ಬೆಂಗಳೂರಿನಲ್ಲಿ (Bengaluru) ನಿವೇಶನ ಕೊಂಡುಕೊಳ್ಳುವುದು ಮಧ್ಯಮವರ್ಗದ ಅನೇಕ ಜನರ ಕನಸು. ಆದರೆ, ಇದನ್ನು ನನಸಾಗಿಸುವುದು ಅಷ್ಟು ಸುಲಭವಲ್ಲ. ರಾಜ್ಯ ರಾಜಧಾನಿಯಲ್ಲಿ ನಿವೇಶನಗಳ ಬೆಲೆ ಗಗನಕ್ಕೇರಿರುವ ಈ ಸಂದರ್ಭದಲ್ಲಿ ಖಾಸಗಿ ಸೈಟ್ಗಳನ್ನು ಕೊಂಡುಕೊಳ್ಳುವುದು ಸುಲಭವೂ ಅಲ್ಲ, ದಾಖಲೆ ಇನ್ನಿತರ ವಿಚಾರಗಳ ದೃಷ್ಟಿಯಿಂದ ಅಷ್ಟು ಸರಳವೂ ಅಲ್ಲ. ಹಾಗಾದರೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಅಭಿವೃದ್ಧಿಪಡಿಸಿರುವ ಸೈಟ್ಗಳನ್ನು (BDA Site) ಕೊಂಡುಕೊಳ್ಳಬೇಕಾದರೆ? ಅರ್ಹತೆ ಏನು? ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ? ಏನೆಲ್ಲ ದಾಖಲೆಗಳು ಬೇಕು ಎಂಬ ಪ್ರಶ್ನೆ ಉದ್ಭವಿಸುತ್ತದೆ. ಆ ಕುರಿತ ಸಂದೇಹಗಳನ್ನು ನಿವಾರಿಸಲು ಇಲ್ಲಿ ಪ್ರಯತ್ನಿಸಲಾಗಿದೆ.
ಬಿಡಿಎ ನಿವೇಶನದ ಮರು ಮಾರಾಟ ಅಥವಾ ರೀಸೆಲ್ ವೇಳೆ ಯಾರು ಬೇಕಾದರೂ ಕೊಂಡುಕೊಳ್ಳಬಹುದು. ಆದರೆ ಹರಾಜು ಪ್ರಕ್ರಿಯೆ ಮೂಲಕ ಮಾರಾಟ ಮಾಡಲಾಗುವ ಬಿಡಿಎ ಸೈಟ್ ಅನ್ನು ಭಾರತೀಯ ನಾಗರಿಕ ಮಾತ್ರ ಖರೀದಿಸಬಹುದಾಗಿದೆ. ಒಂದು ವೇಳೆ, ಅನಿವಾಸಿ ಭಾರತೀಯರು ಬಿಡಿಎ ಸೈಟ್ ಖರೀದಿಸಬೇಕು ಎಂದಿದ್ದಲ್ಲಿ ಸರ್ಕಾರದಿಂದ ಅನುಮತಿ ಪಡೆದಿರಬೇಕು. ಬೇರೊಬ್ಬ ಮಾಲೀಕನಿಂದ ಖರೀದಿಸುವುದಾದರೆ (ರೀ ಸೇಲ್) ಯಾರು ಬೇಕಾದರೂ ಖರೀದಿ ಮಾಡಬಹುದು.
ಹೊಸದಾಗಿ ಬಿಡಿಎ ಸೈಟ್ ಖರೀದಿ ಮಾಡಬೇಕಾದರೆ ಅಂಥವರು ಕರ್ನಾಟಕದಲ್ಲಿ ವಾಸವಾಗಿರಬೇಕು. ಅವರ ಉದ್ಯೋಗ ಏನು ಎಂಬುದನ್ನು ಅರ್ಜಿಯಲ್ಲಿ ನಮೂದಿಸಬೇಕಾಗುತ್ತದೆ. ಈಗಾಗಲೇ ಎಷ್ಟು ಆಸ್ತಿ ಇದೆ ಎಂಬ ವಿವರ ನೀಡಬೇಕಾಗುತ್ತದೆ. ಬಿಡಿಎ ಸೈಟು ಮಾರಾಟದ ವಿಚಾರದಲ್ಲಿ ಹಲವು ಕೆಟಗರಿಗಳನ್ನು ಮಾಡಲಾಗಿದೆ. ಬಿಪಿಎಲ್, ಎಪಿಎಲ್, ಜನರಲ್ ಇತ್ಯಾದಿಯಾಗಿ ವರ್ಗೀಕರಣ ಮಾಡಲಾಗಿದೆ. ಬಿಡಿಎ ವೆಬ್ಸೈಟ್ಗಳಲ್ಲಿ ಮತ್ತು ಕಚೇರಿಯಲ್ಲಿ ಕೂಡ ಈ ಬಗ್ಗೆ ಮಾಹಿತಿ ಪಡೆಯಬಹುದು.
ನಿವೇಶನ ಖರೀದಿಗೆ ಅರ್ಜಿ ಸಲ್ಲಿಸಿದ ಬಳಿಕ ಅಂಚೆಯ ಮೂಲಕವೇ ಬಿಡಿಎ ಸಂವಹನ ನಡೆಸುತ್ತದೆ. ಎರಡು ಬಾರಿ, ಮೂರು ಬಾರಿ ಅರ್ಜಿ ಸಲ್ಲಿಸಲು ಅವಕಾಶಗಳಿವೆ. ಬಹಳ ಸುಲಭದಲ್ಲಿ ಬಿಡಿಎ ಸೈಟು ದೊರೆಯುವುದಿಲ್ಲ. ಹಿರಿಯ ನಾಗರಿಕರ ವರ್ಗದಲ್ಲಿ ಬರುವವರಿಗೆ ಸ್ವಲ್ಪ ಬೇಗನೆ ಸೈಟ್ ಹಂಚಿಕೆಯಾಗುವ ಸಾಧ್ಯತೆ ಇದೆ.
ಈಗಾಗಲೇ ಬೇರೆ ಸೈಟು, ನಿವೇಶನ ಅಥವಾ ಮನೆ ಇದ್ದರೆ ಅಂಥವರು ಬೇಗನೆ ಸೈಟ್ ಪಡೆಯುವ ಸಾಧ್ಯತೆ ತುಂಬಾ ಕಡಿಮೆ. ನಿವೇಶನವೇ ಇಲ್ಲದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.
ಜನರಲ್, ಎಸ್ಸಿ ಎಸ್ಟಿ, ಸ್ವಾತಂತ್ರ್ಯ ಹೋರಾಟಗಾರರು, ಸರ್ಕಾರಿ ಉದ್ಯೋಗಿಗಳು, ಅಂಗವಿಕಲರು ಹೀಗೆ ಒಂದು 20 ರಷ್ಟು ಕೆಟಗರಿಗಳಿವೆ.
ಬಿಡಿಎ ಸೈಟ್ ಹರಾಜು ಪ್ರಕ್ರಿಯೆ ಸಾಮಾನ್ಯವಾಗಿ ಪ್ರತಿ ವರ್ಷ ನಡೆಯುತ್ತದೆ. ಕೆಲವು ಸೈಟ್ಗಳನ್ನು ಮೂಲೆನಿವೇಶನ ಅಥವಾ ಕಾರ್ನರ್ ಪ್ರಾಪರ್ಟಿ ಎಂದು ಕರೆಯಲಾಗುತ್ತದೆ. ಇವುಗಳನ್ನು ಮೊದಲು ಹರಾಜು ಹಾಕುತ್ತಾರೆ. ಕಮರ್ಷಿಯಲ್ ಸ್ಪೇಸ್ ಎಂದು ಮತ್ತೊಂದು ವಿಭಾಗ ಇರುತ್ತದೆ. ಅದನ್ನು ಕೂಡ ಹರಾಜು ಮೂಲಕ ಮಾರಾಟ ಮಾಡಲಾಗುತ್ತದೆ. ಇದರಿಂದ ಬಿಡಿಎಗೆ ಹೆಚ್ಚು ಆದಾಯ ದೊರೆಯುತ್ತದೆ.
ಬಿಡಿಎ ಒಂದಿಷ್ಟು ಜಾಗವನ್ನು ಖರೀದಿಸಿ ಅಭಿವೃದ್ಧಿಪಡಿಸುತ್ತದೆ. ನಿವೇಶನಗಳನ್ನಾಗಿ ಪರಿವರ್ತಿಸಿ ಬಿಬಿಎಂಪಿಗೆ ಹಸ್ತಾಂತರಿಸುತ್ತದೆ. ಇಲ್ಲಿ ಬಿಡಿಎ ಹಾಗೂ ಬಿಬಿಎಂಪಿ ನಿಯಮಗಳು ಈ ಸೈಟ್ಗಳಿಗೆ ಅನ್ವಯವಾಗುತ್ತವೆ. ನಿವೇಶನ ಖರೀದಿಸಿದ ನಂತರ ಖಾತಾ ಮಾಡಿಸಿಕೊಳ್ಳುವುದು ಬಹು ಮುಖ್ಯವಾಗಿದೆ. ಇವಾಗ ಇ ಖಾತಾ ಕಡ್ಡಾಯಗೊಳಿಸಿರುವುದು ಗಮನಾರ್ಹ.
ಇದನ್ನೂ ಓದಿ: ಎ ಮತ್ತು ಬಿ ಖಾತಾ ಎಂದರೇನು? ಗುರುತಿಸುವುದು ಹೇಗೆ, ಬಿ ಖಾತಾ ಇದ್ದರೆ ಏನು ಮಾಡಬೇಕು? ಇಲ್ಲಿದೆ ಮಾಹಿತಿ
ನಿವೇಶನದ ಉದ್ದೇಶಕ್ಕೆಂದು ಖರೀದಿಸಿದ ಸೈಟ್ ಅನ್ನು ವಾಣಿಜ್ಯಕ್ಕೆ ಪರಿವರ್ತಿಸಲು ಅವಕಾಶವೂ ಇದೆ. ತೆರಿಗೆ ಆಯ್ಕೆಯ ವೇಳೆ ಅದನ್ನು ಮಾಡಬೇಕಾಗುತ್ತದೆ. ಬಿಬಿಎಂಪಿಗೆ ತೆರಿಗೆ ಪಾವತಿ ಮಾಡುವ ಸಂದರ್ಭದಲ್ಲಿ ಅದಕ್ಕೆ ಬೇಕಾದ ಬದಲಾವಣೆಗಳನ್ನು ಮಾಡಿಸಿಕೊಳ್ಳಬೇಕಾಗುತ್ತದೆ.