ಜಿಬಿಎ ಚುನಾವಣೆ: ಬ್ಯಾಲೆಟ್ ಪೇಪರ್ ಬಳಕೆಗೆ ವಿರೋಧ, ಇವಿಎಂ ಬಳಸುವಂತೆ ಸಂಘ-ಸಂಸ್ಥೆಗಳ ಪಟ್ಟು

ಆರು ವರ್ಷಗಳ‌ ಬಳಿಕ ಪಾಲಿಕೆ ಚುನಾವಣೆಗೆ ಭರದ ಸಿದ್ಧತೆ ನಡೆದಿದೆ. ರಾಜಕೀಯ ಪಕ್ಷಗಳಲ್ಲೂ ಅಬ್ಬರದ ಚಟುವಟಿಕೆ ಶುರುವಾಗಿದೆ. ಇದರ ನಡುವೆ ರಾಜ್ಯ ಚುನಾವಣಾ ಆಯೋಗ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆಸಲು ಹೊರಟಿದ್ದಕ್ಕೆ ಸಾರ್ವಜನಿಕರು ಕಿಡಿ ಕಾರುತ್ತಿದ್ದಾರೆ. ಬ್ಯಾಲೆಟ್ ಪೇಪರ್ ಕೈ ಬಿಟ್ಟು ಇವಿಎಂನಲ್ಲೇ ಚುನಾವಣೆ ನಡೆಸುವಂತೆ ಆಂದೋಲನ ಶುರು ಮಾಡಿದ್ದಾರೆ.

ಜಿಬಿಎ ಚುನಾವಣೆ: ಬ್ಯಾಲೆಟ್ ಪೇಪರ್ ಬಳಕೆಗೆ ವಿರೋಧ, ಇವಿಎಂ ಬಳಸುವಂತೆ ಸಂಘ-ಸಂಸ್ಥೆಗಳ ಪಟ್ಟು
ಸಾಂದರ್ಭಿಕ ಚಿತ್ರ
Image Credit source: TV9 Network

Updated on: Feb 01, 2026 | 7:33 AM

ಬೆಂಗಳೂರು, ಫೆಬ್ರವರಿ 1: ಆರೇಳು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಪಾಲಿಕೆ (GBA) ಚುನಾವಣೆಗೆ ರಾಜ್ಯ ಚುನಾವಣಾ ಆಯೋಗ ರೆಡಿಯಾಗಿದೆ. ಸುಪ್ರೀಂ ಕೋರ್ಟ್ ಸೂಚನೆ ಬೆನ್ನಲ್ಲೇ ಕೆಲಸ ಕಾರ್ಯಗಳು ಭರದಿಂದ ಸಾಗಿದ್ದು, ಮತದಾರರ ಅಂತಿಮ ಪಟ್ಟಿ ಹಾಗೂ ಚುನಾವಣಾ ದಿನಾಂಕ‌ ಘೋಷಣೆ ಆಗೋದೊಂದೇ ಬಾಕಿ ಇದೆ. ಉಳಿದಂತೆ 369 ವಾರ್ಡ್ ಹಾಗೂ ಮೀಸಲಾತಿ ಎಲ್ಲವೂ ನಿಗದಿಯಾಗಿದೆ. ಆದರೆ ಈ ಬಾರಿಯ ಚುನಾವಣೆಗೆ ರಾಜ್ಯ ಚುನಾವಣ ಆಯೋಗ ಬ್ಯಾಲೆಟ್ ಪೇಪರ್ ಬಳಕೆ ಮಾಡಲು ಮುಂದಾಗಿರುವುದು ಸಾರ್ವಜನಿಕ ಸಂಘ, ಸಂಸ್ಥೆಗಳ ಸಿಟ್ಟಿಗೆ ಕಾರಣವಾಗಿದೆ.

ಬಿ ಪ್ಯಾಕ್, ಸಿಟಿಜನ್ಸ್ ಫಾರ್ ಸಿಟಿಜನ್ಸ್ ಸೇರಿದ ನಗರದ ಹಲವು ಸಂಘ, ಸಂಸ್ಥೆಗಳು ಬ್ಯಾಲೆಟ್ ಪೇಪರ್​​ಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ. ಅಲ್ಲದೆ, ರಾಜ್ಯ ಚುನಾವಣಾ ಆಯೋಗದ ಆಯುಕ್ತ ಸಂಗ್ರೇಶಿಗೆ ಈ ಬಗ್ಗೆ ಮನವಿಯನ್ನೂ ಕೊಟ್ಟಿದ್ದು ಬ್ಯಾಲೆಟ್ ಪೇಪರ್ ಕೈ ಬಿಟ್ಟು ಇವಿಎಂ ಅನ್ನೇ ಬಳಸುವಂತೆ ಕೇಳಿಕೊಂಡಿದೆ. ತಂತ್ರಜ್ಞಾನದಲ್ಲಿ ಜಾಗತಿಕವಾಗಿ ಹೆಸರು ಮಾಡಿರುವ ಬೆಂಗಳೂರಿನ ಪಾಲಿಕೆ ಚುನಾವಣೆ ಬ್ಯಾಲೆಟ್ ಪೇಪರ್​ನಲ್ಲಿ ನಡೆಸಿದರೆ ಅದು ಬೆಂಗಳೂರಿಗೆ ಅವಮಾನ ಮಾಡಿದಂತೆ ಎಂಬುದು ಸಂಘ, ಸಂಸ್ಥೆಗಳ ವಾದ.

ಆದರೆ, ರಾಜ್ಯ ಚುನಾವಣ ಆಯೋಗ ಬ್ಯಾಲೆಟ್ ಪೇಪರ್ ಕೈ ಬಿಡುವ ಲಕ್ಷಣ ಕಾಣುತ್ತಿಲ್ಲ. ಚುನಾವಣೆಗೆ ಬೇಕಾದ ಸಿದ್ಧತೆಗಳು ಬಹುತೇಕ ಅಂತಿಮ ಹಂತಕ್ಕೆ ಬಂದಿದ್ದು, ಈವರೆಗೆ ಆಯೋಗದಿಂದ ಚುನಾವಣಾಧಿಕಾರಿಗಳಿಗೆ ಈ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲ. ಹೀಗಾಗಿ ಬ್ಯಾಲೆಟ್ ಪೇಪರ್​​ನಲ್ಲೇ ಚುನಾವಣೆ ಎಂಬುದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಪ್ರತಿಕ್ರಿಯೆ.

ಇದನ್ನೂ ಓದಿ: ಇವಿಎಂ ಬಗ್ಗೆ ಕರ್ನಾಟಕದ ಬಹುಪಾಲು ಜನರಿಗಿದೆ ವಿಶ್ವಾಸ: ಸಿಂ ಸಿದ್ದರಾಮಯ್ಯ, ಖರ್ಗೆ ತವರಲ್ಲೇ ಹೆಚ್ಚು!

ಮಾರ್ಚ್ 26ಕ್ಕೆ ಶಾಲಾ ಮಕ್ಕಳ ಪರೀಕ್ಷೆ ಮುಕ್ತಾಯವಾಗಲಿದೆ. ಹೀಗಾಗಿ ಮಾರ್ಚ್ 16ಕ್ಕೆ ಮತದಾರರ ಅಂತಿಮ ಪಟ್ಟಿ ಬಿಡುಗಡೆಗೊಳಿಸಿ ಜೂನ್ 30ರ ಒಳಗಾಗಿ ನೂತನ ಕೌನ್ಸಿಲ್ ಸದಸ್ಯರ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿರಬೇಕು ಎನ್ನುವುದು ಸುಪ್ರೀಂ ಕೋರ್ಟ್ ಆದೇಶ. ಇದರ ನಡುವೆ ಕೇಳಿ ಬಂದಿರುವ ಬ್ಯಾಲೆಟ್ ಪೇಪರ್​ಗೆ ವಿರೋಧವನ್ನು ರಾಜ್ಯ ಚುನಾವಣಾ ಆಯೋಗ ಹೇಗೆ ನಿಭಾಯಿಸುತ್ತೆ ಎನ್ನುವುದನ್ನು ಕಾದು ನೋಡಬೇಕು.

ವರದಿ: ಅರುಣ್ ಕುಮಾರ್, ಟಿವಿ9 ಬೆಂಗಳೂರು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ