ಭ್ರೂಣ ಹತ್ಯೆ ಪ್ರಕರಣ: ಮಾತ್ರೆ ಕೊಟ್ಟು ಡೆಲಿವರಿ ರೀತಿಯಲ್ಲಿ ಭ್ರೂಣ ಹೊರ ತೆಗೆಯುತ್ತಿದ್ದ ಆರೋಪಿಗಳು
ಬೆಂಗಳೂರಿನ ಬೈಯಪ್ಪನಹಳ್ಳಿ ಪೊಲೀಸರು ಭ್ರೂಣ ಪತ್ತೆ ಪ್ರಕರಣವನ್ನು ಬೇಧಿಸಿದ್ದರು. ಪ್ರಕರಣ ಸಂಬಂಧ 10 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಪ್ರಕರಣವನ್ನು ಸಿಐಡಿಗೆ ವಹಿಸಲು ಸಿದ್ಧತೆಗಳನ್ನು ನಡೆಸಲಾಗುತ್ತಿದೆ. ಈ ನಡುವೆ ನಡೆದ ತನಿಖೆ ವೇಳೆ ಆರೋಪಿಗಳು ಬಾಯಿಬಿಟ್ಟ ಮಾಹಿತಿ ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ.
ಬೆಂಗಳೂರು, ಡಿ.2: ಭ್ರೂಣ ಹತ್ಯೆ ಪ್ರಕರಣ (Feticide Case) ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಆರೋಪಿಗಳು ಹೊರಹಾಕಿದ ಮಾಹಿತಿ ತಿಳಿದು ಶಾಕ್ ಆಗಿದ್ದಾರೆ. ಆರು ತಿಂಗಳ ಗರ್ಭಿಣಿಗೆ ಮಾತ್ರೆಯೊಂದನ್ನು ಕೊಟ್ಟು ಬಳಿಕ ಡೆಲಿವರಿ ಮಾದರಿಯಲ್ಲಿ ಆರೋಪಿಗಳು ಭ್ರೂಣವನ್ನು ಹೊರಗೆ ತೆಗೆಯುತ್ತಿದ್ದರು ಎನ್ನುವ ವಿಚಾರ ತಿಳಿದುಬಂದಿದೆ.
ಸಾಮಾನ್ಯವಾಗಿ 14 ರಿಂದ 18 ವಾರಗಳ ಭ್ರೂಣದಲ್ಲಿ ಲಿಂಗ ಪತ್ತೆಯಾಗತ್ತದೆ. ಸ್ಕ್ಯಾನಿಂಗ್ ವೇಳೆ ಲಿಂಗ ಪತ್ತೆಯಾದ ನಂತರ ಭ್ರೂಣ ಹತ್ಯೆ ಮಾಡಲಾಗುತ್ತಿತ್ತು. ಆರು ತಿಂಗಳ ಭ್ರೂಣಗಳನ್ನು ಹತ್ಯೆ ಮಾಡಿರುವ ಅರೋಪಿಗಳು, ಆರಂಭದಲ್ಲಿ ಗರ್ಭಿಣಿಗೆ ಬ್ಲಡ್ ಚೆಕ್ ಮಾಡುತ್ತಿದ್ದರು.
ಇದನ್ನೂ ಓದಿ: ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ಕೇಸ್: ಮತ್ತೋರ್ವ ಆರೋಪಿ ಅರೆಸ್ಟ್, ಪ್ರಕರಣ ಸಿಐಡಿಗೆ ವರ್ಗಾವಣೆ
ರಕ್ತದ ಪರೀಕ್ಷೆ ಮಾಡಿದ ನಂತರ ಅಸ್ಪತ್ರೆಯಲ್ಲಿ ಮಂಜುಳಾ ಹಾಗೂ ಚಂದನ್ ಕೆಲಸ ಶುರು ಮಾಡುತ್ತಿದ್ದರು. ಗರ್ಭಿಣಿಗೆ ಮಾತ್ರೆಯೊಂದನ್ನು ನೀಡುತ್ತಿದ್ದರು. ಮಾತ್ರೆ ತೆಗೆದುಕೊಂಡ ಕೆಲ ಸಮಯದ ನಂತರ ಗರ್ಭಿಣಿಗೆ ರಕ್ತ ಸ್ರಾವವಾಗಿ ಭ್ರೂಣ ಹೊರ ಬರುತ್ತಿತ್ತು. ಈ ವೇಳೆ ಚಂದನ್ ಮತ್ತು ಮಂಜುಳಾ ಡೆಲಿವರಿ ಮಾಡಿಸಿದ ರೀತಿಯಲ್ಲಿ ಭ್ರೂಣ ಹೊರ ತೆಗೆಯುತಿದ್ದರು.
ಏನಿದು ಪ್ರಕರಣ?
ಅಕ್ಟೋಬರ್ನಲ್ಲಿ ಭ್ರೂಣ ಹತ್ಯೆ ಸಂಬಂಧ ಬೈಯಪ್ಪನಹಳ್ಳಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದರು. ತನಿಖೆ ವೇಳೆ ಬೃಹತ್ ಜಾಲ ಇರುವುದು ಪತ್ತೆಯಾಗಿದೆ. ಅದರಂತೆ ವೈದ್ಯರು ಸೇರಿದಂತೆ 10 ಆರೋಪಿಗಳನ್ನು ಬಂಧಿಸಿ ತನಿಖೆ ಕೈಗೊಂಡಾಗ ಎರಡು ವರ್ಷಗಳಲ್ಲಿ 900ಕ್ಕೂ ಹೆಚ್ಚು ಭ್ರೂಣ ಹತ್ಯೆ ಮಾಡಿದ ಆಘಾತಕಾರಿ ವಿಚಾರ ಬಹಿರಂಗವಾಗಿತ್ತು.
ಅಲ್ಲದೆ, ಮಂಡ್ಯ ಮೂಲದ ನಾಲ್ವರು ವ್ಯಕ್ತಿಗಳು ಬೆಂಗಳೂರಿನ ಆಸ್ಪತ್ರೆಗಳಿಗೆ ಭ್ರೂಣ ಪತ್ತೆಗೆ ಬರುವವರ ಮಾಹಿತಿ ಕಲೆಹಾಕಿದ್ದರು. ಬಳಿಕ ಮಧ್ಯವರ್ತಿಗಳ ಸಹಾಯದಿಂದ ಮಂಡ್ಯ ತಾಲೂಕಿನ ಹುಲ್ಲೇನಹಳ್ಳಿ ಹಾಡ್ಯದಲ್ಲಿರುವ ಆಲೆಮನೆಗೆ ಗರ್ಭಿಣಿಯರನ್ನು ಕರೆಸಿಕೊಂಡು ಲಿಂಗ ಪತ್ತೆಮಾಡಿ ಹತ್ಯೆ ಮಾಡುತ್ತಿರುವ ವಿಚಾರವೂ ಬೆಳಕಿಗೆ ಬಂದಿತ್ತು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ