Toll Free 155245: ಮನೆ ಬಾಗಿಲಿಗೆ ಪಿಂಚಣಿ ಸೌಲಭ್ಯ; ಕರ್ನಾಟಕ ಸರ್ಕಾರದ ಹೊಸ ಯೋಜನೆ
ದೂರವಾಣಿ ಕರೆ ಮೂಲಕ (Toll Free Number) ಪಿಂಚಣಿ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ.
ಬೆಂಗಳೂರು: ಆರ್ಥಿಕ ಸಂಕಷ್ಟದಲ್ಲಿರುವ ಬಡವರಿಗೆ ಪಿಂಚಣಿ (Pension) ಒದಗಿಸಲು ಕರ್ನಾಟಕ ಸರ್ಕಾರ (Govt of Karnataka) ಹೊಸ ಯೋಜನೆಯೊಂದನ್ನು ರೂಪಿಸಿದೆ. ದೂರವಾಣಿ ಕರೆ ಮೂಲಕ (Toll Free Number) ಪಿಂಚಣಿ ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ. ಕುಟುಂಬದ ವಾರ್ಷಿಕ ಆದಾಯವು ₹ 32,000ಕ್ಕಿಂತ ಕಡಿಮೆ ಇರುವ ವೃದ್ಧರು, ವಿಶೇಷ ಚೇತನರು, ವಿಧವೆಯರು, ಅವಿವಾಹಿತ ಹಾಗೂ ವಿಚ್ಛೇದಿತ ಮಹಿಳೆಯರು 155245 ಸಂಖ್ಯೆಗೆ ಕರೆ ಮಾಡಿ ಆಧಾರ್ ಸಂಖ್ಯೆ ನೀಡುವ ಮೂಲಕ ಪಿಂಚಣಿ ಸೌಲಭ್ಯಕ್ಕೆ ಕೋರಿಕೆ ಸಲ್ಲಿಸಬಹುದು.
ಕೋರಿಕೆ ಸಲ್ಲಿಕೆಯಾದ ನಂತರ ಆಯಾ ವ್ಯಾಪ್ತಿಯ ಗ್ರಾಮ ಲೆಕ್ಕಾಧಿಕಾರಿಗಳು ಅರ್ಜಿದಾರರ ಮನೆಬಾಗಿಲಿಗೆ ಭೇಟಿ ನೀಡಿ ‘ನವೋದಯ’ ಮೊಬೈಲ್ ಆ್ಯಪ್ ಮೂಲಕ ಅರ್ಜಿದಾರರಿಂದ ಮಾಹಿತಿ ಹಾಗೂ ದಾಖಲಾತಿಗಳನ್ನು ಸಂಗ್ರಹಿಸುತ್ತಾರೆ. ಗ್ರಾಮ ಲೆಕ್ಕಾಧಿಕಾರಿಗಳು ಮನೆಗೆ ಭೇಟಿ ನೀಡಿದಾಗ ಆಧಾರ್ ಕಾರ್ಡ್, ಬ್ಯಾಂಕ್ ಅಥವಾ ಅಂಚೆ ಕಚೇರಿಯಲ್ಲಿ ತೆರೆದಿರುವ ಉಳಿತಾಯ ಖಾತೆಯ ವಿವರ, ವಿಳಾಸ ಮತ್ತು ವಯೋಮಾನದ ಪುರಾವೆ ನೀಡಬೇಕು. ಈ ಮಾಹಿತಿಗಳನ್ನು ದೃಢೀಕರಿಸಲು ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ ಅಥವಾ ಸರ್ಕಾರ ನೀಡಿರುವ ಯಾವುದೇ ಗುರುತಿನ ಚೀಟಿ ಬಳಸಬಹುದಾಗಿದೆ. ಈ ವೇಳೆ ಮೊಬೈಲ್ ಆ್ಯಪ್ ಮೂಲಕ ಅರ್ಜಿದಾರರ ಭಾವಚಿತ್ರವನ್ನು ಗ್ರಾಮ ಲೆಕ್ಕಾಧಿಕಾರಿಗಳು ಸೆರೆಹಿಡಿಯುತ್ತಾರೆ.
ಅರ್ಹರಿಗೆ ಅರ್ಜಿ ಸಲ್ಲಿಕೆಯಾದ 72 ಗಂಟೆಗಳ ಒಳಗೆ ನಾಡ ಕಚೇರಿಯಿಂದ ಪಿಂಚಣಿ ಮಂಜೂರಾತಿ ಆದೇಶ ವಿತರಿಸಲಾಗುವುದು ಎಂದು ಬಿಜೆಪಿ ಕರ್ನಾಟಕ ಘಟಕವು ತಿಳಿಸಿದೆ. ಕೇಂದ್ರ ಸರ್ಕಾರ ಪ್ರಾಯೋಜಿಸಿರುವ ‘ರಾಷ್ಟ್ರೀಯ ಸಾಮಾಜಿಕ ಖಾತ್ರಿ ಯೋಜನೆ’ (National Social Assistance Scheme – NSAS) ಅನ್ವಯ ಒಟ್ಟು 13.98 ಲಕ್ಷ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮೂಲಕ ಮಾಸಿಕ ಪಿಂಚಣಿ ಸೌಲಭ್ಯ ನೀಡಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಬಿಜೆಪಿ ಹೇಳಿದೆ.
ಏನಿದು ಕಂದಾಯ ಸಹಾಯವಾಣಿ?
ದೇಶದಲ್ಲೇ ಪ್ರಥಮ ಬಾರಿಗೆ ಕಂದಾಯ ಇಲಾಖೆಯ (Revenue Department) ಸೇವೆಗಳನ್ನು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸಲು ಅನುಕೂಲವಾಗುವಂತೆ ಅಭಿವೃದ್ಧಿಪಡಿಸಿದ ಹಲೋ ಕಂದಾಯ ಸಚಿವರೇ ಸಹಾಯವಾಣಿ (Toll Free) ಯೋಜನೆ ಇತ್ತೀಚೆಗೆ ಲೋಕಾರ್ಪಣೆಯಾಯಿತು. ವಿಧಾನಸೌಧದ ಬ್ಯಾಂಕ್ವೇಟ್ ಹಾಲ್ನಲ್ಲಿ ನಡೆದ ಸಮಾರಂಭದಲ್ಲಿ ಸಹಾಯವಾಣಿಗೆ (HelpLine) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಮತ್ತು ಕಂದಾಯ ಸಚಿವ ಆರ್.ಅಶೋಕ (R Ashoka) ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಶಿವಾಜಿನಗರ ಶಾಸಕ ರಿಜ್ವಾನ್ ಅರ್ಷದ್ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.
ತಾಜಾ ಮಾಹಿತಿಗೆ ಲಿಂಕ್ ಕ್ಲಿಕ್ ಮಾಡಿ