ಸಾವಿರಾರು ಆಟೊ ಚಾಲಕರಿಗೆ ಉಚಿತ ಲಸಿಕೆ ವಿತರಣೆ: ತೇಜಸ್ವಿ ಸೂರ್ಯ
ಆಟೊ ಚಾಲಕರು ಬೆಂಗಳೂರಿನ ಜೀವಾಳ. ಅವರನ್ನು ನಿರ್ಲಕ್ಷಿಸಬಾರದು. ಅವರ ಯೋಗಕ್ಷೇಮಕ್ಕೆ ಸರ್ಕಾರ ಗಮನಕೊಡುತ್ತಿದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.
ಬೆಂಗಳೂರು: ನಗರದ 1,400 ಆಟೊ ಚಾಲಕಿಗೆ ಉಚಿತ ಲಸಿಕೆ ನೀಡಲು ವ್ಯವಸ್ಥೆ ಮಾಡಿದ್ದೇವೆ. ಆಟೊ ಚಾಲಕರು ಬೆಂಗಳೂರಿನ ಜೀವಾಳ. ಅವರನ್ನು ನಿರ್ಲಕ್ಷಿಸಬಾರದು. ಅವರ ಯೋಗಕ್ಷೇಮಕ್ಕೆ ಸರ್ಕಾರ ಗಮನಕೊಡುತ್ತಿದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದರು.
ನಗರದಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕೊರೊನಾ ಸೋಂಕಿನಿಂದ ಸಾವಿರಾರು ಸಂಕಷ್ಟ ಅನುಭವಿಸುತ್ತಿದ್ದ ಸಮಯದಲ್ಲಿ ನಾವು ಬೆಡ್ ಬ್ಲಾಕಿಂಗ್ ಹಗರಣವನ್ನು ಬಯಲಿಗೆ ಎಳೆದೆವು. ಆದರೆ ಕಾಂಗ್ರೆಸ್ ಪಕ್ಷವು ಈ ಪ್ರಕರಣದ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಲಸಿಕೆ ವಿಚಾರದಲ್ಲಿ ಶಾಸಕ ರವಿಸುಬ್ರಹ್ಮಣ್ಯ ಅವರ ಮಾತು ಎನ್ನಲಾದ ಆಡಿಯೊ ತುಣುಕನ್ನು ಕಾಂಗ್ರೆಸ್ ಬಿಡುಗಡೆ ಮಾಡಿರುವ ವಿಚಾರ ಪ್ರಸ್ತಾಪಿಸಿದ ಅವರು, ಕಾಂಗ್ರೆಸ್ನವರು ಮಾಡಿರೋ ಫೇಕ್ ಆಡಿಯೊಗೆ ರಿಯಾಕ್ಷನ್ ಕೊಡುವಷ್ಟು ಟೈಮ್ ಇಲ್ಲ ನನಗೆ ಎಂದು ವ್ಯಂಗ್ಯವಾಡಿದರು.
ನಾವು 24 ಗಂಟೆ ಕೆಲಸ ಮಾಡುತ್ತಿದ್ದೇವೆ. ಅವರು 24 ಗಂಟೆ ಟೀಕೆ ಮಾಡ್ತಿದ್ದಾರೆ. ಫೇಕ್ ಆಡಿಯೋ, ಫೇಕ್ ಎಡಿಟ್ ಮಾಡಿಕೊಂಡಿರೋರಿಗೆ ಉತ್ತರ ಕೊಡುವಷ್ಟು ಟೈಮಿಲ್ಲ. ಜನರ ಸೇವೆ ಮಡೋದಿದೆ ನನಗೆ ಎಂದು ತೇಜಸ್ವಿ ಸೂರ್ಯ ಹೇಳಿದರು.
ಕಾಂಗ್ರೆಸ್ ಬೆಡ್ ಬ್ಲಾಕ್ ದಂಧೆ ತನಿಖೆ ದಾರಿತಪ್ಪಿಸುತ್ತಿದೆ. ಕಾಂಗ್ರೆಸ್ನವರ ಜತೆ ಇರುವ ಒಂದೆರಡು ಬುದ್ದಿ ಜೀವಿಗಳು ಪ್ರಕರಣ ತನಿಖೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ನಾನು ಮತ್ತು ಶಾಸಕ ಸತೀಶ್ ರೆಡ್ಡಿ ಈ ವಿಷಯವನ್ನು ಇಷ್ಟಕ್ಕೆ ಬಿಡುವುದಿಲ್ಲ. ಸತ್ಯ ಆದಷ್ಟು ಬೇಗ ಹೊರಬರಲಿದೆ ಎಂದು ಹೇಳಿದರು.
ನಾವು ಬೆಡ್ ಬ್ಲಾಕಿಂಗ್ ಹಗರಣದ ಹತ್ತು ದಿನದ ಡಾಟಾ ಮಾತ್ರ ತೆಗೆದುಕೊಂಡಿದ್ದೇವೆ. ಸಿಸಿಬಿ ಎಲ್ಲ ಮಾಹಿತಿಯನ್ನು ಸಂಗ್ರಹಿಸಿ ತನಿಖೆ ನಡೆಸುತ್ತಿದೆ. ಇದು ಕೇವಲ ಬೊಮ್ಮನಹಳ್ಳಿ ಭಾಗದಲ್ಲಿ ಮಾತ್ರ ನಡೆದಿಲ್ಲ. ಈ ಹಗರಣ ಇಡೀ ಬೆಂಗಳೂರು ವ್ಯಾಪ್ತಿಯಲ್ಲಿ ನಡೆದಿದೆ. ಈ ಹಗರಣದ ಹಿಂದೆ ನೂರಾರು ಜನ ಇದ್ದಾರೆ. ಹಗರಣ ಹೊರತಂದವರನ್ನೇ ತೇಜೋವಧೆ ಮಾಡುವ ಕೆಲಸ ಆಗುತ್ತಿದೆ. ಸಾವಿರಾರು ಬೆಡ್ ಬ್ಲಾಕ್ ದಂದೆ ನಡೆದಿದೆ. ನೂರಾರು ಜನರ ಮೇಲೆ ಎಫ್ಐಆರ್ ಆಗಲಿದೆ. ಆದರೆ ಇಡೀ ಪ್ರಕರಣದ ದಿಕ್ಕು ತಪ್ಪಿಸುವ ಕೆಲಸ ಆಗುತ್ತಿದೆ. ತನಿಖೆಯ ದಾರಿ ತಪ್ಪಿಸಲು ಕಾಂಗ್ರೆಸ್ ಹೊರಟಿದೆ ಎಂದು ಅವರು ಗಂಭೀರವಾಗಿ ಆರೋಪಿಸಿದರು.
(free vaccine for auto drivers says mp Tejasvi Surya)
ಇದನ್ನೂ ಓದಿ: Bed Blocking Case: ಬೆಡ್ ಬ್ಲಾಕಿಂಗ್ ಪ್ರಕರಣ: ತೇಜಸ್ವಿ ಸೂರ್ಯ ಹಾಗೂ ಸತೀಶ್ ರೆಡ್ಡಿ ಬಂಧಿಸುವಂತೆ ಕಮಲ್ ಪಂತ್ಗೆ ದೂರು
ಇದನ್ನೂ ಓದಿ: ಸಂಸದ ತೇಜಸ್ವಿ ಸೂರ್ಯ ಮತ್ತಿತರರ ವಿರುದ್ಧದ ಪಿಐಎಲ್ ರಾಜಕೀಯ ಪ್ರೇರಿತವಾದದ್ದು; ವಿಚಾರಣೆಗೆ ನಿರಾಕರಿಸಿದ ಹೈಕೋರ್ಟ್