ಬೆಂಗಳೂರನ್ನೂ ನಡುಗಿಸುತ್ತಿದೆ ಫೆಂಗಲ್, ಎಡೆಬಿಡದೇ ಸುರಿಯುತ್ತಿದೆ ಮಳೆ: ಕರ್ನಾಟಕದಾದ್ಯಂತ ಚಂಡಮಾರುತ ಪ್ರಭಾವ

ನೆರೆಯ ತಮಿಳುನಾಡಿನಲ್ಲಿ ಫೆಂಗಲ್ ಚಂಡಮಾರುತ ಅವಾಂತರಗಳನ್ನೇ ಸೃಷ್ಟಿಸಿದೆ. ಇದರ ಪರಿಣಾಮ ಕರ್ನಾಟಕದ ಮೇಲೂ ತಟ್ಟಿದೆ. ಬೆಂಗಳೂರಿನಲ್ಲಿ ಭಾನವಾರ ಇಡೀ ದಿನ ಜಿಟಿಜಿಟಿ ಮಳೆಯಾಗಿದ್ದು, ರಾತ್ರಿ ಇಡೀ ಮಳೆ ಸುರಿದಿದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಅತ್ತ ಕೇರಳಕ್ಕೆ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.

ಬೆಂಗಳೂರನ್ನೂ ನಡುಗಿಸುತ್ತಿದೆ ಫೆಂಗಲ್, ಎಡೆಬಿಡದೇ ಸುರಿಯುತ್ತಿದೆ ಮಳೆ: ಕರ್ನಾಟಕದಾದ್ಯಂತ ಚಂಡಮಾರುತ ಪ್ರಭಾವ
ಬೆಂಗಳೂರಿನಲ್ಲಿ ಭಾನುವಾರ ಸುರಿದ ಮಳೆ

Updated on: Dec 02, 2024 | 6:55 AM

ಬೆಂಗಳೂರು, ಡಿಸೆಂಬರ್ 2: ಫೆಂಗಲ್ ಚಂಡಮಾರುತ ತಮಿಳುನಾಡು, ಪುದುಚೇರಿ, ಆಂಧ್ರ ಪ್ರದೇಶಗಳಲ್ಲಿ ತಲ್ಲಣ ಸೃಷ್ಟಿಸಿದೆ. ನೆರೆಯ ರಾಜ್ಯಕ್ಕೆ ಅಪ್ಪಳಿಸಿರುವ ಚಂಡಮಾರುತದ ಪರಿಣಾಮ ಬೆಂಗಳೂರಿಗೂ ತಟ್ಟಿದೆ. ಕಳೆದ ಮೂರು ದಿನಗಳಿಂದ ಮೋಡ ಕವಿದ ವಾತಾವರಣ ಇದ್ದು, ಭಾನುವಾರ ಇಡೀ ದಿನ ಮಳೆ ಸುರಿದಿದೆ. ಭಾನುವಾರ ಮಧ್ಯಾಹ್ನದ ನಂತರವಂತೂ ಬಿಡುವುಕೊಡದೇ ಮಳೆ ಸುರಿದಿದ್ದು, ಸೋಮವಾರ ಮುಂಜಾನೆಯೂ ಮಳೆಯಾಗುತ್ತಿದೆ.

ಬೆಂಗಳೂರು ನಗರದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಇಲ್ಲ

ಫೆಂಗಲ್ ಸೈಕ್ಲೋನ್​ ಪರಿಣಾಮ ಕೋಲಾರ, ಚಿಕ್ಕಬಳ್ಳಾಪುರದಲ್ಲೂ ಮಳೆಯಾಗುತ್ತಿದೆ. ಶೀತಗಾಳಿ ಬೀಸುತ್ತಿದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಕೋಲಾರ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. ಹಾಗೇ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಶಾಲೆ, ಕಾಲೇಜುಗಳಿಗೆ ಇಂದು ರಜೆ ಪ್ರಕಟಿಸಲಾಗಿದೆ. ಆದರೆ, ಬೆಂಗಳೂರಿನಲ್ಲಿ ಶಾಲಾ ಕಾಲೇಜುಗಳು ರಜೆ ಘೋಷಣೆ ಮಾಡಿಲ್ಲ. ಎಂದಿನಂತೆ ತರಗತಿಗಳು ನಡೆಯಲಿವೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಡಿಸಿ ಜಗದೀಶ್ ಸ್ಪಷ್ಟನೆ ನೀಡಿದ್ದಾರೆ. ಆದರೆ ಪೋಷಕರು ಎಚ್ಚರಿಕೆಯಿಂದ ಮಕ್ಕಳನ್ನ ಶಾಲೆಗೆ ಕಳುಹಿಸುವಂತೆ ಸೂಚಿಸಿದ್ದಾರೆ.

ದಕ್ಷಿಣ ಕನ್ನಡ, ಉಡುಪಿಯಲ್ಲಿ ಕಡಲಬ್ಬರ

ಸೈಕ್ಲೋನ್​​ನಿಂದಾಗಿ ಮಂಗಳೂರು ಸಮುದ್ರ ತೀರದಲ್ಲಿ ಅಲೆಗಳ ಆರ್ಭಟ ಜೋರಾಗಿದೆ. ಪಣಂಬೂರು, ಉಳ್ಳಾಲ, ಸೋಮೇಶ್ವರ ಬೀಚ್​ಗಳಲ್ಲಿ ದೊಡ್ಡ ದೊಡ್ಡ ಅಲೆಗಳು ಏಳುತ್ತಿವೆ. ಉಡುಪಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಕಡಲಲ್ಲಿ ಬೃಹತ್ ಅಲೆಗಳು ಏಳುತ್ತಿದ್ದರೂ ಮಲ್ಪೆ ಬೀಚ್​​ನಲ್ಲಿ ಪ್ರವಾಸಿಗರು ಸಮುದ್ರಕ್ಕೆ ಇಳಿದು ಜೀವದ ಜೊತೆ ಚೆಲ್ಲಾಟವಾಡುತ್ತಿರುವುದು ಕಾಣಿಸಿದೆ.

ಚಿಕ್ಕಮಗಳೂರಿನಲ್ಲಿ ಥಂಡಿ ಚಳಿಗೆ ಮಲೆನಾಡಿಗರು ಹೈರಾಣಾಗಿದ್ದಾರೆ. ಮತ್ತೊಂದೆಡೆ ಬಿಸಿಲನಾಡು ವಿಜಯಪುರದಲ್ಲೂ ಶೀತಗಾಳಿ ಬೀಸುತ್ತಿದೆ. ದ್ರಾಕ್ಷಿ ಬೆಳೆಗೆ ಕಂಟಕವಾಗಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಚೆನ್ನೈನಲ್ಲಿ ನೆರೆ ಪರಿಸ್ಥಿತಿ

ಶ್ರೀಲಂಕಾದಲ್ಲಿ ಭೀತಿ ಸೃಷ್ಟಿಸಿದ್ದ ಫೆಂಗಲ್ ಚಂಡಮಾರುತ ತಮಿಳುನಾಡನ್ನು ಬೆಚ್ಚಿಬೀಳಿಸಿದೆ. ತಮಿಳುನಾಡು ಹಾಗೂ ಕೇಂದ್ರಾಡಳಿತ ಪ್ರದೇಶ ಪುದುಚೆರಿ ಕರಾವಳಿಗೆ ಸೈಕ್ಲೋನ್ ಅಪ್ಪಳಿಸಿದೆ. ಚಂಡಮಾರುತ ಬಂದಪ್ಪಳಿಸಿದ್ದಕ್ಕೆ ಭಾರೀ ಮಳೆಯಾಗಿದ್ದು, ಮಹಾನಗರ ಚೆನ್ನೈಯಲ್ಲಿ ನೆರೆ ಸೃಷ್ಟಿಯಾಗಿದೆ.

ಪುದುಚೇರಿ ಬಹುತೇಕ ಜಲಾವೃತ: ಶಾಲಾ-ಕಾಲೇಜುಗಳಿಗೆ ರಜೆ

ಕೇಂದ್ರಾಡಳಿತ ಪ್ರದೇಶ ಪುದುಚೇರಿಯ ಬಹುತೇಕ ಪ್ರದೇಶಗಳು ಜಲಾವೃತಗೊಂಡಿವೆ. ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಆಂಧ್ರದಲ್ಲೂ ಚಂಡಮಾರುತವೂ ಮಳೆ ಸುರಿಸಿದೆ. ತಿರುಮಲದಲ್ಲಿ ದಟ್ಟ ಮಂಜು ಆವರಿಸಿತ್ತು. ರಾಯಲಸೀಮಾ, ಕಡಪ, ನೆಲ್ಲೂರು, ಚಿತ್ತೂರು ಜಿಲ್ಲೆಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ.

ಇದನ್ನೂ ಓದಿ: ಫೆಂಗಲ್ ಚಂಡಮಾರುತ: ಯಾವೆಲ್ಲಾ ಶಾಲಾ-ಕಾಲೇಜುಗಳಿಗೆ ರಜೆ, ಇಲ್ಲಿದೆ ಮಾಹಿತಿ

ಫೆಂಗಲ್ ಸೈಕ್ಲೋನ್ ಎಫೆಕ್ಟ್ ಕೇರಳಕ್ಕೂ ತಟ್ಟಿದೆ. ಇವತ್ತು ವಯನಾಡು, ಮಲಪ್ಪುರಂ, ಕೋಯಿಕ್ಕೋಡ್ ಹಾಗೂ ಕಣ್ಣೂರು ಜಿಲ್ಲೆಗಳಲ್ಲಿ ರೆಡ್‌ ಅಲರ್ಟ್ ಘೋಷಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Follow Us