸಲು ನಿರ್ಧರಿಸಿದರು. ಆದರೆ ರಾಜ್ಯ ಸರ್ಕಾರ ಕಾಯ್ದೆಗಳನ್ನು ರದ್ದುಗೊಳಿಸಲು ಹಿಂದೇಟು ಹಾಕುವುದು ಮುಂದುವರಿದಿದೆ. ಈ ಸಂಬಂಧ ಹಲವು ಸಲ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿಯೂ ಈ ಸಂಬಂಧ ಹೋರಾಟ ನಡೆಸಿ ಒತ್ತಾಯಿಸಲಾಗಿತ್ತು. ಆದರೆ, ಸರ್ಕಾರ ನಮ್ಮ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿಲ್ಲ. ಬಜೆಟ್ ಅಧಿವೇಶನ ನಡೆಯಲಿರುವ ಹಿನ್ನೆಲೆಯಲ್ಲಿ ಸರ್ಕಾರದ ಗಮನ ಸೆಳೆಯಲು ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.
ಕರ್ನಾಟಕ ಸರ್ಕಾರವು ರಾಜ್ಯಪಾಲರಿಗೆ ಕಳುಹಿಸಿರುವ ಬಜೆಟ್ ಟಿಪ್ಪಣಿಯಲ್ಲಿ ಕೃಷಿ ಕಾಯ್ದೆ ರದ್ದುಗೊಳಿಸುವ ವಿಚಾರವನ್ನು ಕೈಬಿಟ್ಟಿದೆ ಎನ್ನುವ ಮಾಹಿತಿ ಇದೆ. ಸರ್ಕಾರವು ಹಟಮಾರಿ ಹಾಗೂ ವಿಳಂಬ ಧೋರಣೆ ಅನುಸರಿಸುತ್ತಿದೆ. ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಿದ್ದಾಗ ತರಾತುರಿಯಲ್ಲಿ ಕಾಯ್ದೆ ಜಾರಿಗೆ ತಂದಿದ್ದರು. ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಯ್ದೆಗಳನ್ನು ರದ್ದುಗೊಳಿಸಬೇಕಿದೆ. ಅವರೂ ಕಾಳಜಿ ವಹಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸರ್ಕಾರ ಪ್ರತಿ ರೈತರಿಂದ 40 ಕ್ವಿಂಟಲ್ ಭತ್ತ ಖರೀದಿ ಮಾಡುತ್ತಿದೆ. ಆದರೆ, ಈ ಮಿತಿ ತೆಗೆದು ಹಾಕಬೇಕು. ಸಣ್ಣ ರೈತ ಕೂಡ ಕನಿಷ್ಠ 200ರಿಂದ 250 ಕ್ವಿಂಟಲ್ ಭತ್ತ ಬೆಳೆಯುತ್ತಾನೆ. 40 ಕ್ವಿಂಟಲ್ ಖರೀದಿಸಿದರೆ ಮಿಕ್ಕುಳಿದದ್ದನ್ನು ಯಾರಿಗೆ ಮಾರಲು ಸಾಧ್ಯ? ರಾಗಿ ಖರೀದಿ ವಿಚಾರದಲ್ಲಿಯೂ ಮಿತಿ ವಿಧಿಸಲಾಗಿದೆ. ಇದನ್ನೂ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು. ಆಹಾದ ಧಾನ್ಯಗಳ ಖರೀದಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು. ಅದಕ್ಕಿಂತ ಕಡಿಮೆ ದರದಲ್ಲಿ ಖರೀದಿಸುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.
ಕೃಷಿ ಕಾಯ್ದೆ ಹಿಂಪಡೆಯಲಿ: ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹ
ಕೇಂದ್ರ ಸರ್ಕಾರವು ಈಗಾಗಲೇ ಕೃಷಿ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆದಿದೆ. ಅದೇ ರೀತಿ ರಾಜ್ಯ ಸರ್ಕಾರವೂ ಕೃಷಿ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕು ಎಂದು ರೈತ ಸಂಘದ ನಾಯಕರಾದ ಕೋಡಿಹಳ್ಳಿ ಚಂದ್ರಶೇಖರ್ ಒತ್ತಾಯಿಸಿದರು. ರಾಜ್ಯ ಸರ್ಕಾರ ನಮ್ಮ ಮಾತು ಕೇಳದಿದ್ದರೆ ಅನಿರ್ದಿಷ್ಟಾವಧಿ ಪ್ರತಿಭಟನೆ ಮಾಡುತ್ತೇವೆ. ಫ್ರೀಡಂಪಾರ್ಕ್‌ನಿಂದ ಯಾವೊಬ್ಬ ರೈತನೂ ವಾಪಸ್ ಮನೆಗೆ ಹೋಗುವುದಿಲ್ಲ ಎಂದು ತಿಳಿಸಿದರು.
ಸಚಿವರು ಪ್ರತಿಭಟನೆ ವಾಪಸ್ ಪಡೆಯಿರಿ ಎಂದು ಹೇಳಿದರು. ಆದರೆ ರೈತರು ಪದೇಪದೆ ಬೆಂಗಳೂರಿಗೆ ಬಂದು ಕೂತು ಪ್ರತಿಭಟನೆ ಮಾಡಲು ಆಗುವುದಿಲ್ಲ. ಅಧಿವೇಶನದ ನಂತರ ಮೀಟಿಂಗ್ ಮಾಡುತ್ತೇವೆ ಎನ್ನುತ್ತಾರೆ. ಕೃಷಿ ಕಾಯ್ದೆ ಹಿಂಪಡೆಯುವ ಕುರಿತು ಸರ್ಕಾರದ ನಿಲುವು ಏನು ಎಂಬುದು ನಮಗೆ ಸ್ಪಷ್ಟವಾಗಿ ಗೊತ್ತಾಗಬೇಕು. ಭಾರತ ಸರ್ಕಾರ ಮಾತುಕತೆಗೆ ಕರೆಯದೇ ಕೃಷಿ ಮಸೂದೆ ವಾಪಾಸ್ ಪಡೆದಿದೆ. ರಾಜ್ಯ ಸರ್ಕಾರವು ಹಾಗೆಯೇ ಮಾಡಲಿ ಎಂದು ಆಗ್ರಹಿಸಿದರು.
ಸರ್ಕಾರ ಯಾವಾಗ ಕೃಷಿ ಕಾಯ್ದೆ ವಾಪಾಸ್ ಪಡೆಯಲಿದೆ ಎಂದು ದಿನಾಂಕ ನಿಗದಿ ಮಾಡಲಿ. ಇಲ್ಲದಿದ್ದರೆ ಅನಿರ್ದಿಷ್ಟಾವಧಿ ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಸಿದರು.
ಸಿಎಂ ಜೊತೆ ಚರ್ಚಿಸುತ್ತೇನೆ: ಸಚಿವ ಗೋಪಾಲಯ್ಯ
ಕೇಂದ್ರ ಸರ್ಕಾರವು 13 ತಿಂಗಳ ಬಳಿಕ ಕೃಷಿ ಕಾಯ್ದೆಯನ್ನು ಹಿಂಪಡೆದಿದೆ. ರಾಜ್ಯದಲ್ಲೂ ಕಾಯ್ದೆಯನ್ನು ಹಿಂಪಡೆಯಲು ರೈತರು ಆಗ್ರಹಿಸುತ್ತಿದ್ದಾರೆ. ನಾನು ಈ ಕುರಿತು ಮುಖ್ಯಮಂತ್ರಿ ಜೊತೆಗೆ ಮಾತಮಾಡಿ ರೈತರ ಅಹವಾಲನ್ನು ಅವರ ಗಮನಕ್ಕೆ ತರುತ್ತೇನೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ರೈತ ಸಂಘದ ಅಧ್ಯಕ್ಷರ ಜೊತೆಗೆ ಮುಖ್ಯಮಂತ್ರಿ ಸಭೆ ನಡೆಸಲು ಕ್ರಮ ವಹಿಸುತ್ತೇನೆ ಎಂದು ಅಬಕಾರಿ ಸಚಿವ ಗೋಪಾಲಯ್ಯ ಹೇಳಿದರು. ಕೇವಲ ಪ್ರತಿಭಟನೆಯಿಂದ ಯಾವುದೇ ಸಮಸ್ಯೆ ಪರಿಹಾರವಾಗುವುದಿಲ್ಲ. ಹೀಗಾಗಿ ಮಾತುಕತೆ ನಡೆಸೋಣ ಅಂತ ಹೇಳಿದ್ದೇನೆ. ಇವತ್ತೇ ಅಧಿವೇಶನದ ಕೊನೆಯ ದಿನ ಅಲ್ಲ, ಇನ್ನೂ ಅಧಿವೇಶನ ನಡೆಯಲಿದೆ. ರೈತರ ಸಮಸ್ಯೆ ಪರಿಹರಿಸಲಾಗುವುದು ಎಂದರು.
ಇದನ್ನೂ ಓದಿ: ರೈತರ ಪ್ರತಿಭಟನೆ ಅಂತ್ಯ: ಡಿಜೆ, ಹಾಡು ಕುಣಿತಗಳೊಂದಿಗೆ ಹರ್ಯಾಣ ,ಪಂಜಾಬ್ಗೆ ರೈತರ ಮೆರವಣಿಗೆ ಇದನ್ನೂ ಓದಿ: ದೆಹಲಿಯಲ್ಲೂ ಹಿಜಾಬ್ ವಿವಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ, ಕರ್ನಾಟಕ ಭವನಕ್ಕೆ ಬಿಗಿ ಭದ್ರತೆ
Published On - 3:30 pm, Mon, 14 February 22