ಬೆಂಗಳೂರು: ಆ ಒಂದು ಕಾರಣಕ್ಕೆ ನೀವು ಸಿಗ್ನಲ್ ಜಂಪ್ ಮಾಡಿದ್ದರೆ ದಂಡವಿಲ್ಲ! ಚಲನ್ ಬಂದಿದ್ದರೆ ಹೀಗೆ ಮಾಡಿ
ಕೆಲವೊಮ್ಮೆ ತೀರಾ ಅನಿವಾರ್ಯ ಸಂದರ್ಭಗಳಲ್ಲಿ, ತುರ್ತು ಪರಿಸ್ಥಿತಿಗಳಲ್ಲಿ ಸಿಗ್ನಲ್ ಜಂಪ್ ಮಾಡಬೇಕಾಗಿ ಬರುತ್ತದೆ. ಆಂಬ್ಯುಲೆನ್ಸ್ ಬಂದಾಗ ನಾವು ಸಿಗ್ನಲ್ ಬಳಿ ಇದ್ದರೆ ಅದಕ್ಕೆ ದಾರಿ ಮಾಡಿಕೊಡಲು ಮುಂದೆ ಹೋಗಲೇಬೇಕಾಗುತ್ತದೆ. ಇಂಥ ಸಂದರ್ಭದಲ್ಲಿ ಸಿಗ್ನಲ್ ಜಂಪ್ ಮಾಡಿದ್ದಕ್ಕೆ ದಂಡ ಪಾವತಿಸಲು ಚಲನ್ ಬಂದರೆ ಏನು ಮಾಡಬೇಕು? ಬೆಂಗಳೂರು ಟ್ರಾಫಿಕ್ ಪೊಲೀಸರೇ ನೀಡಿರುವ ಐಡಿಯಾ ಇಲ್ಲಿದೆ ನೋಡಿ.
ಬೆಂಗಳೂರು, ಜುಲೈ 16: ಬೆಂಗಳೂರು ನಗರದಲ್ಲಿ ವಾಹನ ಚಾಲನೆ ಮಾಡುತ್ತಿರುವ ಸಂದರ್ಭದಲ್ಲಿ ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡಲು ಸಿಗ್ನಲ್ ಜಂಪ್ ಮಾಡಿದರೆ ಭಯಪಡಬೇಕಾಗಿಲ್ಲ. ಈ ಕಾರಣಕ್ಕಾಗಿ ಮಾಡುವ ಸಿಗ್ನಲ್ ಜಂಪ್ಗೆ ದಂಡ ತೆರಬೇಕಾಗಿಲ್ಲ ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ. ಒಂದು ವೇಳೆ ಇಂಥ ಸಂದರ್ಭಗಳಲ್ಲಿ ಸಿಗ್ನಲ್ ಜಂಪ್ ಮಾಡಿ ಅದಕ್ಕೆ ದಂಡ ಪಾವತಿಸುವಂತೆ ಚಲನ್ ಬಂದರೆ ಏನು ಮಾಡಬೇಕು ಎಂದೂ ಬೆಂಗಳೂರು ಸಂಚಾರಿ ಪೊಲೀಸರೇ ಸಲಹೆ ನೀಡಿದ್ದಾರೆ.
ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡುವ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರು ಟ್ರಾಫಿಕ್ ಪೊಲೀಸರು ಹೊಸ ಮಾರ್ಗಸೂಚಿ ಹೊರಡಿಸಿದ್ದಾರೆ. ಜತೆಗೆ, ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡಲು ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿದ್ದಕ್ಕಾಗಿ ಹೊರಡಿಸಿದ ಚಲನ್‌ಗಳನ್ನು ಈಗ ರದ್ದುಗೊಳಿಸಲಾಗುವುದು ಎಂದು ಘೋಷಿಸಿದ್ದಾರೆ.
ಈ ವಿಚಾರವಾಗಿ ಜಂಟಿ ಪೊಲೀಸ್ ಕಮಿಷನರ್ (ಸಂಚಾರ) ಎಂಎನ್ ಅನುಚೇತ್ ಮಾಹಿತಿ ನೀಡಿದ್ದಾರೆ. ಆಂಬ್ಯುಲೆನ್ಸ್‌ಗೆ ದಾರಿ ಮಾಡುವಾಗ ಸಿಗ್ನಲ್ ಜಂಪ್ ಮಾಡಿದ್ದಕ್ಕಾಗಿ ಕ್ಯಾಮರಾಗಳ ದೃಶ್ಯ ಆಧರಿಸಿ ದಂಡ ವಿಧಿಸಿದ ಉದಾಹರಣೆಗಳಿವೆ. ಇದಕ್ಕೆ ಭಯಪಡಬೇಕಾಗಿಲ್ಲ ಎಂದು ಅವರು ಹೇಳಿದ್ದಾರೆ. ಏನು ಮಾಡಬೇಕು ಎಂದೂ ತಿಳಿಸಿದ್ದಾರೆ.
ಚಲನ್ ಬಂದಿದ್ದರೆ ಏನು ಮಾಡಬೇಕು?
ಸಿಗ್ನಲ್ ಜಂಪ್ಗಾಗಿ ಚಲನ್‌ಗಳನ್ನು ಪಡೆದ ಪ್ರಯಾಣಿಕರು ಇನ್‌ಫೆಂಟ್ರಿ ರಸ್ತೆಯಲ್ಲಿರುವ ಸಂಚಾರ ನಿರ್ವಹಣಾ ಕೇಂದ್ರದ ಕಚೇರಿಗೆ ಭೇಟಿ ನೀಡಿ ಅಲ್ಲಿನ ಸಿಬ್ಬಂದಿಯ ಗಮನಕ್ಕೆ ತರಬಹುದು ಎಂದು ಎಂಎನ್ ಅನುಚೇತ್ ತಿಳಿಸಿದ್ದಾರೆ. ಅಥವಾ ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್‌ಪಿ) ಅಪ್ಲಿಕೇಶನ್ ಮೂಲಕ ಮನವಿ ಮಾಡಬಹುದು ಎಂದೂ ತಿಳಿಸಿದ್ದಾರೆ.
ಕ್ಯಾಮರಾ ಹೊಂದಿರುವ ಪ್ರತಿ ಸಿಗ್ನಲ್‌ನಲ್ಲಿ ಸಂಚಾರ ನಿಯಮ ಉಲ್ಲಂಘನೆಯ ಐದು ಸೆಕೆಂಡುಗಳ ಕಾಲ ಚಟುವಟಿಕೆಗಳು ರೆಕಾರ್ಡ್ ಆಗುತ್ತವೆ. ಈ ಸಂದರ್ಭದಲ್ಲಿ ಆಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಡುವುದಕ್ಕಾಗಿ ನಿಯಮ ಉಲ್ಲಂಘಿಸಿದ್ದು ಕಂಡುಬಂದಲ್ಲಿ ತಕ್ಷಣವೇ ವಾಹನ ಸವಾರರ ಮೇಲಿನ ದಂಡ ರದ್ದುಗೊಳಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಕನ್ನಡತಿ ಅಪರ್ಣಾ ಮರೆಯಾಗುತ್ತಿದ್ದಂತೆ ಹೊಸ ಮಾರ್ಗಗಳ ಮೆಟ್ರೋ ರೈಲಿಗೆ ಕನ್ನಡ ಧ್ವನಿಗೆ ಬಿಎಂಆರ್ಸಿಎಲ್ ಹುಡುಕಾಟ
ಜಿಪಿಎಸ್ ಅಳವಡಿಸಲಾಗಿರುವ ಆಂಬ್ಯುಲೆನ್ಸ್‌ಗಳನ್ನು ಗುರುತಿಸಲು ಮತ್ತು ಸ್ವಯಂಚಾಲಿತವಾಗಿ ಸಿಗ್ನಲ್‌ನಲ್ಲಿ ಹಸಿರು ಬಣ್ಣ ಬೆಳಗುವಂತೆ ಮಾಡಲು 10 ಟ್ರಾಫಿಕ್ ಸಿಗ್ನಲ್ ಜಂಕ್ಷನ್‌ಗಳಲ್ಲಿ ಜಿಯೋಫೆನ್ಸಿಂಗ್ ಅಳವಡಿಸಲಾಗಿದೆ. ಈ ನಿಟ್ಟಿನಲ್ಲಿ 10 ಜಂಕ್ಷನ್‌ಗಳಲ್ಲಿ ನಿತ್ಯ ಸಂಚರಿಸುವ ಸುಮಾರು 80 ಆಂಬುಲೆನ್ಸ್‌ಗಳಲ್ಲಿ ಜಿಪಿಎಸ್ ಅಳವಡಿಸಲಾಗಿದೆ ಎಂದು ಆರೋಗ್ಯ ಮತ್ತು ಕಲ್ಯಾಣ ಇಲಾಖೆ ತಿಳಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:14 am, Tue, 16 July 24