ಮಕ್ನಾ ಆನೆ ಡೆಡ್ಲಿ ಅಟ್ಯಾಕ್ಗೆ ಫಾರೆಸ್ಟ್ ವಾಚರ್ ಸಾವು; ಆರು ತಿಂಗಳಲ್ಲಿ ಮೂವರು ಬಲಿ
ಅದು ಹೇಳಿ ಕೇಳಿ ಗಂಡು ಅಲ್ಲದ, ಹೆಣ್ಣು ಅಲ್ಲದ ಮಕ್ನಾ ಕಾಡಾನೆ. ಇತ್ತೀಚಿನ ದಿನಗಳಲ್ಲಿ ಬನ್ನೇರುಘಟ್ಟ ಅರಣ್ಯದಂಚಿನಲ್ಲಿ ಭಯ ಮೂಡಿಸಿತ್ತು. ಅದನ್ನ ಸೆರೆ ಹಿಡಿಯುವ ಬಗ್ಗೆ ಅರಣ್ಯ ಇಲಾಖೆ ಕೂಡ ಚಿಂತನೆ ನಡೆಸಿತ್ತು. ಇದರ ನಡುವೆಯೇ ಫಾರೆಸ್ಟ್ ವಾಚರ್ ಮೇಲೆ ಡೆಡ್ಲಿ ಅಟ್ಯಾಕ್ ನಡೆಸಿ ಬಲಿ ಪಡೆದಿದೆ. ಅಷ್ಟಕ್ಕೂ ಅನುಭವಿ ಫಾರೆಸ್ಟ್ ವಾಚರ್ನನ್ನ ಮಕ್ನಾ ಕಾಡಾನೆ ಬಲಿ ಪಡೆದಿದ್ದಾದ್ರೂ ಹೇಗೆ ಅಂತೀರಾ? ಈ ಸ್ಟೋರಿ ಓದಿ.

ಬೆಂಗಳೂರು, ಜು.12: ಬೆಂಗಳೂರು ಹೊರವಲಯದ ಬನ್ನೇರುಘಟ್ಟ(Bannerughatta)ಸಮೀಪದ ಹಕ್ಕಿಪಿಕ್ಕಿ ಕಾಲೋನಿಯ ನಿವಾಸಿಯಾದ ಚಿಕ್ಕ ಮಾದಯ್ಯ. ಕಾಡಾನೆ, ಹುಲಿ ಕಾರ್ಯಾಚರಣೆ ಬಗ್ಗೆ ಅನುಭವ ಹೊಂದಿದ್ದ ಫಾರೆಸ್ಟ್ ವಾಚರ್. ಆದ್ರೆ, ಇಂದು(ಶುಕ್ರವಾರ) ತನ್ನದೆ ಫಾರೆಸ್ಟ್ ಬೀಟ್, ಹಕ್ಕಿಪಿಕ್ಕಿ ಕಾಲೋನಿಯ ದೊಡ್ಡಬಂಡೆ ಬಳಿ ಕಾಡಾನೆ(wild elephant) ದಾಳಿಗೆ ಬಲಿಯಾಗಿ ಹೋಗಿದ್ದಾನೆ. ನಡುರಾತ್ರಿ 12.30 ರ ಸುಮಾರಿಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಾಕಾನೆಗಳು ಗ್ರಾಮದ ಸಮೀಪ ಬರುತ್ತಿರುವ ಬಗ್ಗೆ ಮಾಹಿತಿ ಸಿಕ್ಕ ಕೂಡಲೇ ಫಾರೆಸ್ಟ್ ವಾಚರ್ಗಳಾದ ಚಿಕ್ಕ ಮಾದಯ್ಯ ಮತ್ತು ಯಲ್ಲಪ್ಪ ದೊಡ್ಡಬಂಡೆ ಬಳಿ ತೆರಳಿದ್ದರು.
ಆರು ತಿಂಗಳಲ್ಲಿ ಮೂವರು ಬಲಿ
ಆನೆಗಳ ಹಿಂಡಿನ ಕಡೆಗೆ ಚಿಕ್ಕ ಮಾದಯ್ಯ ಕೈನಲ್ಲಿ ಬ್ಯಾಟರಿ ಬಿಡುತ್ತಿದ್ದಂತೆ ಗುಂಪಿನಲ್ಲಿದ್ದ ಮಕ್ನಾ ಕಾಡಾನೆ ಏಕಾಏಕಿ ಡೆಡ್ಲಿ ಅಟ್ಯಾಕ್ ನಡೆಸಿದೆ. ಮಕ್ನಾ ಆನೆಯ ಅಟ್ಯಾಕ್ನಿಂದ ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಚಿಕ್ಕ ಮಾದಯ್ಯ ಉಸಿರು ಚೆಲ್ಲಿದ್ದಾನೆ. ಕಳೆದ ಆರು ತಿಂಗಳಿಂದ ಕಾಡಾನೆ ದಾಳಿಗೆ ಮೂವರು ಬಲಿಯಾಗಿದ್ದು, ಚಿಕ್ಕಮಾದಯ್ಯ ಸಾವಿನ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಜಮಾಯಿಸಿ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ದ ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ:ವಿರಾಜಪೇಟೆ: ಹುಲಿ ದಾಳಿಗೆ ವಿದೇಶಿ ನಾಯಿಗಳು ಬಲಿ, ಕಾಫಿ ತೋಟದಲ್ಲಿ ಕಾಡಾನೆ ಕಳೇಬರ ಪತ್ತೆ
ಪರಿಹಾರಕ್ಕಾಗಿ ಪಟ್ಟು ಹಿಡಿದ ಮೃತನ ಸಂಬಂಧಿಕರು
ಇನ್ನು ಪರಿಹಾರಕ್ಕಾಗಿ ಮೃತನ ಸಂಬಂಧಿಕರು ಮತ್ತು ಗ್ರಾಮಸ್ಥರು ಸ್ಥಳದಿಂದ ಮೃತದೇಹ ಸಾಗಿಸಲು ಬಿಡದೆ ಪಟ್ಟು ಹಿಡಿದರು. ಘಟನಾ ಸ್ಥಳಕ್ಕೆ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್, ಡಿಸಿಎಫ್ ಪ್ರಭಾಕರ್ ಪ್ರಿಯದರ್ಶಿ, ಆನೇಕಲ್ ಉಪವಿಭಾಗದ ಡಿವೈಎಸ್ಪಿ ಮೋಹನ್ ಕುಮಾರ್ ಕೂಡ ಭೇಟಿ ನೀಡಿ ಮೃತನ ಸಂಬಂಧಿಕರ ಮನವೊಲಿಸುವಲ್ಲಿ ಯಶಸ್ವಿಯಾದರು. ಬಳಿಕ ಮೃತದೇಹವನ್ನ ವಿಕ್ಟೋರಿಯಾ ಆಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಿದ್ದು, ಅರಣ್ಯ ಸಚಿವ ಈಶ್ವರ್ ಖಂಡ್ರೆ ಆಸ್ಪತ್ರೆಗೆ ತೆರಳಿ ಮೃತ ಫಾರೆಸ್ಟ್ ವಾಚರ್ ಚಿಕ್ಕ ಮಾದಯ್ಯನಿಗೆ ಸರ್ಕಾರಿ ಗೌರವದೊಂದಿಗೆ ಅಂತಿಮ ನಮನ ಸಲ್ಲಿಸಿದರು.

ಅರಣ್ಯ ಇಲಾಖೆಯಿಂದ 25 ಲಕ್ಷ ಪರಿಹಾರ-ಈಶ್ವರ್ ಖಂಡ್ರೆ
ಬಳಿಕ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ, ‘ಹದಿನೈದು ವರ್ಷಗಳಿಂದ ಅರಣ್ಯ ಇಲಾಖೆಯಲ್ಲಿ ಚಿಕ್ಕಮಾದಯ್ಯ ಅತ್ಯಂತ ನಿಷ್ಠಾವಂತ ಸಿಬ್ಬಂದಿಯಾಗಿ ಸೇವೆ ಸಲ್ಲಿಸಿದ್ದರು. ಕಾಡಾನೆ ಮತ್ತು ಹುಲಿ ಕಾರ್ಯಾಚರಣೆ, ಕಾಡ್ಗಿಚ್ಚು ನಿಯಂತ್ರಣ ಮಾಡುವುದು ಅರಣ್ಯದ ಬಗ್ಗೆ ವಿಶೇಷವಾದ ಆಸಕ್ತಿ ಹೊಂದಿದ್ದ ಅಧ್ಯಯನವನ್ನ ಮಾಡಿದ್ದ ಸಿಬ್ಬಂದಿಯ ಅಗಲಿಕೆ ಅರಣ್ಯ ಸಂರಕ್ಷಣೆಗೆ ತುಂಬಲಾರದ ನಷ್ಟವಾಗಿದೆ. ಮೃತರ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ 25 ಲಕ್ಷ ಪರಿಹಾರವನ್ನ ಕೊಡಲಾಗುವುದು. ಜೊತೆಗೆ ವಾರಸುದಾರರಿಗೆ ಅರಣ್ಯ ಇಲಾಖೆಯಿಂದ ಅನುಕಂಪದ ಆಧಾರದ ಮೇಲೆ ಕೆಲಸ ನೀಡಲಾಗುತ್ತದೆ. ಮೃತ ಚಿಕ್ಕ ಮಾದಯ್ಯ ಅವರ ಆತ್ಮಕ್ಕೆ ಶಾಂತಿ ಸಿಗಲಿ, ಭಗವಂತ ನೋವನ್ನು ಬರಿಸುವಂತ ಶಕ್ತಿಯನ್ನ ಕುಟುಂಬಕ್ಕೆ ನೀಡಲಿ ಎಂದರು.
ಒಟ್ಟಿನಲ್ಲಿ ಕಿಲ್ಲರ್ ಮಕ್ನಾ ಆನೆಯು ಕಳೆದ ಆರು ತಿಂಗಳಿನಿಂದ ಬನ್ನೇರುಘಟ್ಟ ಅರಣ್ಯದ ಸುತ್ತಮುತ್ತಲಿನ ಕಡೆಯ ಜನರ ನಿದ್ದೆಗೆಡಿಸಿದ್ದು, ಡೆಡ್ಲಿ ಅಟ್ಯಾಕ್ ನಡೆಸಿ ಜನರ ಜೀವ ಬಲಿ ಪಡೆಯುತ್ತಿದೆ. ಮುಂದಿನ ದಿನಗಳಲ್ಲಿ ಅರಣ್ಯ ಇಲಾಖೆ ಈ ಮಕ್ನಾ ಆನೆಯನ್ನ ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಿ ಜನರು ನೆಮ್ಮದಿ ಜೀವನ ನಡೆಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರ ಎಂದು ಕಾದು ನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



