ಇಂದಿರಾ ಕ್ಯಾಂಟೀನ್​​ಗಳ ಅಡುಗೆ ಮನೆಗಳ ಮೇಲೆ ದಾಳಿ: ಇಲಿ, ಹೆಗ್ಗಣಗಳ ಕಂಡು ಹೌಹಾರಿದ ಅಧಿಕಾರಿಗಳು!

ಬೆಂಗಳೂರಿನಲ್ಲಿ ಪ್ರಮುಖ ಪಂಚತಾರಾ ಹೋಟೆಲ್‌ಗಳ ಮೇಲೆ ದಾಳಿ ನಡೆಸಿ ಶಾಕ್ ನೀಡಿದ್ದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ (FSSAI) ಅಧಿಕಾರಿಗಳು, ಇದೀಗ ಬಡವರ ಹಸಿವು ನೀಗಿಸುವ ಇಂದಿರಾ ಕ್ಯಾಂಟೀನ್‌ಗಳ ಮೇಲೆಯೂ ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಅಡುಗೆ ಮನೆಗಳಲ್ಲಿನ ಅಸ್ವಚ್ಛತೆ ಹಾಗೂ ಇಲಿ-ಹೆಗ್ಗಣಗಳನ್ನು ಕಂಡು ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ.

ಇಂದಿರಾ ಕ್ಯಾಂಟೀನ್​​ಗಳ ಅಡುಗೆ ಮನೆಗಳ ಮೇಲೆ ದಾಳಿ: ಇಲಿ, ಹೆಗ್ಗಣಗಳ ಕಂಡು ಹೌಹಾರಿದ ಅಧಿಕಾರಿಗಳು!
ಇಂದಿರಾ ಕ್ಯಾಂಟೀನ್​​ಗಳ ಅಡುಗೆ ಮನೆಗಳ ಮೇಲೆ ದಾಳಿ
Image Credit source: Tv9 Kannada
Edited By:

Updated on: Aug 11, 2026 | 1:35 PM

ಬೆಂಗಳೂರು, ಆಗಸ್ಟ್​​ 11: ಪಂಚತಾರಾ ಹಾಗೂ ಪ್ರಮುಖ ಸ್ಟಾರ್ ಹೋಟೆಲ್‌ಗಳ ಮೇಲೆ ದಾಳಿ ಮಾಡಿ ಅವಧಿ ಮೀರಿದ ಆಹಾರ ಪದಾರ್ಥಗಳು, ಕಳಪೆ ಗುಣಮಟ್ಟದ ಮಾಂಸ, ತರಕಾರಿಗಳ ಪತ್ತೆ ಮಾಡುವ ಮೂಲಕ ಮಾಲೀಕರಿಗೆ ಶಾಕ್​​ ಕೊಟ್ಟಿದ್ದ ಬೆಂಗಳೂರಿನ (Bengaluru) ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಇಂದೀಗ ಇಂದಿರಾ ಕ್ಯಾಂಟೀನ್‌ಗಳ ಅಡುಗೆಮನೆಗಳ ಮೇಲೆಯೂ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಕ್ಯಾಂಟೀನ್​​ಗಳ ದುರಾವಸ್ಥೆ ಕಂಡು ಹೌಹಾರಿದ್ದಾರೆ.

ಗೊಟ್ಟಿಗೆರೆಯ ಇಂದಿರಾ ಕ್ಯಾಂಟೀನ್ ಸೀಜ್​​

ಗೊಟ್ಟಿಗೆರೆ, ಲಿಂಗರಾಜಪುರ ಸೇರಿ ನಗರದ ಹಲವೆಡೆ ಇರುವ ಇಂದಿರಾ ಕ್ಯಾಂಟೀನ್​​ಗಳ ಅಡುಗೆ ಮನೆಯನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಅಡುಗೆ ಮನೆಯಲ್ಲಿ ಆಹಾರ ತಯಾರಿಕೆ ಮತ್ತು ಸಂಗ್ರಹಣಾ ವ್ಯವಸ್ಥೆ ಪರಿಶೀಲನೆಯ ಜೊತೆಗೆ ತರಕಾರಿ, ಅಕ್ಕಿ, ಬೇಳೆ, ಎಣ್ಣೆ ಸೇರಿದಂತೆ ಆಹಾರ ಪದಾರ್ಥಗಳ ಗುಣಮಟ್ಟವನ್ನೂ ಈ ವೇಳೆ ಪರೀಕ್ಷಿಸಲಾಗಿದೆ. ಅವಧಿ ಮೀರಿದ ಹಾಗೂ ಹಾಳಾದ ಆಹಾರ ಇದೆಯೇ ಎಂಬ ಬಗ್ಗೆಯೂ ತೀವ್ರ ತಪಾಸಣೆ ನಡೆಸಲಾಗಿದೆ. ಗೊಟ್ಟಿಗೆರೆಯ ಇಂದಿರಾ ಕ್ಯಾಂಟೀನ್​​ನಲ್ಲಿ ಪರಿಶೀಲನೆ ವೇಳೆ ಹೆಗ್ಗಣ ಮತ್ತು ಇಲಿಗಳು ಕಂಡುಬಂದ ಪರಿಣಾಮ ಕ್ಯಾಂಟೀನ್​​ ಸೀಜ್​ ಮಾಡಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಆಹಾರ ಸುರಕ್ಷತಾ ಇಲಾಖೆ ಆಯುಕ್ತ ಶ್ರೀನಿವಾಸ್ ಅವರು, ಅಡುಗೆ ಮನೆ ಸ್ವಚ್ಛವಾಗಿರಲಿಲ್ಲ. ಹೀಗಾಗಿ ಇಂದಿರಾ ಕ್ಯಾಂಟೀನ್ ಗುತ್ತೆಗೆ ಪಡೆದವರಿಗೆ ನೋಟಿಸ್ ಕೂಡ ನೀಡಿರೋದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ:  ಯುಬಿ ಸಿಟಿ ಫೈವ್ ಸ್ಟಾರ್ ಹೋಟೆಲ್‌ಗಳ ಮೇಲೆ ದಾಳಿ: 45 ಕೆಜಿ ಕೊಳೆತ ಮಾಂಸ, 15 ಲೀ. ಕರಿದ ಅಡುಗೆ ಎಣ್ಣೆ ಪತ್ತೆ

ಕೆಲ ದಿನಗಳ ಹಿಂದಷ್ಟೇ ನಗರದ ಐಷಾರಾಮಿ ಹೋಟೆಲ್​​ಗಳ ಮೇಲೆ ರೇಡ್​​ ನಡೆಸಿದ್ದ ಅಧಿಕಾರಿಗಳು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ನಿಯಮಗಳಿಗೆ ಅನುಗುಣವಾಗಿರದ ಆಹಾರ ಪದಾರ್ಥಗಳನ್ನು ಪತ್ತೆ ಮಾಡಿದ್ದರು. ಮಾಂಸಾಹಾರ ಪದಾರ್ಥಗಳನ್ನು ಸಮರ್ಪಕವಾಗಿ ಪ್ರತ್ಯೇಕವಾಗಿ ಸಂಗ್ರಹಿಸದಿರುವುದು, ತಪ್ಪು ಲೇಬಲ್ ಹೊಂದಿರುವ ಆಹಾರ ಉತ್ಪನ್ನಗಳು ಹಾಗೂ ಶಿಲೀಂಧ್ರ ಬಾಧಿತ ತರಕಾರಿ ಮತ್ತು ಇತರ ಆಹಾರ ಪದಾರ್ಥಗಳೂ ಈ ವೇಳೆ ಹೋಟೆಲ್​​ಗಳಲ್ಲಿ ಕಂಡು ಬಂದಿತ್ತು. ಆ ಬೆನ್ನಲ್ಲೇ ಈಗ ಬಡವರ ಹಸಿವು ನೀಗಸಲೆಂದೇ ಸರ್ಕಾರ ಆರಂಭಿಸಿರುವ ಇಂದಿರಾ ಕ್ಯಾಂಟೀನ್​​ಗಳ ಗುತ್ತಿಗೆದಾರರಿಗೂ ಆಹಾರ ಸುರಕ್ಷತಾ ಇಲಾಖೆ ಭರ್ಜರಿ ಶಾಕ್​​ ನೀಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More
Loading...
Unable to load recommendations.
Follow Us