ಕಬ್ಬನ್ ಪಾರ್ಕ್ ಒಳಗೆ 365 ದಿನವೂ ವಾಹನ ಸಂಚಾರಕ್ಕೆ ಅವಕಾಶ? ಸರ್ಕಾರದಿಂದ ಮಹತ್ವದ ಸಭೆ
ಬೆಂಗಳೂರು ಈಗ ಬಹುತೇಕ ಕಾಂಕ್ರೀಟ್ ಕಾಡಾಗಿ ಬೆಳೆದಿದೆ. ಉಳಿದಿರುವ ಅಲ್ಪ ಸ್ವಲ್ಪ ಪರಿಸರದರಲ್ಲಿ ಜನ ಬದುಕು ಕಂಡುಕೊಳ್ಳುವ ಪರಿಸ್ಥಿತಿ ಇದೆ. ಬೆಂಗಳೂರಿಗರ ಪಾಲಿನ ಆಕ್ಸಿಜನ್ ಪಾರ್ಕ್ ಎಂದೇ ಪ್ರಿಯವಾಗಿರುವ ಕಬ್ಬನ್ ಪಾರ್ಕ್ ಪರಿಸರಕ್ಕೆ ಸರ್ಕಾರ ಕೊಡಲಿ ಪೆಟ್ಟು ನೀಡುವ ಭೀತಿ ಎದುರಾಗಿದೆ. ಸರ್ಕಾರ ಏನು ಮಾಡಲು ಹೊರಟಿದೆ? ವಿರೋಧ ವ್ಯಕ್ತವಾಗಿದ್ದೇಕೆ ಎಂಬ ವಿವರ ಇಲ್ಲಿದೆ.
ಬೆಂಗಳೂರು, ಜನವರಿ 24: ಎಲ್ಲೆಲ್ಲೂ ಹಚ್ಚ ಹಸುರಿನ ವಾತಾವರಣ, ನಗರದ ಟ್ರಾಫಿಕ್ ಕಿರಿಕಿರಿಯಿಂದ ತಪ್ಪಿಸಿ ಒಳಬಂದರೆ ಅದೇನೋ ಆನಂದ. ಮೈಂಡ್ ರಿಲ್ಯಾಕ್ಸ್ ಆಗುವ ಜೊತೆಗೆ ಶ್ವಾಸಕೋಶ ಕೂಡ ಫ್ರೀ! ಈ ಎಲ್ಲಾ ಅನುಭವಗಳು ಆಗೋದು ಕಬ್ಬನ್ ಪಾರ್ಕ್ ಒಳಗೆ ಕಾಲಿಟ್ಟಾಗ. 197 ಎಕರೆ ವಿಶಾಲವಾದ ಜಾಗದಲ್ಲಿ ಹರಡಿರುವ ಕಬ್ಬನ್ ಪಾರ್ಕ್ ಬೆಂಗಳೂರು ನಗರ ಜನರ ಪಾಲಿನ ಆಕ್ಸಿಜನ್ ಪಾರ್ಕ್. ಆದರೆ, ಇತ್ತೀಚಿಗೆ ಕಬ್ಬನ್ ಪಾರ್ಕ್ ಪರಿಸರಕ್ಕೆ ಕೊಡಲಿ ಪೆಟ್ಟು ಬೀಳುವ ಆತಂಕ ಎದುರಾಗಿದೆ. ಕಬ್ಬನ್ ಪಾರ್ಕ್ ಪರಿಸರ ಉಳಿಸುವ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ಹತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಈ ಪೈಕಿ ಎರಡನೇ ಹಾಗೂ ನಾಲ್ಕನೇ ಶನಿವಾರ, ಭಾನುವಾರ ಹಾಗೂ ಸರ್ಕಾರಿ ದಿನಗಳಲ್ಲಿ ಕಬ್ಬನ್ ಪಾರ್ಕ್ ಒಳಗೆ ವಾಹನಗಳ ಓಡಾಟಕ್ಕೆ ನಿಷೇಧ ಹೇರಿದೆ. ಹಲವು ವರ್ಷಗಳಿಂದ ರೂಪಿಸಿರುವ ಈ ನಿರ್ಧಾರ ಈಗ ಬದಲಾಗುವ ಸಾಧ್ಯತೆ ಹೆಚ್ಚಿದೆ.
ಸಿಟಿಯಲ್ಲಿ ಟ್ರಾಫಿಕ್ ದಟ್ಟಣೆ ಹೆಚ್ಚಾಗಿದೆ ಹೀಗಾಗಿ ಕಬ್ಬನ್ ಪಾರ್ಕ್ ಒಳಗೆ ರಜಾ ದಿನಗಳಲ್ಲಿಯೂ ವಾಹನಗಳ ಓಡಾಟಕ್ಕೆ ನಿಷೇಧ ಹೇರಬಾರದು ಎಂದು ಟ್ರಾಫಿಕ್ ವಿಭಾಗ ಸರ್ಕಾರದ ಮೇಲೆ ಒತ್ತಾಯ ಹೇರಿದೆ. ಆದರೆ, ಈ ನಡೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಕಬ್ಬನ್ ಪಾರ್ಕ್ ಒಳಗೆ ವರ್ಷ 365 ದಿನವೂ ವಾಹನ ಸಂಚಾರ ಓಡಾಟಕ್ಕೆ ಅವಕಾಶ?
ಶನಿವಾರ, ಭಾನುವಾರ, ಸರ್ಕಾರಿ ರಜೆಗಳಲ್ಲಿ ವಾಹನ ಸಂಚಾರ ನಿಷೇಧಿಸಿದರೆ, ಟ್ರಾಫಿಕ್ ಜಾಮ್ ಆಗುತ್ತದೆ. ಸೆಂಟ್ರಲ್ ಬ್ಯುಸಿನೆಸ್ ಡಿಸ್ಟ್ರಿಕ್ಟ್ ಸುತ್ತಮುತ್ತ ಭಾರಿ ಸಂಚಾರ ದಟ್ಟಣೆ ಉಂಟಾಗುತ್ತದೆ. ಇದರಿಂದ ಬೆಂಗಳೂರು ದಕ್ಷಿಣ ಹಾಗೂ ಉತ್ತರದ ಭಾಗದಲ್ಲಿ ಚೈನ್ ಟ್ರಾಫಿಕ್ ಜಾಮ್ ಆಗುತ್ತಿದೆ. ಈ ನಿರ್ಧಾರವನ್ನು ಕೈಬಿಡಬೇಕೆಂದು ಸಂಚಾರಿ ಇಲಾಖೆ ಸರ್ಕಾರವನ್ನು ಒತ್ತಾಯಿಸಿದೆ. ಆದರೆ ಇದಕ್ಕೆ ಪರಿಸರ ಪ್ರೇಮಿಗಳು ಸೇರಿ, ನಡಿಗೆದಾರರು ವಿರೋಧ ವ್ಯಕ್ತಪಡಿಸಿದ್ದಾರೆ.
ಬೇಕು, ಬೇಡಗಳ ಚರ್ಚೆಯ ಮಧ್ಯೆ ಸರ್ಕಾರದ ಪ್ರಾಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಗುರುವಾರ ಹೈವೋಲ್ಟೇಜ್ ಸಭೆ ನಡೆಸಿದ್ದಾರೆ. ತೋಟಾಗಾರಿಕೆ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಕಬ್ಬನ್ ಪಾರ್ಕ್ ಹಿತ ರಕ್ಷಣಾ ಸಮಿತಿಯ ಜೊತೆ ಸಭೆ ನಡೆಸಿ ಅಭಿಪ್ರಾಯ ಪಡೆದಿದ್ದಾರೆ.
ಈಗಾಗಲೇ ಕಬ್ಬನ್ ಪಾರ್ಕನ್ನು ‘ಕ್ವೈಟ್ ಝೋನ್’ ಎಂದು ಘೋಷಿಸಿಲಾಗಿದೆ. 2015ರಲ್ಲಿ ಕಬ್ಬನ್ ಪಾರ್ಕ್ ಉಳಿವಿಗೆ, ವಾಯು ಹಾಗೂ ಶಬ್ದ ಮಾಲಿನ್ಯ ತಡೆಗೆ ವಾಹನಗಳ ನಿಷೇಧ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಹಾಗಿದ್ದರೆ ಟ್ರಾಫಿಕ್ ಕಂಟ್ರೋಲ್ಗಾಗಿ ಕಬ್ಬನ್ ಪಾರ್ಕ್ ಬರೆ ಎಳೆಯಲು ಸರ್ಕಾರ ಮುಂದಾಗುತ್ತಾ? ತೋಟಗಾರಿಕೆ ಇಲಾಖೆಯ ತೀರ್ಮಾನ ವಿರೋಧಿಸುತ್ತಾ ಅಥವಾ ಪೊಲೀಸರ ಮನವಿ ಪುರಸ್ಕರಿಸುತ್ತಾ ಎಂಬುದನ್ನು ಕಾದುನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ