ಬೆಂಗಳೂರು, (ಮಾರ್ಚ್ 13): ಬೆಂಗಳೂರಿನಲ್ಲಿ (Bengaluru) ಕೆಲ ದಿನಗಳಿಂದ ಕಡಿಮೆ ಆಗಿದ್ದ ಕಸ(garbage) ವಿಲೇವಾರಿ ಸಮಸ್ಯೆ ಮತ್ತೆ ತೀವ್ರಗೊಂಡಿದೆ. ಕಣ್ಣೂರು ಬಳಿಯ ಮಿಟ್ಟಗಾನ ಹಳ್ಳಿ ಡಂಪಿಂಗ್ ಯಾರ್ಡ್ ನಲ್ಲಿ (mittaganahalli dumping yard) ಕಸ ಹಾಕುವುದನ್ನೇ ನಿಲ್ಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಕಸ ತಾಂಡವವಾಡುತ್ತಿದೆ. ಇನ್ನು ಬಿಬಿಎಂಪಿ ವಾಹನಗಳು ಸಹ ಕಸ ತುಂಬಿಕೊಂಡು ನಿಂತಲ್ಲೇ ನಿಂತಿವೆ. ಈ ಬೆಳವಣಿಗೆ ಬೆನ್ನಲ್ಲೇ ಕಸಕ್ಕೆ ತೆರಿಗೆ ವಿಧಿಸಲು ಮುಂದಾಗಿರುವ ಸರ್ಕಾರದ ನಡೆಗೆ ಆಕ್ರೋಶ ಭುಗಿಲೆದ್ದಿದೆ.
ಕಣ್ಣೂರು ಬಳಿಯ ಮಿಟ್ಟಗನ ಹಳ್ಳಿಯಲ್ಲಿ ಕಸದ ಡಂಪಿಂಗ್ ಹೆಚ್ಚಾಗಿದ್ದು, ಮಾಲಿನ್ಯ ಮಿತಿಮೀರಿದೆ. ಗರಿಷ್ಠ ಹಂತ ತಲುಪಿ ವಾತಾವರಣ ಹದಗೆಟ್ಟಿದ್ದರೂ ಪಾಲಿಕೆ ಮಾತ್ರ ಇನ್ನೂ ಕಸ ಸುರಿಯುವುದನ್ನ ಮುಂದುವರೆಸಿದೆ. ಹೀಗಾಗಿ ಕಣ್ಣೂರು, ಮಿಟ್ಟಗಾನಹಳ್ಳಿ ಕಲ್ಲು ಕ್ವಾರಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಕಸ ಸುರಿಯುವುದನ್ನು ವಿರೋಧಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ 400ಕ್ಕೂ ಹೆಚ್ಚು ಕಸ ವಿಲೇವಾರಿ ಲಾರಿಗಳು ಸಾಲುಗಟ್ಟಿ ನಿಂತಿವೆ. ಈ ಬೆಳವಣಿಗೆಯಿಂದ ಬೆಂಗಳೂರು ನಗರದಲ್ಲಿ ಕಸದ ಸಮಸ್ಯೆ ಮತ್ತೆ ಉಲ್ಬಣಗೊಂಡಿದೆ.
ಕಣ್ಣೂರು ಬಳಿಯ ಮಿಟ್ಟಗಾನ ಕ್ವಾರಿಯಲ್ಲಿ ಅವೈಜ್ಞಾನಿಕವಾಗಿ ಕಸ ಸುರಿಯಲಾಗುತ್ತಿದೆ ಎಂದು ಸ್ಥಳೀಯರು ಬಿಬಿಎಂಪಿ ವಾಹನಗಳನ್ನು ನಿಲ್ಲಿಸಿದ್ದಾರೆ. ಪರಿಣಾಮ ನಗರದಲ್ಲಿ ಮತ್ತೆ ಕಸದ ಸಮಸ್ಯೆ ಉಲ್ಬಣಿಸಿದ್ದು, ಗಾರ್ಬೇಜ್ ಸಿಟಿ ಅಂತ ಆಡಿಕೊಳ್ಳುವ ಮಟ್ಟಕ್ಕೆ ಟೀಕೆ ವ್ಯಕ್ತವಾಗಿದೆ. ಸ್ಥಳೀಯವಾಗಿ ಕಸ ಎತ್ತದೆ ವಾತಾವರಣ ಹದಗೆಡುತ್ತಿದೆ. ಮತ್ತೊಂದೆಡೆ ಕಸ ಸಂಗ್ರಹ ಮಾಡಿಕೊಂಡ ಬಿಬಿಎಂಪಿ ಟೆಂಪೋಗಳು ಅವುಗಳನ್ನು ಕಂಪಾಕ್ಟರ್ ಗಳಿಗೆ ತುಂಬಿಸಲಾಗದೆ ನಿಂತಲ್ಲೇ ನಿಂತಿವೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಕಸವನ್ನು 9 ವರ್ಷಗಳಿಂದ ಇಲ್ಲಿಗೆ ತಂದು ಸುರಿಯಲಾಗುತ್ತಿದೆ. ಪ್ರಾಣಿ ತ್ಯಾಜ್ಯ, ವೈದ್ಯಕೀಯ ತ್ಯಾಜ್ಯ ಹಾಗೂ ಕಾರ್ಖಾನೆಗಳ ವಿಷಪೂರಿತ ತ್ಯಾಜ್ಯವನ್ನೂ ತಂದೂ ಸುರಿಯಲಾಗುತ್ತಿದೆ. ಭೂಭರ್ತಿ ಘಟಕಗಳ ಸುತ್ತಲಿನ ಪ್ರದೇಶಗಳ ಕೊಳವೆ ಬಾವಿಗಳಲ್ಲಿ ಕೊಳಚೆ ಮಿಶ್ರಿತ ನೀರು ಬರುತ್ತಿವೆ. ಇದೇ ನೀರನ್ನು ಜಾನುವಾರುಗಳು ಕುಡಿದು ಮೃತಪಟ್ಟಿರುವ ನಿದರ್ಶನಗಳಿವೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ಇನ್ನು ನಗರದ ಜ್ವಲಂತ ಸಮಸ್ಯೆ ಕಸ ವಿಲೇವಾರಿ ಮಾಡಲಾಗದ ಪಾಲಿಕೆ ಹಾಗೂ ಬೆಂಗಳೂರು ಘನ ತ್ಯಾಜ್ಯ ನಿರ್ವಹಣ ಸಂಸ್ಥೆಗಳ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ. ಕಸ ವಿಲೇವಾರಿ ಮಾಡುವುದಕ್ಕೆ ಆಗದ ಪಾಲಿಕೆ ವಿರುದ್ಧ ಆಕ್ರೋಶ ಒಂದು ಕಡೆಯಾದರೆ, ಮತ್ತೊಂದು ಬೆಳವಣಿಗೆ ಸಹ ನಾಗರಿಕರ ಕೆಂಗಣ್ಣಿಗೆ ಗುರಿಯಾಗಿದೆ. ಕಸಕ್ಕೆ ತೆರಿಗೆ ವಿಧಿಸಲು ಮುಂದಾಗಿರುವ ಘನತ್ಯಾಜ್ಯ ನಿರ್ವಹಣೆ ಸಂಸ್ಥೆ (BSWML), 0 ರೂಪಾಯಿಯಿಂದ ಗರಿಷ್ಠ 400 ರೂಪಾಯಿ ವರೆಗೆ ಮಾಸಿಕ ತೆರಿಗೆ ವಿಧಿಸಿ ವಾರ್ಷಿಕ 600 ಕೋಟಿ ರೂಪಾಯಿ ಗಳಿಸುವ ಗುರಿ ಇಟ್ಟುಕೊಂಡಿದೆ. ಆದರೆ ಇರುವ ಅನುದಾನವನ್ನೇ ಸರಿಯಾಗಿ ಬಳಸಿಕೊಳ್ಳದೆ ಕಸ ಸಂಗ್ರಹಣೆ, ವಿಲೇವಾರಿ ಮಾಡದೆ ಈಗಾಗಲೇ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ಇದೆಂತಾ ಹೊರೆ ಎನ್ನುವ ಮಾತು ಕೇಳಿಬರುತ್ತಿದೆ. ಹೀಗಾಗಿ ಕಸದ ತೆರಿಗೆ ಎಷ್ಟು ಪರಿಣಾಮಕಾರಿಯಾಗಿ ಬಳಕೆ ಆಗುತ್ತೆ ಅಂತಲೂ ಆಗ್ರಹ ವ್ಯಕ್ತವಾಗಿದೆ.
ಒಟ್ಟಿನಲ್ಲಿ ಬೆಂಗಳೂರು ಬ್ರಾಂಡ್ ಬೆಂಗಳೂರು ಆಗುತ್ತೋ ಇಲ್ವೋ ಈ ರೀತಿ ಮುಂದುವರೆದರೆ ಗಾರ್ಬೇಜ್ ಸಿಟಿ ಅನ್ನೋ ಕುಖ್ಯಾತಿ ಅಂತೂ ಕಟ್ಟಿಕೊಳ್ಳುತ್ತೆ. ಅಭಿವೃದ್ಧಿ ಅಂತ ಸಾವಿರಾರು ಕೋಟಿ ಖರ್ಚು ತೋರಿಸುವ ಪಾಲಿಕೆಗೆ ಕಸ ನಿರ್ವಹಣೆ ಹೇಗೆ ಮಾಡಬೇಕು ಯಾಕೆ ಮಾಡಬೇಕು ಅನ್ನೋ ಪರಿಜ್ಞಾನವೇ ಇಲ್ಲದ ಹಾಗೆ ವರ್ತನೆ ಮಾಡುತ್ತಿದೆ. ಕಸಕ್ಕೆ ತೆರಿಗೆ ಹಾಕುವ ಮುನ್ನ ಡಂಪಿಂಗ್ ಯಾರ್ಡ್ ಗಳ ದುಸ್ಥಿತಿ ಏನು ಎಂಬುದರ ಬಗ್ಗೆ ಗಮನ ಹರಿಸಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ