ಬೆಂಗಳೂರು, ಆಗಸ್ಟ್.18: ಕೊಲ್ಕತ್ತಾದಲ್ಲಿ ವೈದ್ಯಕೀಯ ವಿದ್ಯಾರ್ಥಿಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ ರೇಪ್ ಮಾಡಿ ಕೊಲೆ ಮಾಡಿರುವ ಘಟನೆ ತಲೆ ತಗ್ಗಿಸುವಂತೆ ಮಾಡಿದೆ. ವಿದ್ಯಾರ್ಥಿಯ ಕೊಲೆ ಖಂಡಿಸಿ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿವೆ. ಪುಟ್ಟ ಮಕ್ಕಳು, ಯುವತಿಯರು, ಮಹಿಳೆಯರು, ಯುವಕರು ಸೇರಿದಂತೆ ಲಕ್ಷಾಂತರ ಮಂದಿ ಕತ್ತಲಲ್ಲಿ ಕ್ಯಾಂಡೆಲ್ ಹಿಡಿದು ಮಹಿಳೆಯರ ಸುರಕ್ಷತೆಗಾಗಿ ಪ್ರತಿಭಟನೆಗಳನ್ನು (Protest) ನಡೆಸುತ್ತಿದ್ದಾರೆ. ಆದರೆ ಇದರ ನಡುವೆಯೇ ಬೆಂಗಳೂರಿನಲ್ಲಿ (Bengaluru) ಹೀನಾಯ ಕೃತ್ಯ ನಡೆದಿದೆ. ಆಟೋದಲ್ಲಿ ತೆರಳುತ್ತಿದ್ದ ಯುವತಿ ಮೇಲೆ ರೇಪ್ ಆಗಿದೆ. ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ.
ಮಧ್ಯರಾತ್ರಿ ಬೆಂಗಳೂರಿನ ಕೋರಮಂಗಲದ ಪಬ್‌ನಿಂದ ಪಾನಮತ್ತರಾಗಿ ಹೊರ ಬಂದಿದ್ದ ಯುವತಿ ತನ್ನ ದ್ವಿಚಕ್ರ ವಾಹನ ಓಡಿಸಿಕೊಂಡು ಮನೆಗೆ ತೆರಳುತ್ತಿದ್ದರು. ಈ ವೇಳೆ ವಾಹನ ಅಪಘಾತವಾಗಿದ್ದು ಯುವತಿ ವಾಹನ ಬಿಟ್ಟು ಆಟೋದಲ್ಲಿ ಪ್ರಯಾಣ ಬೆಳೆಸಿದ್ದರು. ಇದೇ ವೇಳೆ ಆಟೋ ಚಾಲಕ, ಯುವತಿಯ ಸ್ಥಿತಿ ಕಂಡು ದುರ್ಬಳಕೆ ಮಾಡಿಕೊಂಡಿದ್ದಾನೆ. ಆಟೋ ಹತ್ತಿದ್ದ ಯುವತಿಯನ್ನು ಬೊಮ್ಮನಹಳ್ಳಿ ಸಮೀಪದ ಗೋದಾಮು ಬಳಿ ಕರೆದುಕೊಂಡು ಹೋಗಿ ರೇಪ್ ಮಾಡಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ಸದ್ಯ ಯುವತಿ ಹೆಬ್ಬಗೋಡಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಕೊಪ್ಪಳ: ಕ್ಷೌರ ಮಾಡುವ ವಿಚಾರಕ್ಕೆ ಜಗಳ, ಕ್ಷೌರಿಕನಿಂದ ದಲಿತ ಯುವಕನ ಕೊಲೆ
ಸಂತ್ರಸ್ಥೆ ಅರೆ ಪ್ರಜ್ಞಾವಸ್ಥೆಯಲ್ಲಿ ತನ್ನ ಸ್ನೇಹಿತೆಗೆ ಕರೆ ಮಾಡಿದ್ದು ಸ್ನೇಹಿತೆ ಬಂದು ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾಳೆ. ಈ ವೇಳೆ ವೈದ್ಯರು ಯುವತಿಯನ್ನು ಪರೀಕ್ಷಿಸಿದಾಗ ಆಕೆಯ ಮೇಲೆ ಅತ್ಯಾಚಾರವಾಗಿರೋದು ಗೊತ್ತಾಗಿದೆ. ಆಸ್ಪತ್ರೆ ಸಿಬ್ಬಂದಿ ತಕ್ಷಣ ಹೆಬ್ಬಗೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದು ಘಟನೆ ಸಂಬಂಧ ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಇನ್ನು ಯುವತಿ ಬಿದ್ದಿದ್ದ ಸ್ಥಳ ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿದೆ. ಹೀಗಾಗಿ ಹೆಚ್ಎಸ್ಆರ್ ಲೇಔಟ್ ಗೆ ಹೆಬ್ಬಗೋಡಿ ಪೊಲೀಸರು ಮೆಮೋ ಕಳುಹಿಸಿದ್ದಾರೆ.
ಖಾಸಗಿ ಆಸ್ಪತ್ರೆಯ ತುರ್ತುಚಿಕಿತ್ಸಾ ಘಟಕದಲ್ಲಿ ಸಂತ್ರಸ್ಥೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಆಸ್ಪತ್ರೆಗೆ ಅಡಿಷನಲ್ ಕಮಿಷನರ್ ಭೇಟಿ ನೀಡಿ ಯುವತಿಯ ಆರೋಗ್ಯ ವಿಚಾರಿಸಿದ್ದಾರೆ. ಘಟನೆ ಹಿನ್ನೆಲೆ ಯುವತಿ ಇರೋ ವಾರ್ಡ್ ಬಳಿ ಹೆಚ್ಚುವರಿ ಸೆಕ್ಯುರಿಟಿ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನ ನಡೆದಿರೋದು ನಿಜ. ಸಂತ್ರಸ್ತ ಯುವತಿಗೆ ವೈದ್ಯಕೀಯ ಪರೀಕ್ಷೆ ನಡೆಯುತ್ತಿದೆ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಪ್ರೊಸೀಜರ್ನಲ್ಲಿ ಏನಿದೆಯೋ ಅದರಂತೆ ಪೊಲೀಸರು ಮಾಡ್ತಿದ್ದಾರೆ. ಮೆಡಿಕಲ್ ಟೆಸ್ಟ್ ಎಲ್ಲ ನಡೆಯುತ್ತಿದೆ ಎಂದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:13 am, Sun, 18 August 24