
ಬೆಂಗಳೂರು, ಏಪ್ರಿಲ್ 22: ಕನ್ನಡ ಮತ್ತು ಹಿಂದಿ ಭಾಷಾ (Kannada-Hindi Conflict) ಯುದ್ಧದಲ್ಲಿ ಕನ್ನಡ ಹೋರಾಟಗಾರರ ಬಗ್ಗೆ ಅವಹೇಳನ ಮಾಡಲಾಗುತ್ತಿದೆ. ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣ ಗೌಡ (Narayana Gowda) ವಿರುದ್ಧ ನೇರವಾಗಿಯೇ ಕಿಡಿಗೇಡಿಗಳು ಕೆಟ್ಟ ಪದಗಳಿಂದ ನಿಂದಿಸಿದ್ದಾರೆ. ಈ ಬಗ್ಗೆ ಕರವೇ ಪಡೆ ಕಾನೂನಿನ ಮೊರೆ ಹೋಗಿದ್ದು, ಅನೇಕ ಕಡೆ ಕೇಸ್ ದಾಖಲಾಗಿವೆ.
ಕನ್ನಡ ನಾಡು, ನುಡಿ, ಜಲದ ಹೋರಾಟಗಳಲ್ಲಿ ಕರವೇ ಸಂಘಟನೆ ಸದಾ ಮುಂಚೂಣಿಯಲ್ಲಿರುತ್ತೆ. ಇತ್ತೀಚೆಗೆ ನಡೆಯುತ್ತಿರುವ ಕನ್ನಡ- ಹಿಂದಿ ಭಾಷಾ ಯುದ್ಧದಲ್ಲೂ ಕರವೇ ನಾರಾಯಣ ಗೌಡ ಹಿಂದಿ ಏರಿಕೆ ವಿರುದ್ಧ ಹರಿಹಾಯ್ದಿದ್ದರು. ಆದರೆ ಕೆಲ ಹಿಂದಿ ಪ್ರೇಮಿಗಳು ಇಷ್ಟಕ್ಕೆ ನಾರಾಯಣ ಗೌಡ ಮೇಲೆ ಮುಗಿಬಿದ್ದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೆಟ್ಟದಾಗಿ ಟೀಕೆ ಮಾಡಿದ್ದಾರೆ.
ಇದನ್ನೂ ಓದಿ: SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹಿಂದಿಗೆ ಅಂಕ ಬದಲು ಗ್ರೇಡ್ ನೀಡುವ ಬಗ್ಗೆ ಕರವೇ ನಾರಾಯಣ ಗೌಡ ಮಾತಾಡಿದ್ದರು. ಹೀಗಾಗಿ ಸುಭಾಷ್ ಮಾಲೀ ಎಂಬಾತ ಫೇಸ್ ಬುಕ್ನಲ್ಲಿ ನಾರಾಯಣ ಗೌಡ ಬಗ್ಗೆ ಅವಹೇಳನವಾಗಿ ಬರೆದುಕೊಂಡಿದ್ದ. ಇದು ಮಹೇಶ್ ವಿಕ್ರಮ ಹೆಗ್ಡೆ ಎಂಬಾತನ ಪೇಜ್ನಲ್ಲೂ ಪೋಸ್ಟ್ ಆಗಿತ್ತು. ಹೀಗಾಗಿ ಕರವೇ ಕಾರ್ಯಕರ್ತರು ಕಿಡಿಗೇಡಿಗಳ ವಿರುದ್ಧ ಕಾನೂನು ಹೋರಾಟಕ್ಕೆ ಇಳಿದಿದ್ದಾರೆ. ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ, ಉಪ್ಪಾರಪೇಟೆ ಸೇರಿದಂತೆ ಅನೇಕ ಜಿಲ್ಲೆಗಳಲ್ಲೂ ದೂರು ನೀಡಿದ್ದಾರೆ.
ಇನ್ನು ಈ ಬಗ್ಗೆ ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ಮಾತನಾಡಿದ್ದು, ಇಂತಹ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸಕ್ಕೆ ನಾವು ಬಗ್ಗಲ್ಲ. ನಾವು ಕಾನೂನು ಬಿಟ್ಟು ಹೋಗಲ್ಲ. ಪೊಲೀಸರು ಬೇಗ ಕ್ರಮಕೈಗೊಳ್ಳಬೇಕು ಅಂತ ಆಗ್ರಹಿಸಿದ್ದಾರೆ.
ಇದನ್ನೂ ಓದಿ: SSLC ಹಿಂದಿ ಪರೀಕ್ಷೆ ಕೇಂದ್ರಗಳಿಗೆ ಕನ್ನಡ ಸಂಘಟನೆಗಳಿಂದ ಮುತ್ತಿಗೆ ಎಚ್ಚರಿಕೆ: ಪೊಲೀಸ್ ಮೊರೆ ಹೋದ ಶಿಕ್ಷಣ ಇಲಾಖೆ
ಕರವೇ ಆರೋಪಕ್ಕೆ ಫೇಸ್ ಬುಕ್ನಲ್ಲೇ ಪ್ರತಿಕ್ರಿಯಿಸಿದ್ದ ಮಹೇಶ್ ಹೆಗ್ಡೆ ಎಂಬಾತ ತಾನು ಯಾವುದೇ ಪೋಸ್ಟ್ ಮಾಡಿಲ್ಲ, ತನ್ನ ಹೆಸರಿನ ಪೇಜ್ನಲ್ಲಿ ಪೋಸ್ಟ್ ಆಗಿದೆ ಎಂದಿದ್ದಾನೆ. ಸದ್ಯ ಅವಹೇಳನ ಮತ್ತು ಬೆದರಿಕೆ ಬಗ್ಗೆ ಅನೇಕ ಪೊಲೀಸ್ ಠಾಣೆಗಳಲ್ಲಿ ಕೇಸ್ಗಳು ದಾಖಲಾಗಿದ್ದು, ಮುಂದೇನಾಗುತ್ತೆ ಕಾದು ನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.