HD Kumaraswamy Birthday: ಹೆಚ್ ಡಿ ಕುಮಾರಸ್ವಾಮಿ ಜನುಮ ದಿನ, ಪ್ರಧಾನಿ ಶುಭ ಹಾರೈಕೆಗೆ ಭಾವುಕರಾದ ಹೆಚ್ಡಿಕೆ
ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ 66ನೇ ಹುಟ್ಟುಹಬ್ಬವನ್ನು ಮಂಡ್ಯ ಮತ್ತು ಮೈಸೂರಿನಲ್ಲಿ ಭವ್ಯವಾಗಿ ಆಚರಿಸಲಾಗುತ್ತಿದೆ. ಪ್ರಧಾನಿ ಮೋದಿ, ಮಾಜಿ ಪ್ರಧಾನಿ ದೇವೇಗೌಡರು ಹೆಚ್ಡಿಕೆಗೆ ಶುಭಾಶಯ ಕೋರಿದ್ದು, ಇಂದು ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಲಿರುವ ಅವರು ಚಾಮುಂಡೇಶ್ವರಿ ದೇವಾಲಯಕ್ಕೆ ಭೇಟಿ ನೀಡಿ, ರಾಷ್ಟ್ರಪತಿಗಳೊಂದಿಗೆ ಜಯಂತಿ ಆಚರಣೆಯಲ್ಲಿ ಭಾಗವಹಿಸಲಿದ್ದಾರೆ.

ಬೆಂಗಳೂರು, ಡಿಸೆಂಬರ್ 16: ಇಂದು ಮಾಜಿ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ (H.D.Kumaraswamy) ಅವರ 66ನೇ ಜನ್ಮ ದಿನ. ಇವರ ಜನ್ಮ ದಿನ ಪ್ರಯುಕ್ತ ಮಂಡ್ಯ ಮತ್ತು ಮೈಸೂರಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಈ ವೇಳೆ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಲಿದ್ದಾರೆ. ಇನ್ನೊಂದೆಡೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹೆಚ್. ಡಿ. ದೇವೇಗೌಡ, ಜೆಡಿಎಸ್ ಮುಖಂಡರು, ಕಾರ್ಯಕರ್ತರು ಶುಭಾಶಯಗಳನ್ನು ಕೋರುತ್ತಿದ್ದಾರೆ.
ಕುಮಾರಸ್ವಾಮಿಗೆ ಶುಭಕೋರಿದ ಪ್ರಧಾನಿ ನರೇಂದ್ರ ಮೋದಿ
HDK ಹುಟ್ಟುಬ್ಬಕ್ಕೆ ತಮ್ಮ ಎಕ್ಸ್ ಖಾತೆಯಲ್ಲಿ ಶುಭಾಶಯ ಕೋರಿರುವ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಉಕ್ಕು ಮತ್ತು ಭಾರೀ ಕೈಗಾರಿಕೆಗಳಲ್ಲಿ ತಮ್ಮ ಕೆಲಸದ ಮೂಲಕ ಆತ್ಮನಿರ್ಭರತೆಯತ್ತ ನಮ್ಮ ಪ್ರಯತ್ನಗಳನ್ನು ಬಲಪಡಿಸುತ್ತಿದ್ದೀರ. ಸಮಾಜ ಸೇವೆಯಲ್ಲಿ ನಿಮಗೆ ದೀರ್ಘ ಮತ್ತು ಆರೋಗ್ಯಕರ ಜೀವನ ಸಿಗಲಿ ಎಂದು ಹಾರೈಸಿದ್ದಾರೆ. ಮೋದಿಯ ಹಾರೈಕೆಗೆ ಭಾವುಕಾರ ಕುಮಾರಸ್ವಾಮಿ, ಪ್ರಧಾನಿಯವರ ಶುಭಾಶೀರ್ವಾದದಿಂದ ನಾನು ಭಾವುಕನಾಗಿದ್ದೇನೆ . ಅವರ ಪಿತೃವಾತ್ಸಲ್ಯಕ್ಕೆ ನಾನು ಧನ್ಯನಾಗಿದ್ದೇನೆ. ಮಾನ್ಯ ಪ್ರಧಾನಿಗಳ ಚಿಂತನಶೀಲ ಮಾರ್ಗದರ್ಶನ, ಪ್ರೋತ್ಸಾಹ ಮತ್ತು ನನ್ನ ಮೇಲಿನ ನಂಬಿಕೆಗೆ ನಾನು ಚಿರಋಣಿ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಕುಮಾರಸ್ವಾಮಿಯ ಎಕ್ಸ್ ಪೋಸ್ಟ್ ಇಲ್ಲಿದೆ
I am deeply grateful to Hon’ble Prime Minister Shri @narendramodi avaru for his warm birthday wishes and continued guidance. On this occasion, I sought his blessings and had the opportunity to brief him on the key developments and progress across the Ministries of Steel and Heavy… https://t.co/kdoyLtLEnP pic.twitter.com/ukD8MzGvGz
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) December 16, 2025
ಕಾರ್ಯಕರ್ತರಿಂದ ಎಚ್ಡಿಕೆಗೆ ಸನ್ಮಾನ
ಹುಟ್ಟಿದ ಹಬ್ಬದ ಪ್ರಯುಕ್ತ ಇಂದು ಮದ್ದೂರಿಗೆ ಆಗಮಿಸಿದ ಅವರು, ಟಿಬಿ ವೃತ್ತದಲ್ಲಿ ಜೆಡಿಎಸ್ ಪಕ್ಷದ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿ, ಮಂಡ್ಯದ ಜಯಚಾಮರಾಜ ಒಡೆಯರ್ (ಸಂಜಯ್) ವೃತ್ತದಲ್ಲಿ ನಡೆಯಲಿರುವ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅದಾದ ಬಳಿಕ ಶ್ರೀರಂಗಪಟ್ಟಣ ಬಸ್ ನಿಲ್ದಾಣದ ಬಳಿ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮಗಳನ್ನು ಮುಗಿಸಿ ಮೈಸೂರಿಗೆ ಆಗಮಿಸಲಿರುವ ಅವರು ಚಾಮುಂಡಿ ಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಮಂಡ್ಯದ ಮಳವಳ್ಳಿಗೆ ಹಿಂತಿರುಗಿ ಅಧ್ಯಕ್ಷೆ ದ್ರೌಪದಿ ಮುರ್ಮು ಅವರೊಂದಿಗೆ ಆದಿಜಗದ್ಗುರು ಶ್ರೀ ಶಿವರಾತ್ರಿ ಶಿವಯೋಗಿ ಸ್ವಾಮೀಜಿ ಅವರ 1066 ನೇ ಜಯಂತಿ ಆಚರಣೆಯಲ್ಲಿ ಭಾಗವಹಿಸಲಿದ್ದಾರೆ.
ತಂದೆಯಿಂದಲೂ ಶುಭ ಹಾರೈಕೆ
ಕುಮಾರಸ್ವಾಮಿ ತಂದೆ, ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿಯೂ ಆಗಿರುವ ದೇವೇಗೌಡ ಕುಮಾರಸ್ವಾಮಿ ಜನ್ಮ ದಿನಕ್ಕೆ ಶುಭಕೋರಿದ್ದು, ಜನಪರ ಕಾಳಜಿ ಹಾಗೂ ಬದ್ಧತೆಯಿಂದ ರಾಜ್ಯ ಮತ್ತು ರಾಷ್ಟ್ರದ ಅಭಿವೃದ್ಧಿಗೆ ನಿಮ್ಮ ನಿರಂತರ ಪರಿಶ್ರಮ ಹೀಗೇ ಮುಂದುವರಿಯಲಿ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ರಾಜಕೀಯ ರಂಗದಲ್ಲಿ HDK
ಎಚ್.ಡಿ. ಕುಮಾರಸ್ವಾಮಿ ಅವರು 1996ರಲ್ಲಿ ಮೊದಲ ಬಾರಿಗೆ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾಗುವ ಮೂಲಕ ತಮ್ಮ ರಾಜಕೀಯ ಜೀವನವನ್ನು ಆರಂಭಿಸಿದರು. ಜನತಾದಳ (ಜಾತ್ಯಾತೀತ) ಪಕ್ಷದ ಪ್ರಮುಖ ನಾಯಕರಾಗಿ ರಾಜ್ಯ ರಾಜಕಾರಣದಲ್ಲಿ ಗುರುತಿಸಿಕೊಂಡ ಅವರು, ಗ್ರಾಮೀಣ ಮತ್ತು ರೈತ ಸಮುದಾಯಗಳ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತಿದ ಅವರು, ಸಂಘಟನಾ ನಾಯಕನಾಗಿ ಪಕ್ಷವನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
2006–07 ಹಾಗೂ 2018ರಲ್ಲಿ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿರುವ ಅವರು, ತಮ್ಮ ಆಡಳಿತ ಅವಧಿಯಲ್ಲಿ ರೈತಪರ ಯೋಜನೆಗಳು, ಜಲಸಂಪನ್ಮೂಲ ಅಭಿವೃದ್ಧಿ ಹಾಗೂ ಗ್ರಾಮೀಣ ಮೂಲಸೌಕರ್ಯಕ್ಕೆ ಒತ್ತು ನೀಡಿದ್ದಾರೆ. ಪ್ರಸ್ತುತ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸುತ್ತಿರುವ ಅವರು, ರಾಜ್ಯ ಹಾಗೂ ರಾಷ್ಟ್ರಮಟ್ಟದ ರಾಜಕಾರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




