ಬೆಂಗಳೂರು, (ಜನವರಿ 10): ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ (narayana gowda) ಅವರಿಗೆ ಸಂಕಷ್ಟ ಮೇಲೆ ಸಂಕಷ್ಟಗಳು ಎದುರಾಗುತ್ತಲೇ ಇವೆ. ಜಾಮೀನು ಪಡೆದುಕೊಂಡು ಜೈಲಿನಿಂದ ಆಚೆ ಬರುತ್ತಿದ್ದಂತೆಯೇ ಪೊಲೀಸರು ವಶಕ್ಕೆ ಪಡೆಯುತ್ತಿದ್ದಾರೆ. ಈಗಾಗಲೇ ಎರಡು ಪ್ರಕರಣಗಳಲ್ಲಿ ನಾರಾಯಣಗೌಡ ಅವರು ಜಾಮೀನು ಪಡೆದುಕೊಂಡು ಇಂದು (ಜನವರಿ 10) ಜೈಲಿನಿಂದ ಹೊರಬರುತ್ತಿದ್ದಂತೆಯೇ ಇದೀಗ ಬೆಂಗಳೂರಿನ ಹಲಸೂರು ಗೇಟ್ ಠಾಣೆ ಪೊಲೀಸರು ನಾರಾಯಣಗೌಡನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕೊರೊನಾ ಸಮಯದಲ್ಲಿ ರಾಷ್ಟ್ರೀಯ ವಿಪ್ಪತ್ತು ನಿರ್ವಹಣ ಕಾಯ್ದೆಯಡಿ ಹಲಸೂರ್ ಗೇಟ್ ಪೊಲೀಸ್ ಠಾಣೆಯಲ್ಲಿ ನಾರಾಯಣಗೌಡ ವಿರುದ್ಧ ಒಂದು ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ವಿಚಾರಣಗೆ ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆ ವಾರಂಟ್ ಜಾರಿಯಾಗಿತ್ತು. ಹೀಗಾಗಿ ಹಲಸೂರ್ ಗೇಟ್ ಠಾಣೆ ಪೊಲೀಸರು ಇದೀಗ ನಾರಾಯಣಗೌಡ ಅವರನ್ನು ವಶಕ್ಕೆ ಪಡೆದಿದ್ದು, ಕೋರ್ಟ್ಗೆ ಹಾಜರುಪಡಿಸಲಿದ್ದಾರೆ.
ಇದನ್ನೂ ಓದಿ: 2017ರ ಪ್ರಕರಣದಲ್ಲೂ ಕರವೇ ಅಧ್ಯಕ್ಷ ನಾರಾಯಣಗೌಡಗೆ ಜಾಮೀನು ನೀಡಿದ ಕೋರ್ಟ್
2023ರ ಡಿಸೆಂಬರ್ 27 ರಂದು ಮಾಲ್, ಹೋಟೆಲ್‌ಗಳೂ ಸೇರಿದಂತೆ ವಾಣಿಜ್ಯ ಕಟ್ಟಡಗಳ ನಾಮಲಕಗಳಲ್ಲಿ ಕನ್ನಡ ಕಡ್ಡಾಯ ಬಳಕೆಗೆ ಆಗ್ರಹಿಸಿ ಕರವೇ ಕಾರ್ಯಕರ್ತರು ನಗರದಾದ್ಯಂತ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಕಾರ್ಯಕರ್ತರು ಮಾಲ್, ಹೋಟೆಲ್‌ಗಳ ಮೇಲೆ ಕಲ್ಲು ಹಾಗೂ ಚಪ್ಪಲಿ ತೂರಿ, ಒಳ ನುಗ್ಗಲು ಯತ್ನಿಸಿದ್ದರು. ಅಲ್ಲದೆ, ಅನ್ಯ ಭಾಷೆಯ ನಾಮಲಕಗಳು, ಫ್ಲೆಕ್ಸ್, ಬ್ಯಾನರ್, ಹೋರ್ಡಿಂಗ್‌ಗಳನ್ನು ಕಿತ್ತೆಸೆದಿದ್ದರು. ಈ ಸಂಬಂಧ ನಗರದ ಹಲವು ಠಾಣೆಗಳಲ್ಲಿ ನಾರಾಯಣಗೌಡ ಮತ್ತು ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದ್ದವು. ಈ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು.
ಇನ್ನು ಈ ಪ್ರಕರಣದಲ್ಲಿ ನಿನ್ನೆ(ಜನವರಿ 09) ಜಾಮೀನು ಪಡೆದುಕೊಂಡು ಜೈಲಿನಿಂದ ಆಚೆ ಬರುತ್ತಿದ್ದಂತೆಯೇ 2017ರಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಿದ ಪ್ರಕರಣದಲ್ಲಿ ಕುಮಾರಸ್ವಾಮಿ ಲೇಔಟ್ ಪೊಲೀಸರು ನಾರಾಯಣಗೌಡ ಅವರನ್ನು ವಶಕ್ಕೆ ಪಡೆದುಕೊಂಡಿದ್ದರು. ಈ ಪ್ರಕರಣದಲ್ಲಿ ಇಂದು ನಾರಾಯಣಗೌಡಗೆ ಜಾಮೀನು ಸಿಕ್ಕಿದೆ.
2017ರ ಪ್ರಕರಣದಲ್ಲಿ ಜಾಮೀನು ಸಿಕ್ಕ ಹಿನ್ನೆಲೆಯಲ್ಲಿ ಇನ್ನೇನು ಜೈಲಿನಿಂದ ಆಚೆ ಬರುತ್ತಿದ್ದಂತೆಯೇ ಇದೀಗ ಹಲಸೂರು ಗೇಟ್ ಠಾಣೆ ಪೊಲೀಸರು ಮತ್ತೆ ನಾರಾಯಣಗೌಡ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದರೊಂದಿಗೆ ನಾರಾಯಣ ಗೌಡ ಅವರಿಗೆ ಒಟ್ಟೊಟ್ಟಿಗೆ ಎಲ್ಲಾ ಹಳೇ ಪ್ರಕರಣಗಳು ಸಂಕಷ್ಟಕ್ಕೆ ಸಿಲುಕುವಂತೆ ಮಾಡುವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:13 pm, Wed, 10 January 24