ವಿರಾಟ್ ಕೊಹ್ಲಿ ಮಾಲೀಕತ್ವದ ಒನ್ 8 ಕಮ್ಯೂನ್ ಪಬ್ ವಿರುದ್ಧ ಬೆಂಗಳೂರಿನಲ್ಲಿ ಎಫ್ಐಆರ್
ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಮಾಲೀಕತ್ವದ, ಬೆಂಗಳೂರಿನಲ್ಲಿರುವ ಒನ್ 8 ಕಮ್ಯೂನ್ ವಿರುದ್ಧ ಮತ್ತೆ ಎಫ್ಐಆರ್ ದಾಖಲಾಗಿದೆ. ಕಳೆದ ವರ್ಷ ಜುಲೈನಲ್ಲಿ ಅವಧಿ ಮೀರಿ ಕಾರ್ಯನಿರ್ವಹಿಸುತ್ತಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು. ಇದೀಗ ಕೋಟ್ಪಾ ಆ್ಯಕ್ಟ್ ಅಡಿ ಕೇಸ್ ದಾಖಲಾಗಿದೆ. ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.

ಬೆಂಗಳೂರು, ಜೂನ್ 2: ಟೀಮ್ ಇಂಡಿಯಾ (Team India) ಕ್ರಿಕೆಟಿಗ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪ್ರಮುಖ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಮಾಲೀಕತ್ವದ ಪಬ್ ವಿರುದ್ಧ ಬೆಂಗಳೂರಿನಲ್ಲಿ ಎಫ್ಐಆರ್ ದಾಖಲಾಗಿದೆ. ನಿಯಮಗಳನ್ನು ಉಲ್ಲಂಘಿಸಿ ಕಾರ್ಯನಿರ್ವಹಿಸಿದ್ದ ಆರೋಪದಲ್ಲಿ ಬೆಂಗಳೂರಿನ ಕಸ್ತೂರ್ ಬಾ ರಸ್ತೆಯಲ್ಲಿರುವ ‘ದ ಒನ್ 8 ಕಮ್ಯೂನ್’ ಪಬ್ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳು (ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ, ಉತ್ಪಾದನೆ, ಸರಬರಾಜು ಮತ್ತು ವಿತರಣೆಯ ನಿಯಂತ್ರಣ) ಕಾಯ್ದೆ (COTPA Act) ಅಡಿ ಪ್ರಕರಣ ದಾಖಲಿಸಲಾಗಿದೆ.
ವಿರಾಟ್ ಕೊಹ್ಲಿ ಮಾಲೀಕತ್ವದ ಪಬ್ ಮೇಲೆ ಪ್ರಕರಣ ದಾಖಲಿಸಲು ಕಾರಣವೇನು?
ಪ್ರತ್ಯೇಕ ಸ್ಥಳ ಮೀಸಲಿಡದೆ ಧೂಮಪಾನಕ್ಕೆ ಅವಕಾಶ ನೀಡಿದ್ದಕ್ಕಾಗಿ ಬಾರ್ ಆ್ಯಂಡ್ ರೆಸ್ಟೋರೆಂಟ್ ಮ್ಯಾನೇಜರ್, ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮೇ 29 ರಂದು ದಾಳಿ ಮಾಡಿದ್ದ ಪೊಲೀಸರು ಎನ್ಸಿಆರ್ ದಾಖಲಿಸಿಕೊಂಡಿದ್ದರು. ನಂತರ, ನ್ಯಾಯಾಲಯದಿಂದ ಅನುಮತಿ ಪಡೆದು ಇದೀಗ ಕೇಸ್ ದಾಖಲಿಸಿದ್ದಾರೆ.
ಕೊಹ್ಲಿ ಪಬ್ ಮೇಲೆ ಪ್ರಕರಣ ದಾಖಲು ಇದೇ ಮೊದಲಲ್ಲ
ಅವಧಿ ಮೀರಿ ಪಬ್ ನಡೆಸುತ್ತಿದ್ದ ಆರೋಪದಲ್ಲಿ ಈ ಹಿಂದೆ ಕೂಡ ವಿರಾಟ್ ಕೊಹ್ಲಿ ಮಾಲೀಕತ್ವದ ಪಬ್ ಮೇಲೆ ಕೇಸ್ ದಾಖಲಾಗಿತ್ತು. 2024ರ ಜುಲೈನಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದರು. ಈಗ ಮತ್ತೆ ಸ್ವಯಂಪ್ರೇರಿತವಾಗಿ ಎಫ್ಐಆರ್ ದಾಖಲಿಸಿದ್ದಾರೆ.
2024ರ ಡಿಸೆಂಬರ್ನಲ್ಲಿ ಇದೇ ಪಬ್ಗೆ ಬಿಬಿಎಂಪಿ ಕೂಡ ನೋಟಿಸ್ ನೀಡಿತ್ತು. ಸುರಕ್ಷತಾ ಕ್ರಮಗಳನ್ನು ಅಳವಡಿಸಿಲ್ಲ. ಅಗ್ನಿ ಸುರಕ್ಷತಾ ಕ್ರಮ ಅಳವಡಿಸಿಲ್ಲ ಮತ್ತು ಅಗ್ನಿಶಾಮಕ ದಳದ ಪ್ರಮಾಣಪತ್ರ ಪಡೆದಿಲ್ಲ ಎಂಬ ಆರೋಪದಲ್ಲಿ ನೋಟಿಸ್ ನೀಡಲಾಗಿತ್ತು. ಸಾಮಾಜಿಕ ಕಾರ್ಯಕರ್ತರೊಬ್ಬರು ನೀಡಿದ್ದ ದೂರಿನ ಆಧಾರದಲ್ಲಿ ಬಿಬಿಎಂಪಿ ಈ ಕ್ರಮ ಕೈಗೊಂಡಿತ್ತು.
ಇದನ್ನೂ ಓದಿ: VIDEO: ಇದೆಂಥ ಕೀಳುಮಟ್ಟದ ವರ್ತನೆ… ವಿರಾಟ್ ಕೊಹ್ಲಿ ವಿರುದ್ಧ ಆಕ್ರೋಶ
ವಿರಾಟ್ ಕೊಹ್ಲಿ ಸದ್ಯ ಐಪಿಎಲ್ ಟೂರ್ನಿಯಲ್ಲಿ ವ್ಯಸ್ತರಾಗಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸದ್ಯ ಐಪಿಎಲ್ ಫೈನಲ್ ಪ್ರವೇಶಿಸಿದ್ದು, ಮಂಗಳವಾರ ರಾತ್ರಿ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಅನ್ನು ಎದುರಿಸಲಿದೆ.
ವರದಿ: ವಿಕಾಸ್, ‘ಟಿವಿ9’ ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








