
ಬೆಂಗಳೂರು, ಜುಲೈ 30: ರಾಮನಗರ, ಉಡುಪಿ ಬೆನ್ನಲ್ಲೇ ಬೆಂಗಳೂರಿನಲ್ಲೂ ದೇಶ ವಿರೋಧಿ ಬರಹ ಕಂಡುಬಂದಿದೆ. ಬೆಂಗಳೂರಿನ (Bengaluru) ಕೊಡಿಗೇಹಳ್ಳಿಯಲ್ಲಿರುವ ಅಪಾರ್ಟ್ಮೆಂಟ್ವೊಂದರ ಗೋಡೆಯ ಮೇಲೆ “ನಾನು ಭಾರತವನ್ನು ಸ್ಫೋಟಿಸುತ್ತೇನೆ” (I am going to blast india) ಎಂದು ಇಂಗ್ಲಿಷ್ನಲ್ಲಿ ಬರೆಯಲಾಗಿದೆ. ಈ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಕೊಡಿಗೇಹಳ್ಳಿ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದರು. ದೇಶ ವಿರೋಧಿ ಬರಹ ಬರೆದ ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.
ಘಟನೆ ಸಂಬಂಧ ಕೊಡಿಗೆಹಳ್ಳಿ ಠಾಣೆ ಪೊಲೀಸರು ಎನ್ಸಿಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸಿಸಿಟಿವಿ ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ. ಮೂವರು ಅಪ್ರಾಪ್ತ ಹೆಣ್ಣುಮಕ್ಕಳು ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.
ಇತ್ತೀಚಿಗೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಿಟ್ಟೆ ಕಾಲೇಜಿನ ಮಹಿಳಾ ವಸತಿ ನಿಲಯದ ಶೌಚಾಲಯದ ಗೋಡೆಯ ಮೇಲೆ ಎರಡು ಸಮುದಾಯಗಳ ನಡುವೆ ದ್ವೇಷ ಹರಡುವ ರೀತಿ “ಹಿಂದೂಸ್ಥಾನ್ ನಹಿ ಮುಸ್ಲಿಂಸ್ಥಾನ ಬೋಲ್”. “ಮುಸ್ಲಿಂ ಜಿಂದಾಬಾದ್ ಹಿಂದೂ ಫಕ್ ಆಫ್” ಎಂದು ಓರ್ವ ವಿದ್ಯಾರ್ಥಿನಿ ಬರೆದಿದ್ದಳು. ಈ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕಾರ್ಕಳ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.
ಈ ಬಗ್ಗೆ ನಿಟ್ಟೆ ಕಾಲೇಜಿನ ಮಹಿಳಾ ವಸತಿ ನಿಲಯದ ಮ್ಯಾನೇಜರ್ ಕಾರ್ಕಳ ಪೊಲೀಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಸಿಸಿಟಿವಿ ದೃಶ್ಯ ಆಧರಿಸಿ ತನಿಖೆ ನಡೆಸಿದ್ದರು. ಆದರೆ, ಸರಿಯಾದ ಸಾಕ್ಷ್ಯ ಸಿಕ್ಕಿರಲಿಲ್ಲ.
ಕೊನೆಗೆ ಪೊಲೀಸರು ಕೈಬರಹ ತಜ್ಞರ ಸಹಾಯದಿಂದ ವಸತಿ ನಿಲಯದಲ್ಲಿನ ವಿದ್ಯಾರ್ಥಿನಿಗಳ ಅಸೈನ್ಮೆಂಟ್ಸ್ ಹಾಗೂ ಮತ್ತೊಮ್ಮೆ ಗೋಡೆ ಬರೆಸುವ ಮೂಲಕ ಆರೋಪಿಯನ್ನು ಪತ್ತೆ ಹಚ್ಚಿದರು. ಕೇರಳ ಕಾಸರಗೋಡು ಜಿಲ್ಲೆಯ ನಿವಾಸಿ ಫಾತಿಮಾ ಶಬ್ದಾಳನ್ನು ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಲಯ ಆರೋಪಿ ಫಾತಿಮಾ ಶಬ್ದಾಗೆ ಜಾಮೀನು ಮಂಜೂರು ಮಾಡಿತ್ತು.
ಇದನ್ನೂ ಓದಿ: ಪ್ರತಿಷ್ಠಿತ ಕಂಪನಿಯಲ್ಲಿ ದೇಶದ್ರೋಹ ಕೃತ್ಯ, ಪಾಕಿಸ್ತಾನ ಪರ ಬರಹ
ತಿಂಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಮುಸ್ಲಿಂ ಯುವಕನನ್ನು ಪೊಲೀಸರು ಬಂಧಿಸಿದ್ದರು. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದ ಜಾವೀದ್ ಎಂಬ ಯುವಕ, “ಪ್ರಧಾನಿ ಮೋದಿಯವರು ಇಮ್ರಾನ್ ಖಾನ್ ಕಾಲು ಹಿಡಿಯುತ್ತಿರುವ ಮತ್ತು ಶೂ ಬಿಚ್ಚುವ ರೀತಿ” ಎಐ ತಂತ್ರಜ್ಞಾನ ಮೂಲಕ ಎಡಿಟ್ ಮಾಡಿ ಫೋಟೋ ಕ್ರಿಯೇಟ್ ಮಾಡಿದ್ದಾನು. ಬಳಿಕ, ಈ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದನು.
Published On - 6:06 pm, Wed, 30 July 25