
ಬೆಂಗಳೂರು, ಆಗಸ್ಟ್ 22: ಸಂಚಾರಿ ನಿಯಮಗಳ ಉಲ್ಲಂಘನೆ (Traffic Rules Violation) ಮಾಡಿ ದಂಡ ಪಾವತಿಸದೆ ಬಾಕಿ ಉಳಿಸಿಕೊಂಡವರಿಗೆ ಕಳೆದ ವರ್ಷದಂತೆಯೇ ಈ ವರ್ಷ ಕೂಡ ಸಂಚಾರ ಪೊಲೀಸರು ಶೇ 50 ರ ರಿಯಾಯಿತಿ ಘೋಷಣೆ (Traffic Fine Discount) ಮಾಡಿದ್ದಾರೆ. ಒಂದು ಬಾರಿಯ ರಿಯಾಯಿತಿ ಇದಾಗಿದ್ದು, ಆಗಸ್ಟ್ 23 ರಿಂದ ಸೆಪ್ಟೆಂಬರ್ 12 ರ ವರೆಗೆ ಅವಕಾಶ ನೀಡಲಾಗಿದೆ. ಈ ಆಫರ್ 2023 ರ ಫೆಬ್ರವರಿ 11 ರವರೆಗೆ ದಾಖಲಾದ ಪ್ರಕರಣಗಳಿಗೆ ಮಾತ್ರ ಅನ್ವಯವಾಗಲಿದೆ. ಕಳೆದ ವರ್ಷದಂತೆ ಈ ಬಾರಿ ಕೂಡ ವಾಹನ ಸವಾರರು ಹೆಚ್ಚಿನ ಸಂಖ್ಯೆಯಲ್ಲಿ ರಿಯಾಯಿತಿಯೊಂದಿಗೆ ದಂಡ ಪಾವತಿಸುವ ನಿರೀಕ್ಷೆ ಇದ್ದು, ಎಲ್ಲೆಲ್ಲಿ ದಂಡ ಪಾವತಿ ಮಾಡಬಹುದು ಎಂಬ ಮಾಹಿತಿಯನ್ನು ಬೆಂಗಳೂರು ಸಂಚಾರ ಪೊಲೀಸರು ಹಂಚಿಕೊಂಡಿದ್ದಾರೆ.
ಕರ್ನಾಟಕ ಸ್ಟೇಟ್ ಪೊಲೀಸ್ (ಕೆಎಸ್ಪಿ) ಆ್ಯಪ್, ಬಿಟಿಪಿ ಅಸ್ತ್ರಂ ಆ್ಯಪ್ ಮುಖಾಂತರ ರಿಯಾಯಿತಿ ದರದಲ್ಲಿ ದಂಡ ಪಾವತಿಸಬಹುದಾಗಿದೆ. ಹತ್ತಿರದ ಸಂಚಾರ ಪೊಲೀಸ್ ಠಾಣೆಗಳಲ್ಲಿ ನಿಮ್ಮ ವಾಹನದ ನೊಂದಣಿ ಸಂಖ್ಯೆಯ ವಿವರಗಳನ್ನು ಒದಗಿಸಿ ದಂಡವನ್ನು ಪಾವತಿಸಬಹುದಾಗಿದೆ. ಅಲ್ಲದೆ, ಅಲ್ಲಲ್ಲಿ ಇರುವ ಸಂಚಾರ ನಿರ್ವಹಣಾ ಕೇಂದ್ರದಲ್ಲಿ ಪಾವತಿಸಬಹುದಾಗಿದೆ. ಕರ್ನಾಟಕ ಒನ್/ಬೆಂಗಳೂರು ಒನ್ ವೆಬ್‌ಸೈಟ್‌ನಲ್ಲಿ ವಿವರಗಳನ್ನು ಪಡೆದು ಪಾವತಿಸಬಹುದಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.