ಮೊಮ್ಮಗಳನ್ನು ನೋಡಲು ಬಂದ ಅಜ್ಜಿ ಮೇಲೆ ಹಲ್ಲೆ: ಮಗಳ ಇ-ಮೇಲ್‌ನಲ್ಲಿ ಪತ್ತೆಯಾಯ್ತು ಗಂಡನ ಕ್ರೌರ್ಯ

ಮೊಮ್ಮಗಳನ್ನು ನೋಡಲು ಬಂದ ಅತ್ತೆ ಮೇಲೆ ಅಳಿಯನಿಂದ ಹಲ್ಲೆ ಮಾಡಿರುವಂತಹ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಕುರಿತಾಗಿ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​​ ಕೂಡ ದಾಖಲಾಗಿದೆ. ಇನ್ನು ಇತ್ತೀಚೆಗೆ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಳು. ಆದರೆ ಅಳಿಯನ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಅಸಲಿ ಸತ್ಯ ಇದೀಗ ಬಯಲಾಗಿದೆ.

ಮೊಮ್ಮಗಳನ್ನು ನೋಡಲು ಬಂದ ಅಜ್ಜಿ ಮೇಲೆ ಹಲ್ಲೆ: ಮಗಳ ಇ-ಮೇಲ್‌ನಲ್ಲಿ ಪತ್ತೆಯಾಯ್ತು ಗಂಡನ ಕ್ರೌರ್ಯ
ಪ್ರಾತಿನಿಧಿಕ ಚಿತ್ರ
Image Credit source: Getty images
Edited By:

Updated on: Oct 17, 2026 | 10:03 PM

ಬೆಂಗಳೂರು, ಅಕ್ಟೋಬರ್​​ 17: ಆತ ಕೆಎಎಸ್ ಪಾಸ್ ಆಗಿದ್ದೀನಿ ಅಂತ ಸುಳ್ಳು ಹೇಳಿ ಯುವತಿಯನ್ನ ಮದುವೆಯಾಗಿದ್ದ. ಆದರೆ ಮದುವೆ ನಂತರ ಆತನ ನಿಜವಾದ ಮುಖವಾಡ ಬಯಲಾಗಿದೆ. ಮದುವೆಯಾಗಿ‌ ಎರಡೇ ತಿಂಗಳಿಗೆ ಹೆಂಡತಿಯನ್ನ ಕಾಲು ಮುರಿದು ತವರಿಗೆ ಕಳಿಸಿದ್ದ. ಈತನ ಹಿಂಸೆಗೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಜೊತೆಗೆ ಮೊಮ್ಮಗಳನ್ನ ನೋಡಲು ಹೋದ ಅತ್ತೆ ಮೇಲೆ ಮನಸೋ ಇಚ್ಚೆ ಹಲ್ಲೆ ನಡೆಸಿ ಕ್ರೌರ್ಯ ಎಸಗಿರುವ ಘಟನೆ ಯಲಹಂಕದಲ್ಲಿ ನಡೆದಿದೆ.

ನಡೆದಿದ್ದೇನು?

ಮಗಳನ್ನ ಕಳೆದುಕೊಂಡ ತಾಯಿಗೆ ಇದೀಗ ಅಳಿಯನಿಂದಲೇ ಮತ್ತೊಂದು ಸಂಕಷ್ಟ ಎದುರಾಗಿದೆ. ದೇವನಹಳ್ಳಿ ಸರ್ಕಾರಿ ಕಾಲೇಜಿನ ಉಪನ್ಯಾಸಕಿ ಕವಿತಾ ಅವರ ಮಗಳು ಶರಣ್ಯ ಆರು ತಿಂಗಳ ಹಿಂದಷ್ಟೇ ಮೃತಪಟ್ಟಿದ್ದರು. ತಾಯಿಯನ್ನು ಕಳೆದುಕೊಂಡಿದ್ದ 7 ವರ್ಷದ ಮೊಮ್ಮಗಳನ್ನು ನೋಡಿಕೊಳ್ಳುವ ಆಸೆಯಿಂದ ಕವಿತಾ ವಾರಕ್ಕೊಮ್ಮೆ ಅಳಿಯ ಮಂಜುನಾಥ್ ಮನೆಗೆ ಹೋಗುತ್ತಿದ್ದರು. ಆದರೆ ಅಕ್ಟೋಬರ್ 3ರಂದು ಮೊಮ್ಮಗಳನ್ನು ನೋಡಲು ಹೋಗಿದ್ದ ಕವಿತಾ ಮೇಲೆ ಅಳಿಯ ಮಂಜುನಾಥ್ ಹಲ್ಲೆ ಮಾಡಿದ್ದ. ಏಕಾಏಕಿ ಬಂದು ತಲೆಗೆ ಬಲವಾಗಿ ಹೊಡೆದು, ಕೂದಲು ಹಿಡಿದು ಗೋಡೆಗೆ ಗುದ್ದಿ ಕ್ರೌರ್ಯ ಎಸಗಿದ್ದ‌. ಈ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಮಂಜುನಾಥ್ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿತ್ತು.

ಪೊಲೀಸರ ಕರ್ತವ್ಯಕ್ಕೆ ಅಡ್ಡಿ

ಈ ಮಂಜುನಾಥ್, ಬೈಯಪ್ಪ ಮಾಜಿ ಅಧ್ಯಕ್ಷ ಶಾಂತಕುಮಾರ್ ಅವರ ಸಹೋದರ. ಪ್ರಕರಣದ ತನಿಖೆ ಭಾಗವಾಗಿ ಪೊಲೀಸರು ಸ್ಥಳ ಮಹಜರ್ ನಡೆಸಲು ಶಾಂತಕುಮಾರ್ ಅವರ ಮನೆಗೆ ತೆರಳಿದ್ದರು. ಆದರೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿ, ಮನೆಯೊಳಗೆ ಪ್ರವೇಶಿಸಲು ಅವಕಾಶ ನೀಡರಲಿಲ್ಲ. ಹೀಗಾಗಿ ಪೊಲೀಸರು ರಸ್ತೆಯಲ್ಲೇ ಸ್ಥಳ ಮಹಜರ್ ಮುಗಿಸಿ ವಾಪಸ್ಸಾಗಿದ್ದರು. ಮತ್ತೊಂದೆಡೆ, ಪ್ರಕರಣದ ಆರೋಪಿ ಮಂಜುನಾಥ್‌ನನ್ನು ಸ್ಟೇಷನ್ ಬೇಲ್ ಮೂಲಕ ಬಿಡುಗಡೆ ಮಾಡಲಾಗಿತ್ತು.

ಶರಣ್ಯಗೆ ಚಿತ್ರಹಿಂಸೆ: ಮನನೊಂದು ಆತ್ಮಹತ್ಯೆ 

2017ರಲ್ಲಿ ಶರಣ್ಯ ಜೊತೆ ಮಂಜುನಾಥ್ ಮದುವೆಯಾಗಿದ್ದ. ಫ್ಯಾಷನ್ ಡಿಸೈನಿಂಗ್‌ನಲ್ಲಿ ಗೋಲ್ಡ್ ಮೆಡಲ್ ಪಡೆದಿದ್ದ ಶರಣ್ಯಳನ್ನು ಕೆಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದೇನೆ ಎಂದು ಸುಳ್ಳು ಹೇಳಿ ಮದುವೆಯಾಗಿದ್ದ. ಆ ಬಳಿಕ ಶರಣ್ಯಗೆ ಚಿತ್ರಹಿಂಸೆ ನೀಡಲು ಮಂಜುನಾಥ್ ಮುಂದಾಗಿದ್ದ. ಇದ್ರಿಂದ ನೊಂದು ಕಳೆದ ಏಪ್ರಿಲ್ 9ರಂದು ಶರಣ್ಯ ಆತ್ಮಹತ್ಯೆ ಮಾಡಿಕೊಂಡಿದ್ದರು. ಮಗಳ ಸಾವಿನ ಬಗ್ಗೆ ದೂರು ನೀಡಲು ಪೋಷಕರು ಮುಂದಾದಾಗ ಮಂಜುನಾಥ್ ಬೆದರಿಕೆ ಹಾಕಿದ್ದ. ಮೊಮ್ಮಗಳ ಭವಿಷ್ಯದ ವಿಚಾರ ಮುಂದಿಟ್ಟು ಪೋಷಕರ ಮೇಲೆ ಒತ್ತಡ ಹೇರಿದ್ದ. ಹೀಗಾಗಿ ಶರಣ್ಯ ಪೋಷಕರು ಮಗಳದ್ದು ಸಹಜ ಸಾವು ಎಂದು ಒಪ್ಪಿಕೊಂಡು ಪ್ರಕರಣ ಹಿಂಪಡೆದಿದ್ದರು.

ಮಗಳ ಇ-ಮೇಲ್‌ನಲ್ಲಿ ಕಿರುಕುಳದ ವಿವರ ಪತ್ತೆ

ಇತ್ತೀಚೆಗೆ ಶರಣ್ಯ ಅವರ ಇ-ಮೇಲ್‌ಗಳನ್ನು ಪರಿಶೀಲಿಸಿದಾಗ ಗಂಡನ ಕಿರುಕುಳದ ಬಗ್ಗೆ ವಿವರ ಪತ್ತೆಯಾಗಿದೆ. ಮಂಜುನಾಥ್‌ಗೆ ಜಿಮ್‌ನಲ್ಲಿ ಪರಿಚಯವಾಗಿದ್ದ ಮಹಿಳೆಯೊಬ್ಬರ ಜೊತೆ ಅಕ್ರಮ ಸಂಬಂಧವಿತ್ತು ಎಂಬುದಕ್ಕೆ ಇ-ಮೇಲ್‌ನಲ್ಲಿ ಸಾಕ್ಷ್ಯಗಳು ಪತ್ತೆಯಾಗಿವೆ. ಇದೇ ವಿಚಾರವಾಗಿ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಅಷ್ಟೇ ಅಲ್ಲ, ‘ನಾನೇ ನಿನ್ನನ್ನು ಕೊಲೆ ಮಾಡುತ್ತೇನೆಂದು ಮಂಜುನಾಥ್ ಬೆದರಿಕೆ ಹಾಕುತ್ತಿದ್ದ’ ಎಂದು ಶರಣ್ಯ ತನ್ನ ಇ-ಮೇಲ್‌ನಲ್ಲಿ ದಾಖಲಿಸಿದ್ದಳು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಟೆಕ್ಕಿ ಪೂಜಾ ಅನುಮಾನಾಸ್ಪದ ಸಾವಿಗೆ ರೋಚಕ ಟ್ವಿಸ್ಟ್: 6 ತಿಂಗಳ ಬಳಿಕ ಸತ್ಯಾಂಶ ಬಯಲು

ಇದೀಗ ಮಗಳ ಸಾವಿನ ಪ್ರಕರಣವನ್ನು ಮರುತನಿಖೆ ನಡೆಸುವಂತೆ ಪೋಷಕರು ಆಗ್ರಹಿಸಿದ್ದಾರೆ. ಈ ಸಂಬಂಧ ಶರಣ್ಯ ತಾಯಿ ಕವಿತಾ ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ್ದಾರೆ. ಇ-ಮೇಲ್‌ನಲ್ಲಿ ಪತ್ತೆಯಾದ ದಾಖಲೆಗಳು, ಮಂಜುನಾಥ್ ವಿರುದ್ಧದ ಆರೋಪಗಳು ಹಾಗೂ ಮಗಳ ಸಾವಿನ ಸುತ್ತಲಿನ ಅನುಮಾನಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಕುಟುಂಬ ಒತ್ತಾಯಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ವಿಕಾಸ್​ ಬಿಎಂ

ವಿಕಾಸ್​ ಬಿಎಂ ಅವರು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ. ಮೈಸೂರು ಯೂನಿವರ್ಸಿಟಿ ಯಲ್ಲಿ ಶಿಕ್ಷಣ ಮುಗಿಸಿ, 2014 ರಿಂದ ಎಲೆಕ್ಟ್ರಾನಿಕ್ ಮಾದ್ಯಮದಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ಸದ್ಯ ಬೆಂಗಳೂರು ಕ್ರೈಂ ವರದಿಗಾರನಾಗಿ 11 ವರ್ಷ ಸೇವೆ ಸಲ್ಲಿಸಿದ್ದಾರೆ. ಕ್ರೈಂ ರಿಪೋರ್ಟಿಂಗ್ ಹಾಗು ಇನ್ವೆಷ್ಟಿಗೇಟಿವ್ ವರದಿಗಾರರಾಗಿ ಹಾಗು ಸ್ಟಿಂಗ್ ಆಪರೇಷನ್​ಗಳನ್ನ ಮಾಡಿದ್ದಾರೆ. ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ ಸುದ್ದಿ ಮೊದಲು ಬ್ರೇಕ್ ಮಾಡಿದ್ದಲ್ಲದೆ, ಶಂಕಿತರ ಸಿಸಿ ಕ್ಯಾಮರಾ ವಿಡಿಯೋಗಳನ್ನ ಪ್ರಸರಣ ಮಾಡಿ ಸಂಸ್ಥೆಯಿಂದ ಪ್ರಶಂಸೆಗೆ ಪಾತ್ರನಾಗಿದ್ದಾರೆ. ಅಲ್ಲದೇ ಬೆಂಗಳೂರಲ್ಲಿ ಟೈಡಾಲ್ ಡ್ರಗ್ ಸೇವನೆಯ ಸ್ಟಿಂಗ್ ಆಪರೇಷನ್ ಮಾಡಿ, ಮೆಡಿಕಲ್ ಗಳಲ್ಲಿ ಟೈಡಾಲ್ ಮಾತ್ರೆಯ ಮಾರಟ ನಿಯಂತ್ರಣಕ್ಕೆ ಬರುವಂತೆ ಮಾಡಿದ್ದಾರೆ. ನೊಂದವರ ಪರವಾಗಿ ನಿಂತು ವಸ್ತುನಿಷ್ಠವಾಗಿ ಸುದ್ದಿಗಳನ್ನ ನೀಡಿ ನ್ಯಾಯ ಕೊಡಿಸುವುದು ಇವರ ಮೊದಲ ಉದ್ದೇಶ. ಸದ್ಯ ಟಿವಿ9 ಸಂಸ್ಥೆಯಲ್ಲಿ ಬೆಂಗಳೂರು ಕ್ರೈಂ ವರದಿಗಾರರಾಗಿ ಕೆಲಸ ಮಾಡುತ್ತಿದ್ದಾರೆ. ರೋಡ್ ಟ್ರಿಪ್, ಕ್ರಿಕೆಟ್‌, ವಾಲಿಬಾಲ್ ಆಡುವುದು, ಕ್ರೈಂ ಇನ್ವೆಷ್ಟಿಗೇಷನ್ ಪುಸ್ತಕ ಓದುವುದು ಮತ್ತು ಕ್ರೈಂ ತ್ರಿಲ್ಲರ್ ಸಿನಿಮಾಗಳನ್ನ ನೋಡುವುದು ಇವರ ಹವ್ಯಾಸಗಳು.

Read More
Loading...
Unable to load recommendations.
Follow Us