
ಬೆಂಗಳೂರು, ಅಕ್ಟೋಬರ್ 05: ಜಿಲ್ಲೆಯ ಆನೇಕಲ್ ತಾಲೂಕಿನ ಬ್ಯಾಗಡದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ಅನುಮತಿ ಪಡೆಯದೆ ಅಕ್ರಮವಾಗಿ ಕಾರ್ಯಾಚರಣೆ ನಡೆಸುತ್ತಿದ್ದ ಅನಧಿಕೃತ ಪಿಜಿ ಹಾಗೂ ನಿರ್ಮಾಣ ಹಂತದ ಕಟ್ಟಡಗಳ ಮೇಲೆ ಪಂಚಾಯಿತಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪ್ರತಿಷ್ಠಿತ ಅಲಯನ್ಸ್ ಕಾಲೇಜು ಸಮೀಪದ ಈಡನ್ ಗಾರ್ಡನ್, ನಕ್ಷತ್ರ ಹಾಗೂ ಸಾಯಿ ಬಡಾವಣೆಗಳಲ್ಲಿ ಐದಾರು ವರ್ಷಗಳಿಂದ ತಲೆಯೆತ್ತಿರುವ 28ಕ್ಕೂ ಹೆಚ್ಚು ಅನಧಿಕೃತ ಪಿಜಿಗಳ ವಿರುದ್ಧ ಪಿಡಿಒ ನಾಗರಾಜ್ ನೇತೃತ್ವದಲ್ಲಿ ಕಟ್ಟುನಿಟ್ಟಿನ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಗ್ರಾಮ ಪಂಚಾಯಿತಿ, ಯೋಜನಾ ಪ್ರಾಧಿಕಾರ, ಬೆಸ್ಕಾಂ ಹಾಗೂ ಅಗ್ನಿಶಾಮಕ ದಳದಿಂದ ಯಾವುದೇ ನಿರಾಕ್ಷೇಪಣಾ ಪತ್ರ (NOC) ಪಡೆಯದೆ ವಾಣಿಜ್ಯ ಉದ್ದೇಶಕ್ಕೆ ಕಟ್ಟಡಗಳನ್ನು ಬಳಸಲಾಗುತ್ತಿತ್ತು. ಜಿ+2 ಅಂತಸ್ತಿಗೆ ಅನುಮತಿ ಪಡೆದು, ನಿಯಮ ಉಲ್ಲಂಘಿಸಿ 7 ರಿಂದ 8 ಅಂತಸ್ತಿನ ಬೃಹತ್ ಕಟ್ಟಡಗಳನ್ನು ನಿರ್ಮಿಸಲಾಗಿತ್ತು. ಹೊರರಾಜ್ಯ ಮೂಲದ ಮಾಲೀಕರು ವಿದ್ಯಾರ್ಥಿಗಳಿಂದ ತಿಂಗಳಿಗೆ 10,000 ರೂಪಾಯಿಯಿಂದ 15,000 ರೂಪಾಯಿಯವರೆಗೆ ಶುಲ್ಕ ವಸೂಲಿ ಮಾಡುತ್ತಿದ್ದು, ಜನವಸತಿ ಗೃಹಗಳೆಂದು ಸುಳ್ಳು ಹೇಳಿ ಸರ್ಕಾರಕ್ಕೆ ತೆರಿಗೆ ವಂಚಿಸುತ್ತಿದ್ದರು. ಅಲ್ಲದೆ, ಕೊಳಚೆ ನೀರು ಮತ್ತು ಕಸ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲೇ ತ್ಯಾಜ್ಯ ನೀರು ಹರಿಯುತ್ತಿದ್ದು, ಸುತ್ತಮುತ್ತಲಿನ ನಿವಾಸಿಗಳು ತೀವ್ರ ತೊಂದರೆ ಅನುಭವಿಸುವಂತಾಗಿತ್ತು. ಭದ್ರತೆ ಹಾಗೂ ಸಿಸಿಟಿವಿ ಇಲ್ಲದೆ ಯುವತಿಯರು ಮತ್ತು ವಿದ್ಯಾರ್ಥಿಗಳ ಸುರಕ್ಷತೆಯೂ ಪ್ರಶ್ನಾರ್ಹವಾಗಿತ್ತು.
ಇದನ್ನೂ ಓದಿ ಬೆಂಗಳೂರಿನ ಅಕ್ರಮ ಪಿಜಿಗಳ ವಿರುದ್ಧ ಜಿಬಿಎ ಸಮರ: ನಿಯಮ ಉಲ್ಲಂಘಿಸಿದ ಪಿಜಿಗಳಿಗೆ ಮೂಲಸೌಕರ್ಯಗಳು ಕಟ್!
ಈ ಹಿನ್ನೆಲೆಯಲ್ಲಿ ಗ್ರಾ.ಪಂ. ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ನಿರ್ಮಾಣ ಹಂತದಲ್ಲಿದ್ದ 18 ಅನಧಿಕೃತ ಕಟ್ಟಡಗಳನ್ನು ಸೀಜ್ ಮಾಡಿದ್ದಾರೆ. ಈಗಾಗಲೇ ವಿದ್ಯಾರ್ಥಿಗಳು ವಾಸವಿರುವ 12 ಅಕ್ರಮ ಪಿಜಿಗಳಿಗೆ ನೋಟಿಸ್ ಜಾರಿ ಮಾಡಿದ್ದು, ತೆರವುಗೊಳಿಸಲು 1 ವಾರದ ಗಡುವು ನೀಡಿದ್ದಾರೆ. “ಕಾನೂನು ಉಲ್ಲಂಘನೆ ಕುರಿತು ಹತ್ತಾರು ಬಾರಿ ನೋಟಿಸ್ ನೀಡಿದ್ದರೂ ಮಾಲೀಕರು ಸ್ಪಂದಿಸಿರಲಿಲ್ಲ. ಬೆಸ್ಕಾಂಗೆ ಪತ್ರ ಬರೆದರೂ ಅಧಿಕಾರಿಗಳು ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡಿದ್ದಾರೆ. ಪೊಲೀಸರು ಕೂಡ ಎಫ್‌ಐಆರ್ ದಾಖಲಿಸುತ್ತಿರಲಿಲ್ಲ. ಹೀಗಾಗಿ ಸೀಜ್ ಕ್ರಮ ಕೈಗೊಳ್ಳಲಾಗಿದ್ದು, ಗಡುವು ಮುಗಿದ ನಂತರ ತೆರವು ಕಾರ್ಯಾಚರಣೆ ನಡೆಸಲಾಗುವುದು,” ಎಂದು ಪಿಡಿಒ ನಾಗರಾಜ್ ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ