ಚಿಕನ್, ಮಟನ್ ಬಿಟ್ಟು ಮೀನು ತಿನ್ನುವವರಿಗೂ ಶಾಕ್: ಮೀನಿನ ಬೆಲೆ ಶೇ 30 ಏರಿಕೆ
ಬೆಂಗಳೂರಿನಲ್ಲಿ ಮೀನಿನ ಬೆಲೆ ಶೇಕಡಾ 30ರಷ್ಟು ಏರಿಕೆಯಾಗಿದೆ. ಹಕ್ಕಿ ಜ್ವರ ಮತ್ತು ಇತರ ಕಾರಣಗಳಿಂದ ಕೋಳಿ ಮಾಂಸ ಮತ್ತು ಮಟನ್‌ನ ಬೆಲೆ ಏರಿಕೆಯಿಂದಾಗಿ ಮೀನಿನ ಬೇಡಿಕೆ ಹೆಚ್ಚಾಗಿದೆ. ಪೂರೈಕೆಯ ಕೊರತೆ ಮತ್ತು ಸಮುದ್ರದ ತಾಪಮಾನ ಏರಿಕೆಯಿಂದಾಗಿ ಮೀನುಗಾರಿಕೆ ಕುಂಠಿತವಾಗಿದೆ. ಮೀನಿನ ದರ ಏರಿಕೆಯ ಬಗ್ಗೆ (ದರ ವಿವರ ಸಹಿತ) ‘ಟಿವಿ9’ ವರದಿಗಾರ ಲಕ್ಷ್ಮೀ ನರಸಿಂಹ ನೀಡಿರುವ ವರದಿ ಇಲ್ಲಿದೆ.

ಬೆಂಗಳೂರು, ಮಾರ್ಚ್ 13: ಚಿಕನ್, ಮಟನ್ ಬಿಟ್ಟು ಮೀನು (Fish) ತಿನ್ನುವವರಿಗೂ ಇದೀಗ ದರ ಏರಿಕೆಯ ಶಾಕ್ ತಟ್ಟಿದೆ. ಬೆಂಗಳೂರಿನಲ್ಲಿ (Bengaluru) ಮೀನಿನ ಬೆಲೆಯಲ್ಲಿ ಶೇಕಡಾ 30 ರಷ್ಟು ಏರಿಕೆಯಾಗಿದೆ. ಎಲ್ಲಾ ರೀತಿಯ ಸಮುದ್ರ ಮೀನುಗಳ ದರದಲ್ಲಿ ವ್ಯತ್ಯಾಸ ಆಗಿದೆ. ಬೇಡಿಕೆಗೆ ತಕ್ಕಷ್ಟು ಮೀನು ಪೂರೈಕೆ ಆಗದ ಹಿನ್ನೆಲೆ ಬಿಕ್ಕಟ್ಟು ಸೃಷ್ಟಿಯಾಗಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ. ಹಕ್ಕಿ ಜ್ವರದ ಕಾರಣ ಕೋಳಿ ಮಾಂಸ ಸಿಗುತ್ತಿಲ್ಲ. ಸಿಕ್ಕಿದರೂ ಅನೇಕರು ರೋಗ ಭೀತಿಯಿಂದ ಅದನ್ನು ಖರೀದಿ ಮಾಡುತ್ತಿಲ್ಲ. ಮತ್ತೊಂದೆಡೆ, ಮಟನ್ ದುಬಾರಿಯಾಗಿದೆ. ಈ ಎಲ್ಲ ಕಾರಣಗಳಿಂದ ಮೀನಿನ ಬೇಡಿಕೆ ಹೆಚ್ಚಾಗಿತ್ತು. ಇದರ ಬೆನ್ನಲ್ಲೇ ಮೀನು ಬೆಲೆ ಕೂಡ ದುಬಾರಿಯಾಗಿದೆ.
ನಗರದ ರಸೆಲ್ ಮಾರುಕಟ್ಟೆಗೆ ಬೇಡಿಕೆಯಷ್ಟು ಮೀನು ಬರುತ್ತಿಲ್ಲ. ಮಂಗಳೂರು, ಚೆನ್ನೈ, ಕೇರಳ, ಆಂಧ್ರಪ್ರದೇಶಗಳಿಂದ ಪೂರೈಕೆಯಲ್ಲಿ ಕುಂಠಿತವಾಗಿದೆ. ಬೇಸಿಗೆ ಹೆಚ್ಚಾಗಿರುವ ಹಿನ್ನೆಲೆ ಮೀನುಗಾರಿಕೆ ಕ್ಷೇತ್ರಕ್ಕೆ ಹೊಡೆತ ಬಿದ್ದಿದೆ ಎಂದು ಹೇಳಲಾಗುತ್ತಿದೆ.
ಮೀನು ದರ ವಿವರ (ಹಿಂದಿನ ದರ – ಪ್ರಸ್ತುತ ದರ ಕೆಜಿ ಲೆಕ್ಕದಲ್ಲಿ)
- ಅಂಜಲ್ 650 – 850
- ಬಂಗುಡೆ 200 – 250
- ಶಿಲಾ 350 – 400
- ವೈಟ್ ಪಂಪ್ಲೆಟ್ 900 – 1200
- ಬ್ಲಾಕ್ ಪಂಪ್ಲೇಟ್ 600 – 850
- ಪ್ರಾನ್ಸ್ 380 – 450
- ಕ್ರಾಬ್ 180 – 300
- ಶಂಕರ 250 – 320
- ತುನ 200 – 300
- ಪಾರೆ 200 – 250
ಮೀನುಗಾರಿಕೆಗೆ ತಾಪಮಾನದ ಬಿಸಿ
ಕರ್ನಾಟಕದ ಕರಾವಳಿಯಲ್ಲಿ ಉಷ್ಣಾಂಶದ ಏರಿಕೆಯಾಗಿರುವುದು ಕೂಡ ಮೀನುಗಾರಿಕೆ ಮೇಲೆ ಗಂಭೀರ ನಕಾರಾತ್ಮಕ ಪರಿಣಾಮ ಬೀರಿದೆ ಎನ್ನಲಾಗಿದೆ. ಸಮುದ್ರದ ತಾಪಮಾನ ಹೆಚ್ಚಳದಿಂದಾಗಿ ಮೀನುಗಳು ಮೇಲ್ಮೈಗೆ ಬರುವುದನ್ನು ಕಡಿಮೆ ಮಾಡಿವೆ. ತಂಪಾದ ವಾತಾವರಣ ಅರಸಿ ಸಮುದ್ರದ ಆಳಕ್ಕೆ ವಲಸೆ ಹೋಗುತ್ತಿವೆ ಎನ್ನಲಾಗಿದೆ. ಮೀನುಗಳು ಸಮುದ್ರದಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತಿರುವಾಗ ಮೀನುಗಾರರ ಬಲೆಗೆ ಸುಲಭವಾಗಿ ಬೀಳುತ್ತವೆ. ಆದರೆ ಯಾವಾಗ ಅವುಗಳು ಸಮುದ್ರದಾಳದಲ್ಲಿ ಆಶ್ರಯ ಪಡೆಯುತ್ತವೆಯೋ ಅಂತಹ ಸಂದರ್ಭದಲ್ಲಿ ಮೀನುಗಾರರ ಬಲೆಗೆ ಸಿಗುವುದಿಲ್ಲ. ಇದರ ಪರಿಣಾಮವಾಗಿ ಮೀನುಗಾರರಿಗೆ ಸಂಕಷ್ಟ ಎದುರಾಗಿದೆ.
ಕೋಟಿ ಕೋಟಿ ವಹಿವಾಟು ನಡೆಸುವ ಮೀನುಗಾರಿಕೆಗೆ ತಟ್ಟಿದ ತಾಪಮಾನದ ಬಿಸಿ: ಮೀನು ಸಿಗದೆ ಕಂಗಾಲಾದ ಮೊಗವೀರರು
ಸಾವಿರಾರು ಬೋಟ್‌ಗಳು ಬಂದರಿನಲ್ಲೇ ಲಂಗರು ಹಾಕಿದ್ದು, ಲಕ್ಷಾಂತರ ರೂಪಾಯಿಗಳ ನಷ್ಟ ಸಂಭವಿಸಿದೆ. ಇದು ಕೂಡ ಮೀನು ಪೂರೈಕೆಯಲ್ಲಿ ವ್ಯತ್ಯಯ ಹಾಗೂ ಬೆಲೆ ಏರಿಕೆಗೆ ಕಾರಣವಾಗಿರುವ ಸಾಧ್ಯತೆ ಇದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ