Traffic Fine: ಟ್ರಾಫಿಕ್ ದಂಡ ಪಾವತಿಗೆ ಮತ್ತೆ ರಿಯಾಯಿತಿ ಘೋಷಣೆ, ಶೇಕಡಾ 50ರಷ್ಟು ಡಿಸ್ಕೌಂಟ್
ಸಿಗ್ನಲ್ ಜಂಪ್, ಝೀಬ್ರಾ ಲೈನ್ ಕ್ರಾಸಿಂಗ್, ಹೆಲ್ಮೆಟ್, ನಂಬರ್ ಪ್ಲೇಟ್, ನೋ ಪಾರ್ಕಿಂಗ್ ಹೀಗೆ ನಾನಾ ಸಂಚಾರ ನಿಯಮಗಳನ್ನು ಉಲ್ಲಂಘಿಸಿ ದಂಡ ಕಟ್ಟದೇ ಹಾಗೇ ಉಳಿಸಿಕೊಂಡಿರುವವರಿಗೆ ಸಿಹಿ ಸುದ್ದಿ.ಟ್ರಾಫಿಕ್ ದಂಡ ಪಾವತಿ (Traffic Fine) ಮಾಡಲು ಸಾರಿಗೆ ಇಲಾಖೆ ಮತ್ತೊಮ್ಮೆ ರಿಯಾಯಿತಿ (Traffic Fine Discount) ಘೋಷಿಸಿ ಆದೇಶಿಸಿದೆ. ಈ ಮೂಲಕ ದಂಡ ಬಾಕಿ ಉಳಿಸಿಕೊಂಡಿರುವ ರಾಜ್ಯದ ವಾಹನ ಮಾಲೀಕರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ.

ಬೆಂಗಳೂರು, (ಆಗಸ್ಟ್ 21): ಟ್ರಾಫಿಕ್ ಉಲ್ಲಂಘನೆ ದಂಡ ಪಾವತಿ (Traffic Fine) ಮಾಡಲು ಸಾರಿಗೆ ಇಲಾಖೆ ಮತ್ತೊಮ್ಮೆ ರಿಯಾಯಿತಿ (Traffic Fine Discount) ಘೋಷಿಸಿ ಆದೇಶಿಸಿದೆ. ಸಂಚಾರಿ ನಿಯಮ ಉಲ್ಲಂಘಿಟಿ ದಂಡ ಕಟ್ಟದ ವಾಹನ ಮಾಲೀಕರಿಗೆ ಬರೋಬ್ಬರಿ ಶೇಕಡಾ 50ರಷ್ಟು ರಿಯಾಯಿತಿ ನೀಡಲಾಗಿದೆ. ಈ ಕುರಿತು ರಾಜ್ಯ ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಪುಷ್ಪ ವಿ.ಎಸ್ ಅಧಿಕೃತ ಆದೇಶ ಹೊರಡಿಸಿದ್ದು, ದಂಡದ ಅರ್ಧದಷ್ಟು ಹಣ ತುಂಬಲು ವಾಹನ ಸವಾರರಿಗೆ ಅವಕಾಶ ಕಲ್ಪಿಸಲಾಗಿದ್ದು, 50% ರಷ್ಟು ದಂಡ ಪಾವತಿ ಮಾಡಲು ಆಗಸ್ಟ್ 23 ರಿಂದ ಸೆಪ್ಟೆಂಬರ್ 12ರವರೆಗೆ ಮಾತ್ರ ಅವಕಾಶ ನೀಡಲಾಗಿದೆ.
ಈ ಫಿಫ್ಟಿ ಪರ್ಸೆಂಟ್ ಡಿಸ್ಕೌಂಟ್ ಆಫರ್ 2023ರ ಫೆಬ್ರವರಿ 11ರವರೆಗೆ ದಾಖಲಾದ ಪ್ರಕರಣಗಳಿಗೆ ಅನ್ವಯವಾಗಲಿದೆ. 2023ರ ಫೆಬ್ರವರಿ 12ರ ನಂತರದ ಪ್ರಕರಣಗಳಿಗೆ ಇದು ಅನ್ವಯವಾಗುವುದಿಲ್ಲ. ಯಾಕಂದ್ರೆ, ಬಹಳ ವರ್ಷಗಳಿಂದ ಟ್ರಾಫಿಕ್ ದಂಡ ಕಟ್ಟದೇ ಹಾಗೇ ಬಾಕಿ ಉಳಿಸಿಕೊಂಡವರಿಗೆ ಈ ಆಫರ್ ನೀಡಲಾಗಿದೆ. ಇನ್ನುಳಿದಂತೆ 2023ರ ಫೆಬ್ರವರಿ 12ರ ನಂತರದ ಕೇಸ್ ಗಳಿಗೆ ಮುಂದಿನ ವರ್ಷ ಆಫರ್ ನೀಡುವ ಸಾಧ್ಯತೆಗಳಿವೆ.
ದಂಡ ಪಾವತಿ ಹೇಗೆ ಮಾಡಬೇಕು?
ವಾಹನಗಳ ಮಾಲೀಕರು ತಮ್ಮ ವಾಹನದ ವಿರುದ್ಧ ಯಾವುದಾದರೂ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿದೆಯೇ ಎಂದು ಆನ್‌ಲೈನ್‌ನಲ್ಲಿ ಪರಿಶೀಲಿಸಿ ದಂಡ ಪಾವತಿಸಬೇಕು.ಯಾವ ಸಂಚಾರ ನಿಯಮ ಉಲ್ಲಂಘಿಸಲಾಗಿದೆ, ದಿನಾಂಕ ಮತ್ತು ಸಮಯ, ಸಂಚಾರ ನಿಯಮ ಉಲ್ಲಂಘನೆಯಾದ ಸ್ಥಳದ ಫೋಟೋ ಸಮೇತ ಮಾಲೀಕರಿಗೆ ಆನ್‌ಲೈನ್‌ನಲ್ಲೇ ಮಾಹಿತಿ ಲಭ್ಯವಾಗುತ್ತಿದೆ. ಇನ್ನು ಬಾಕಿ ದಂಡ ಪಾವತಿಗೆ ಪೊಲೀಸ್ ಇಲಾಖೆಯು ನಗರದಲ್ಲಿ ವಿಶೇಷ ವ್ಯವಸ್ಥೆ ಮಾಡಿದೆ. ಬೆಂಗಳೂರು ಒನ್ ಸೆಂಟರ್ ವೆಬ್‌ಸೈಟ್‌ನಲ್ಲಿ ಸಂಚಾರ ನಿಯಮ ಉಲ್ಲಂಘನೆ ಮತ್ತು ದಂಡ ಬಾಕಿ ಉಳಿಸಿಕೊಂಡಿರುವ ವಿವರ ಪಡೆದು ದಂಡ ಪಾವತಿಸಬಹುದು. ಪೇಟಿಎಂ ಆ್ಯಪ್ ಮೂಲಕವೂ ದಂಡ ಕಟ್ಟಬಹುದು. ಸಂಚಾರ ಪೊಲೀಸ್ ಠಾಣೆಗಳಿಗೆ ವಾಹನದ ನೋಂದಣಿ ಸಂಖ್ಯೆ ಒದಗಿಸಿ ವಿವರ ಪಡೆದು ಬಾಕಿ ದಂಡ ಪಾವತಿಸಿ ರಶೀದಿ ಪಡೆಯಬಹುದು.
ಕರ್ನಾಟಕ ರಾಜ್ಯ ಪೋಲಿಸ್ ಇಲಾಖೆಯ ಸಂಚಾರಿ ಇ ಚಲನ್ ನಲ್ಲಿ ದಾಖಲಾದ ಪ್ರಕರಣಗಳಿಗೆ ಮಾತ್ರ ಅನ್ವಯವಾಗುವಂತೆ ದಾಖಲಾಗಿರುವ ಬಾಕಿ ಪ್ರಕರಣಗಳ ದಂಡದ ಮೊತ್ತದಲ್ಲಿ 50% ರಿಯಾಯಿತಿ ಇದ್ದು, 2023ರ ಫೆಬ್ರವರಿ 11ರ ಯಾರೆಲ್ಲಾ ಸಂಚಾರ ನಿಯಮ ಉಲ್ಲಂಘಿಸಿ ದಂಡ ಕಟ್ಟದೇ ಹಾಗೇ ಬಾಕಿ ಉಳಿಸಿಕೊಂಡಿದ್ದಿರೋ ಈ ಆಫರ್ ಸದುಪಯೋಗಪಡಿಸಿಕೊಳ್ಳಬಹುದು. ಹಳೇಯ ಬಾಕಿ ದಂಡವನ್ನು ರಿಯಾಯಿತಿಯಲ್ಲಿ ಈಗ ಪಾವತಿಸಿದ ಒಳಿತು. ಯಾಕಂದ್ರೆ, ಮುಂದಿನ ಸಲ ಇಲ್ಲಿಂದ ಇಲ್ಲಿಯವರೆಗೆ ಮಾತ್ರ ಎಂದು ನಿರ್ಧಿಷ್ಟ ಅವಧಿಯನ್ನು ನಿಗದಿ ಮಾಡಲಾಗುತ್ತೆ.
Published On - 7:03 pm, Thu, 21 August 25




