
ಬೆಂಗಳೂರು, ನವೆಂಬರ್ 09: ಕನ್ನಡ ರಾಜ್ಯೋತ್ಸವ ಹಿನ್ನೆಲೆ ರಾಜ್ಯ ಸರ್ಕಾರ ಆಟೋ, ಕ್ಯಾಬ್, ಗೂಡ್ಸ್ ಚಾಲಕರಿಗೆ ಗುಡ್ ನ್ಯೂಸ್ವೊಂದನ್ನು ನೀಡಿದೆ. ಸರ್ಕಾರದ ಹಲವು ಯೋಜನೆಗಳ ಅಡಿಯಲ್ಲಿ ನೀಡುವ ವಾಹನಗಳಿಗೆ ಹಳದಿ-ಕೆಂಪು ಬಣ್ಣ ಕಡ್ಡಾಯ ಮಾಡಿ ಆದೇಶ ಹೊರಡಿಸಲಾಗಿದೆ. ಇದಕ್ಕೆ ಆಟೋ ಮತ್ತು ಕ್ಯಾಬ್ ಚಾಲಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಕನ್ನಡ ರಾಜ್ಯೋತ್ಸವದ ಹಿನ್ನೆಲೆ ರಾಜ್ಯ ಸರ್ಕಾರದಿಂದ ರಾಜ್ಯದ ಕ್ಯಾಬ್, ಆಟೋ ಚಾಲಕರಿಗೆ ಗುಡ್ ನ್ಯೂಸ್ ನೀಡಲಾಗಿದೆ. ಇನ್ಮುಂದೆ ರಾಜ್ಯ ಸರ್ಕಾರದಿಂದ ನೀಡುವ ಎಲ್ಲಾ ಮಾದರಿಯ ಆಟೋ, ಕ್ಯಾಬ್‌ಗಳಿಗೆ ಸಂಪೂರ್ಣ ಹಳದಿ, ಕೆಂಪು ಬಣ್ಣವನ್ನು ಪೇಂಟಿಂಗ್ ಮಾಡಿಕೊಳ್ಳಲು ಅವಕಾಶ ನೀಡಿದೆ. ಹಲವು ವರ್ಷಗಳಿಂದ ಆಟೋ, ಕ್ಯಾಬ್ ಚಾಲಕರು ಹಳದಿ, ಕೆಂಪು ಪೇಂಟಿಂಗ್ ಮಾಡಿಕೊಳ್ಳಲು ಅವಕಾಶ ಕೇಳಿದ್ದರು.
ಇದನ್ನೂ ಓದಿ: ಬೆಂಗಳೂರು ಆಸ್ತಿ ಮಾಲೀಕರಿಗೆ ಸಿಎಂ ಡಿ.ಕೆ. ಶಿವಕುಮಾರ್ ವಾರ್ನಿಂಗ್: ಖಾಲಿ ಜಾಗಕ್ಕೆ ಕಾಂಪೌಂಡ್ ಹಾಕಿ, ಇಲ್ಲದಿದ್ದರೆ ನೋಟಿಸ್
ರಾಜ್ಯ ಸರ್ಕಾರದ ಹಲವು ಯೋಜನೆಗಳ ಅಡಿಯಲ್ಲಿ ಉಚಿತವಾಗಿ ಮತ್ತು ಸಬ್ಸಿಡಿ ಆಧಾರದಲ್ಲಿ ಆಟೋ, ಕ್ಯಾಬ್ ಗಳನ್ನು ಪ್ರತಿವರ್ಷ ನೀಡುತ್ತಿದೆ. ಸಾರಥಿ ಸ್ವಾವಲಂಬಿ ಯೋಜನೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ವ ಸಂಖ್ಯಾಂತರ ನಿಗಮ ಮಂಡಳಿ, ದೇವರಾಜು ಅರಸು ನಿಗಮ ಮಂಡಳಿ, ಒಕ್ಕಲಿಗ ಅಭಿವೃದ್ಧಿ ನಿಗಮ ಮಂಡಳಿ ಅಡಿಯಲ್ಲಿ ಫಲಾನುಭವಿಗಳಿಗೆ ಆಟೋ, ಕ್ಯಾಬ್, ಗೂಡ್ಸ್ ಆಟೋ, ತಳ್ಳೊ ಗಾಡಿಗಳನ್ನು ನೀಡಲಾಗುತ್ತದೆ.
ಇನ್ನು ಕರ್ನಾಟಕ ಸರ್ಕಾರದ ಯೋಜನೆಗಳಡಿ ನೀಡುವ ವಾಹನಗಳಿಗೆ ಹಳದಿ-ಕೆಂಪು ಬಣ್ಣದ ಜೊತೆಗೆ ರಾಜ್ಯ ಲಾಂಛನವನ್ನು ಕಡ್ಡಾಯ ಮಾಡಲಾಗಿದೆ. ಸಾರ್ವಜನಿಕವಾಗಿ ಸುಲಭವಾಗಿ ಗುರುತಿಸಲು ಅನುಕೂಲವಾಗುವಂತೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳು, ನಿಗಮ ಮಂಡಳಿಗಳು ಮತ್ತು ಪ್ರಾಧಿಕಾರಗಳು ಈ ನಿಯಮವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು. ಸಚಿವ ಸಂಪುಟ ಅನುಮೋದಿಸಿರುವ ವಿನ್ಯಾಸಗಳಂತೆ, ಆಯಾ ಇಲಾಖೆಗಳು ಸರಿಯಾಗಿ ಸರ್ಕಾರಿ ಬ್ರಾಂಡಿಂಗ್ ಮಾಡುತ್ತಿರುವುದನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ವಹಿಸಲಾಗಿದೆ.
ಈ ನಿರ್ಧಾರದಿಂದಾಗಿ ಸರ್ಕಾರದ ವಿವಿಧ ಪ್ರಾಯೋಜಿತ ಯೋಜನೆಗಳ ಅಡಿಯಲ್ಲಿ ಸೌಲಭ್ಯ ಪಡೆದ ವಾಹನಗಳು ಮತ್ತು ಉಪಕರಣಗಳನ್ನು ಸಾರ್ವಜನಿಕವಾಗಿ ಸುಲಭವಾಗಿ ಗುರುತಿಸಲು ಅನುಕೂಲವಾಗಲಿದೆ. ಈ ಬಗ್ಗೆ ಮಾತನಾಡಿದ ಆಟೋ ಚಾಲಕಿ ನಾಗರತ್ನ, ‘ಇದು ಆಟೋ ಚಾಲಕರಿಗೆ ಹೆಮ್ಮೆಯ ವಿಚಾರ. ಬೆಂಗಳೂರಲ್ಲಿ ಕನ್ನಡ ಕಳೆದು ಹೋಗ್ತಿದ್ದು, ಇದರಿಂದ ಕನ್ನಡದ ಬಗ್ಗೆ ಒಂದಷ್ಟು ಜಾಗೃತಿಯಾಗಲಿದೆ’ ಎಂದಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಮುಂದುವರೆದ ರಸ್ತೆ ಗುಂಡಿಗಳ ಕಾಟ: ಖುದ್ದು ಗುಂಡಿ ಮುಚ್ಚಿದ ಸಂಚಾರಿ ಪೊಲೀಸರು
ಒಟ್ಟಿನಲ್ಲಿ ರಾಜ್ಯ ಸರ್ಕಾರದ ಹಲವು ಪ್ರಾಧಿಕಾರಗಳ ಅಡಿಯಲ್ಲಿ ಸಾವಿರಾರು ಕಾರು, ಆಟೋ, ಗೂಡ್ಸ್ ವಾಹನಗಳನ್ನು ಖರೀದಿಸಲು ಸಬ್ಸಿಡಿ ನೀಡ್ತಿದ್ದು, ಇನ್ಮುಂದೆ ಈ ಎಲ್ಲಾ ವಾಹನಗಳ ಮೇಲೂ ಕನ್ನಡದ ಕಂಪು ರಾರಾಜಿಸಲಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.