ಗ್ರೇಟರ್ ಬೆಂಗಳೂರು ಪ್ರಾಧಿಕಾರದ 5 ನಗರ ಪಾಲಿಕೆಯ ಮತದಾರರ ಅಂತಿಮ ಪಟ್ಟಿಪ್ರಕಟ

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಬರುವ 5 ನಗರ ಪಾಲಿಕೆಗಳ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ಬಗ್ಗೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಸುದ್ದಿಗೋಷ್ಠಿಯಲ್ಲಿ ಮತದಾರರ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಮತದಾರರು, ಒಟ್ಟು ವಾರ್ಡ್‌ಗಳು ಮತ್ತು ಯಾವ ವಾರ್ಡ್‌ಗಳಲ್ಲಿ ಹೆಚ್ಚು ಮತದಾರರಿದ್ದಾರೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರದ 5 ನಗರ ಪಾಲಿಕೆಯ ಮತದಾರರ ಅಂತಿಮ ಪಟ್ಟಿಪ್ರಕಟ
ಗ್ರೇಟರ್ ಬೆಂಗಳೂರು ಪ್ರಾಧಿಕಾರ
Image Credit source: newsfirstprime
Edited By:

Updated on: Apr 18, 2026 | 3:07 PM

ಬೆಂಗಳೂರು, ಏಪ್ರಿಲ್​ 18: ಜಿಬಿಎ ಚುನಾವಣೆ (GBA Election) ಅವಧಿಯನ್ನು ಮುಂದೂಡುವ ಬಗ್ಗೆ ಮಾತುಗಳು ಕೇಳಿಬರುತ್ತಿರುವ ಮಧ್ಯೆ ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರದ 5 ನಗರ ಪಾಲಿಕೆಯ ಮತಪಟ್ಟಿಯನ್ನು (Voter List) ಬಿಡುಗಡೆ ಮಾಡಿದೆ. ರಾಜ್ಯ ಚುನಾವಣಾ ಆಯೋಗದ ಮಾರ್ಗದರ್ಶನದ ಮೇರೆಗೆ ಜಿಬಿಎ ಒಟ್ಟು 5 ನಗರ ಪಾಲಿಕೆಗಳ 369 ವಾರ್ಡ್‌ಗಳ ಅಂತಿಮ ಪಟ್ಟಿಯಲ್ಲಿ 88,95,361 ಮತದಾರರನ್ನು ಗುರುತು ಮಾಡಲಾಗಿದೆ.

ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಹೇಳಿದ್ದಿಷ್ಟು 

ಈ ಬಗ್ಗೆ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಪ್ರತಿಕ್ರಿಯಿಸಿದ್ದು, ಒಟ್ಟು 88,95,361 ಮತದಾರರ ಪೈಕಿ ಪುರುಷ ಮತದಾರರು 45,69,752, ಮಹಿಳಾ ಮತದಾರರು 43,21,143, ಇತರೆ 1,633 ಮತದಾರರು ಇದ್ದಾರೆ. ಬೆಂಗಳೂರು ದಕ್ಷಿಣ ವಾರ್ಡ್ 51 (ಸುಬ್ರಮಣ್ಯಪುರ)ರಲ್ಲಿ ಅತಿ ಹೆಚ್ಚು ಅಂದರೆ 54,026 ಮತದಾರರಿದ್ದಾರೆ. ಬೆಂಗಳೂರು ಪೂರ್ವ ವಾರ್ಡ್ 16(ಕೊತ್ತೂರು)ನಲ್ಲಿ 10,940 ಅತಿ ಕಡಿಮೆ ಮತದಾರರಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಜಿಬಿಎ ಚುನಾವಣೆ ಅವಧಿಯನ್ನು ಮುಂದೂಡುವಂತೆ ಆಯೋಗಕ್ಕೆ ಸರ್ಕಾರ ಪತ್ರ, ಕಾರಣವೇನು?

ರಾಜ್ಯ ಚುನಾವಣಾ ಆಯೋಗದ ಮಾರ್ಗದರ್ಶನದ ಮೇರೆಗೆ ಕರಡು ಮತದಾರರ ಪಟ್ಟಿಯನ್ನ ಮಾರ್ಚ್ 9ರಂದು ಬಿಡುಗಡೆ ಮಾಡಲಾಗಿತ್ತು. ಸಾರ್ವಜನಿಕ ಆಕ್ಷೇಪಣೆಗಳಿಗೆ ಅವಕಾಶ ನೀಡಲಾಗಿತ್ತು. ಆಕ್ಷೇಪಣೆ ಬಂದ ಬಳಿಕ ಎಲ್ಲವನ್ನು ಪರಿಶೀಲನೆ ಮಾಡಿ ಸರಿಪಡಿಸಲಾಗಿದೆ. ಇದೀಗ ಅಂತಿಮ‌ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದ್ದೇವೆ. ಅಂತಿಮ ಮತದಾರರ ಪಟ್ಟಿಯಲ್ಲಿ 88,95,361 ಮತದಾರರನ್ನ ಗುರುತು ಮಾಡಲಾಗಿದೆ. ಒಟ್ಟು 369 ವಾರ್ಡ್‌ಗಳಿವೆ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಹೇಳಿದ್ದಾರೆ.

ಜಿಬಿಎ ಚುನಾವಣೆ ಮುಂದೂಡುವ ವಿಚಾರ: ಸರ್ಕಾರದ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಕಿಡಿ 

ಜೂನ್ ಅಂತ್ಯದೊಳಗೆ ಜಿಬಿಎ ಚುನಾವಣೆ ಮಾಡಿ ಮುಗಿಸುವಂತೆ ರಾಜ್ಯ ಸರ್ಕಾರ ಮತ್ತು ಚುನಾವಣಾ ಆಯೋಗಕ್ಕೆ ಈ ಹಿಂದೆಯೇ ಸುಪ್ರೀಂಕೋರ್ಟ್ ನಿರ್ದೇಶಿಸಿತ್ತು. ಆದರೆ ಸದ್ಯ ಜಿಬಿಎ ಚುನಾವಣೆ ಅವಧಿಯನ್ನು ಮುಂದೂಡುವಂತೆ ಸರ್ಕಾರವೇ ಆಯೋಗಕ್ಕೆ ಪತ್ರ ಬರೆದಿದೆ. ಈ ಬಗ್ಗೆ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್​​ನಲ್ಲಿ ಒಳಬೇಗುದಿ ಹೆಚ್ಚಾಗಿದೆ. ಇನ್ನು ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಅಂತ ಅವರಿಗೆ ಗೊತ್ತಿದೆ. ಅದಕ್ಕೆ ಜಿಬಿಎ ಚುನಾವಣೆ ಮುಂದೂಡಿ ಅಂತ ಚುನಾವಣಾ ಆಯೋಗಕ್ಕೆ ಹೇಳಿದ್ದಾರೆ. ಚುನಾವಣೆಯಲ್ಲಿ ಸೋಲಾಗುವುದನ್ನು ತಪ್ಪಿಸಲು ಹೀಗೆ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us