ಬಿಎಂಟಿಸಿ ನೌಕರರು ಅಪಘಾತದಲ್ಲಿ ಮೃತಪಟ್ಟರೆ 1.50 ಕೋಟಿ ರೂ. ಪರಿಹಾರ ಜಾರಿ: ‘ಟಿವಿ9’ ವರದಿ ಫಲಶ್ರುತಿ
ಇದು ಬಿಎಂಟಿಸಿಯ 28000 ನೌಕರರ ಕುಟುಂಸ್ಥರಿಗೆ ನೆಮ್ಮದಿ ಮತ್ತು ಧೈರ್ಯ ನೀಡುವ ಸುದ್ದಿ. ಈ ಹಿಂದೆ ಕೆಎಸ್ಆರ್ಟಿಸಿ ನೌಕರರು ಅಪಘಾತದಲ್ಲಿ ಮೃತಪಟ್ಟರೆ 1 ಕೋಟಿ ರುಪಾಯಿ ಪರಿಹಾರ ನೀಡಲಾಗ್ತಿತ್ತು. ಬಿಎಂಟಿಸಿಯಲ್ಲಿ ಕೇವಲ 50 ಲಕ್ಷ ರುಪಾಯಿ ನೀಡಲಾಗ್ತಿತ್ತು. ‘ಟಿವಿ9’ ನಿರಂತರ ವರದಿ ಮಾಡಿದ ಬಳಿಕ, ಇದೀಗ ಬಿಎಂಟಿಸಿಯ ನೌಕರರು ಅಪಘಾತದಲ್ಲಿ ಪ್ರಾಣ ಕಳೆದುಕೊಂಡರೆ ಅವರ ಕುಟುಂಬಕ್ಕೆ ಬರೋಬ್ಬರಿ 1.5 ಕೋಟಿ ರುಪಾಯಿ ಪರಿಹಾರ ನೀಡುವ ಯೋಜನೆ ಜಾರಿಗೆ ಬಂದಿದೆ.
ಬೆಂಗಳೂರು, ಜನವರಿ 27: ಬಿಎಂಟಿಸಿಯ ನೌಕರರು ಅಪಘಾತದಲ್ಲಿ ಪ್ರಾಣ ಕಳೆದುಕೊಂಡರೆ ಅವರ ಕುಟುಂಬಕ್ಕೆ ಬರೋಬ್ಬರಿ 1.50 ಕೋಟಿ ರುಪಾಯಿ ಪರಿಹಾರ ನೀಡುವ ಯೋಜನೆ ಕೊನೆಗೂ ಜಾರಿಗೆ ಬಂದಿದೆ. ಕೆಎಸ್ಆರ್ಟಿಸಿ ನೌಕರರು ಅಪಘಾತದಲ್ಲಿ ಮೃತಪಟ್ಟರೆ ಅವರ ಕುಟುಂಬದವರಿಗೆ 1 ಕೋಟಿ ರುಪಾಯಿ ಪರಿಹಾರ ನೀಡಲಾಗುತ್ತಿತ್ತು. ಆದರೆ ಬಿಎಂಟಿಸಿಯ ನೌಕರರು ಆಕ್ಸಿಡೆಂಟ್ನಲ್ಲಿ ಪ್ರಾಣ ಕಳೆದುಕೊಂಡರೆ 50 ಲಕ್ಷ ರುಪಾಯಿ ಮಾತ್ರ ಪರಿಹಾರ ನೀಡಲಾಗುತ್ತಿತ್ತು.
ಪರಿಹಾರದಲ್ಲಿನ ತಾರತಮ್ಯದ ಬಗ್ಗೆ ‘ಟಿವಿ9’ ನಿರಂತರ ವರದಿ ಪ್ರಸಾರ ಮಾಡಿತ್ತು. ಇದೀಗ ಬಿಎಂಟಿಸಿ ನೌಕರರಿಗೂ 1.50 ಕೋಟಿ ರುಪಾಯಿ ಅಪಘಾತ ವಿಮೆ ನೀಡಲು ಸಂಸ್ಥೆ ತೀರ್ಮಾನಿಸಿದೆ.
ಈ ಬಗ್ಗೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ದೇಶದಲ್ಲಿ ಯಾವುದೇ ಸರಕಾರಿ ನೌಕರರಿಗೂ ಈ ಸೌಲಭ್ಯವಿಲ್ಲ, ಸೇನೆಯಲ್ಲಿ ಸೇವೆ ಸಲ್ಲಿಸುವ ಯೋಧರು ಪ್ರಾಣ ಕಳೆದುಕೊಂಡರು 60 ಲಕ್ಷ ರುಪಾಯಿ ನೀಡಲಾಗುತ್ತದೆ ಆದರೆ, ಬಿಎಂಟಿಸಿ ನೌಕರರು ಅಪಘಾತದಲ್ಲಿ ಮೃತಪಟ್ಟರೆ ಇನ್ನು ಒಂದೂವರೆ ಕೋಟಿ ರುಪಾಯಿ ನೀಡಲಾಗುತ್ತದೆ ಎಂದರು.
ಭಾನುವಾರದಿಂದಲೇ ಈ ಅಪಘಾತ ವಿಮಾ ಸೌಲಭ್ಯ ಜಾರಿಯಾಗಿದೆ. ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಸೂಚನೆ ಮೇರೆಗೆ ಈ ವಿಮಾ ಸೌಲಭ್ಯ ಜಾರಿ ಮಾಡಲಾಗಿದ್ದು, ಬಿಎಂಟಿಸಿಯ 28 ಸಾವಿರ ನೌಕರರ ಕುಟುಂಬಗಳಿಗೆ ಈ ವಿಮಾ ಸೌಲಭ್ಯ ದೊರೆಯಲಿದೆ. ಬಿಎಂಟಿಸಿಯ ನೌಕರರು ಕರ್ತವ್ಯದಲ್ಲಿರುವಾಗ ಮತ್ತು ಕರ್ತವ್ಯದಲ್ಲಿಲ್ಲದಿದ್ದಾಗಲೂ ಸಂಭವಿಸುವ ಅಪಘಾತಕ್ಕೂ1 ಕೋಟಿ 50 ಲಕ್ಷ ರೂಪಾಯಿ ಪರಿಹಾರ ಸಿಗುತ್ತದೆ.
ಸಹಜ ಸಾವಿನ ಪರಿಹಾರದ ಮೊತ್ತವೂ ಹೆಚ್ಚಳ
ಬಿಎಂಟಿಸಿ ಸಿಬ್ಬಂದಿ ಸಹಜವಾಗಿ ಸಾವನ್ನಪ್ಪಿದರೆ 10 ಲಕ್ಷ ರುಪಾಯಿ ಪರಿಹಾರ ನೀಡಲಾಗುತ್ತದೆ. ಈ ಹಿಂದೆ ಮೂರು ಲಕ್ಷ ರುಪಾಯಿ ಪರಿಹಾರ ನೀಡಲಾಗುತ್ತಿತ್ತು. ಈ ಬಗ್ಗೆ ಮಾತನಾಡಿದ ಸಾರಿಗೆ ನೌಕರರ ಮುಖಂಡ ಜಗದೀಶ್, ಕೆಎಸ್ಆರ್ಟಿಸಿಯಲ್ಲಿ ಮಾತ್ರ ಈ ವಿಮಾ ಸೌಲಭ್ಯವಿತ್ತು. ‘ಟಿವಿ9’ ಮೂಲಕ ನಾವು ಬಿಎಂಟಿಸಿ ನೌಕರರಿಗೂ ಈ ಸೌಲಭ್ಯ ನೀಡಲು ಒತ್ತಾಯ ಮಾಡಿದ್ದೆವು. ಇದಕ್ಕೆ ಸರ್ಕಾರ ಒಪ್ಪಿಕೊಂಡಿದೆ, ಧನ್ಯವಾದಗಳು ಎಂದಿದ್ದಾರೆ.
ಇದನ್ನೂ ಓದಿ: ಕಬ್ಬನ್ ಪಾರ್ಕ್ ಒಳಗೆ 365 ದಿನವೂ ವಾಹನ ಸಂಚಾರಕ್ಕೆ ಅವಕಾಶ? ಸರ್ಕಾರದಿಂದ ಮಹತ್ವದ ಸಭೆ
ಒಟ್ಟಿನಲ್ಲಿ ಹಗಲು ರಾತ್ರಿ ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಕೆಲಸ ಮಾಡುವ ಬಿಎಂಟಿಸಿ ಚಾಲಕ, ನಿರ್ವಾಹಕರು ಅಪಘಾತದಲ್ಲಿ ಮೃತಪಟ್ಟರೆ ಅವರ ಕುಟುಂಬಕ್ಕೆ ಒಂದೂವರೆ ಕೋಟಿ ರುಪಾಯಿ ಪರಿಹಾರ ನೀಡಲು ಮುಂದಾಗಿರುವುದು ನಿಜಕ್ಕೂ ಒಳ್ಳೆಯ ಸುದ್ದಿ. ಇದರಿಂದ ನೌಕರರ ಕುಟುಂಬಕ್ಕೆ ದೊಡ್ಡ ಮಟ್ಟದಲ್ಲಿ ಸಹಾಯವಾಗುವುದು ಖಚಿತ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ