ಬೆಂಗಳೂರು: ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಕರ್ನಾಟಕದಲ್ಲಿ ಮಳೆ (Karnataka Rains) ಹೆಚ್ಚಾಗುತ್ತಿದೆ. ಬೆಂಗಳೂರಿನ ಹಲವು ಕಡೆ ರಾತ್ರಿ ಪೂರ್ತಿ ಜಿಟಿ ಜಿಟಿ ಮಳೆ ಸುರಿದ್ದು, ನಗರದ ಕೆಲ ರಸ್ತೆಯಲ್ಲಿ ಕೆಲ ಕಾಲ ನೀರು ನಿಂತಿತ್ತು. ಶಾಂತಿನಗರ, ಜಯನಗರ, ಕೆ.ಆರ್ ಪುರ, ಹಲಸೂರು, ಬನಶಂಕರಿ, ಮೆಜೆಸ್ಟಿಕ್ ಸೇರಿ ನಗರದ ಬಹುತೇಕ ಕಡೆ ಮಳೆಯಾಗಿದ್ದು, ಮೂರು ಗಂಟೆ ಸುಮಾರಿಗೆ ಸ್ವಲ್ಪ ಜೋರಾಗಿ ಮಳೆ ಸುರಿದಿದೆ. ಲಾಲ್ ಬಾಗ್ ವೆಸ್ಟ್ ಗೇಟ್ ಕಡೆಯಿಂದ ಸೌತೆ ಎಂಡ್ ಸರ್ಕಲ್ಗೆ ತೆರಳುವ ರಸ್ತೆಯಲ್ಲಿ ನೀರು ತುಂಬಿಕೊಂಡಿತ್ತು. ಸುಮಾರು ಐವತ್ತು ಮೀಟರ್ನಷ್ಟು ದೂರ, ಸುಮಾರು ಒಂದು ಅಡಿಯಷ್ಟು ನೀರು ರಸ್ತೆಯಲ್ಲಿ ನಿಂತಿತ್ತು. ಒಳಚರಂಡಿ ಅವ್ಯವಸ್ಥೆಯ ಕಾರಣದಿಂದ ರಸ್ತೆ ಮೇಲೆ ನೀರು ಹರಿದಿದೆ.
ಚರಂಡಿಗಳು ಬ್ಲಾಕ್ ಆಗಿ ರಸ್ತೆ ಮೇಲೆ ನಿಂತಿ ನೀರು
ಬಿಟಿಎಂ ಲೇಔಟ್ನ ಬಿಳೇಕಹಳ್ಳಿ ವಾರ್ಡ್ನ ಅನುಗ್ರಹ ಬಡವಾಣೆಯ ಮೊದಲನೇ ಹಂತದ ಎರಡು ರಸ್ತೆಗಳಲ್ಲಿ ನೀರು ತುಂಬಿಕೊಂಡಿದ್ದು, ಒಂದು ಗಂಟೆ ಸತತವಾಗಿ ಮಳೆ ಸುರಿದ ಪರಿಣಾಮ ರಸ್ತೆಯ ಮೇಲೆ ನೀರು ನಿಂತಿದೆ. ಚರಂಡಿಯಲ್ಲಿ ನೀರು ಸಮರ್ಪಕವಾಗಿ ಹರಿದು ಹೋಗದೆ ಇರುವುದರಿಂದ ರಸ್ತೆ ಮೇಲೆ ನೀರು ನಿಂತುಕೊಂಡಿತ್ತು. ಬಡವಾಣೆಯ ಯಾವುದೇ ಮನೆಗಳಿಗೂ ನೀರು ನುಗ್ಗಿ ಹಾನಿಯಾಗಿಲ್ಲ.
ಮಳೆ ಬಿರುಸಾದ ಕೂಡಲೇ ಸ್ಥಳಕ್ಕೆ ಬಂದಿರುವ ಅಗ್ನಿಶಾಮಕ ದಳದ ಸಿಬ್ಬಂದಿ, ರಸ್ತೆಯ ಮೇಲೆ ನಿಂತಿರುವ ನೀರನ್ನ ಪಂಪ್ ಮೂಲಕ ಚರಂಡಿಗೆ ಬಿಟ್ಟಿದ್ದಾರೆ. ನಿನ್ನೆಯಿಂದ ಸುರಿದ ಮಳೆಯಿಂದ ಅವಾಂತರ ಉಂಟಾಗಿದ್ದು, ಬೊಮ್ಮನಹಳ್ಳಿಯ ಅನುಗ್ರಹ ಲೇಔಟ್ ಸಂಪೂರ್ಣ ಜಲಾವೃತವಾಗಿದ್ದು, ಮನೆಗಳಿಗೆ ಮಳೆ ನೀರು ನುಗ್ಗಿದೆ. ಮಳೆ ನೀರು ಆವರಿಸಿ ವಾಹನಗಳು ಸಂಪುರ್ಣ ಜಲಾವೃತವಾಗಿದೆ.
ಮಳೆಯಿಂದ ಕುಸಿದ ಬ್ರಿಡ್ಜ್:
ನೂತನವಾಗಿ ನಿರ್ಮಾಣ ಮಾಡಲಾಗುತ್ತಿದ್ದ ಕುಂಬಲಗೋಡು ಬಳಿಯ ಬ್ರಿಡ್ಜ್ ಕುಸಿದಿದ್ದು, ಬೆಂಗಳೂರು ಮೈಸೂರು ಹೈವೇ ಫುಲ್ ಟ್ರಾಫಿಕ್ ಉಂಟಾಗಿತ್ತು. ಮೈಸೂರು ರಸ್ತೆಯಲ್ಲಿ ಹತ್ತಾರು ಕಿ.ಮೀ ಟ್ರಾಫಿಕ್ ಜಾಮ್ ಆಗಿದ್ದು, ಮಳೆಯಿಂದ ಕುಸಿದಿರುವ ಮಾಹಿತಿ ನೀಡಲಾಗಿದೆ.
ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣ
ಚಿತ್ರದುರ್ಗ: ನಗರ ಸೇರಿ ಜಿಲ್ಲೆಯ ವಿವಿಧೆಡೆ ಜಿಟಿಜಿಟಿ ಮಳೆ ಸುರಿದಿದ್ದು, ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣ ನಿರ್ಮಾಣವಾಗಿದೆ. ಆಗಾಗ ಬಿಡುವು ನೀಡಿ ತುಂತುರು ಮಳೆ ಸುರಿಯುತ್ತಿದ್ದು, ಬಯಲುಸೀಮೆಯ ಭೂಮಿಗೆ ಮಳೆರಾಯ ತಂಪೆರೆದಿದ್ದಾನೆ. ನಿರಂತರ ಜಡಿ ಮಳೆಯಿಂದ ರೈತರು ಬೆಳೆಹಾನಿ ಭೀತಿಯಲ್ಲಿದ್ದಾರೆ.
ಕೋಡಿ ಬಿದ್ದು 20ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು
ರಾಮನಗರ: ಜಿಲ್ಲೆಯಲ್ಲಿ ರಾತ್ರಿ ಸುರಿದ ಮಳೆಯಿಂದಾಗಿ ರಾಮಮ್ಮನ ಕೆರೆ ಕೋಡಿ ಬಿದ್ದು ಮನೆಗಳು ಜಲಾವೃತವಾಗಿರುವಂತಹ ಘಟನೆ ನಡೆದಿದೆ. ತಿಟ್ಟಮಾರನಹಳ್ಳಿ ಗ್ರಾಮದ ಬಳಿಯ ರಾಮಮ್ಮನ ಕೆರೆ ಕೋಡಿ ಬಿದ್ದು 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಚನ್ನಪಟ್ಟಣ ತಾಲೂಕಿನ ಎಲೆಕೆರೆ ಗ್ರಾಮದಲ್ಲೂ ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಮನೆಗೆ ನೀರು ನುಗ್ಗಿದ್ದರಿಂದ ಕುಟುಂಬಸ್ಥರು ಪರದಾಡುವಂತ್ತಾಗಿದೆ. ಸ್ಥಳಕ್ಕೆ ಆಗಮಿಸಿ ಅಗ್ನಿಶಾಮಕ ದಳ ಸಿಬ್ಬಂದಿ ನೀರು ಹೊರ ಹಾಕಿದರು. ಮನೆಗಳಿಗೆ ಚರಂಡಿ ನೀರು ನುಗ್ಗಿ ಜನರು ಪರದಾಡಿರುವಂತಹ ಘಟನೆ ಬೀಡಿ ಕಾಲೋನಿ, ಆರ್ಎಂಸಿ ಕಾಲೋನಿಯಲ್ಲಿಯೂ ನಡೆದಿದೆ. 20 ಹೆಚ್ಚು ಮನೆಗಳಿಗೆ ಚರಂಡಿ ನೀರು ನುಗ್ಗಿ ಅವಾಂತರ ಉಂಟಾಗಿದ್ದು, ಮನೆಗಳಿಗೆ ಚರಂಡಿ ನೀರು ನುಗ್ಗಿ ಕುಟುಂಬಸ್ಥರು ಪರದಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.