ಕೇಸರಿ ಪಡೆಗೆ RSS ಸ್ಪೆಷಲ್ ಕ್ಲಾಸ್: ಕಾರ್ಯಾಗಾರದಲ್ಲಿ BJP ನಾಯಕರಿಗೆ ಏನೆಲ್ಲ ಸಲಹೆ?
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಚಟುವಟಿಕೆಗಳಿಗೆ ರಾಜ್ಯ ಸರ್ಕಾರ ವಿಧಿಸಲು ಹೊರಟಿರುವ ನಿರ್ಬಂಧ ಮತ್ತು ವಿರೋಧಿ ನರೇಟಿವ್‌ಗಳನ್ನು ಎದುರಿಸುವ ಬಗ್ಗೆ ಬೆಂಗಳೂರಿನಲ್ಲಿ ನಡೆದ ಆರ್‌ಎಸ್‌ಎಸ್-ಬಿಜೆಪಿ ಕಾರ್ಯಾಗಾರದಲ್ಲಿ ಮಹತ್ವದ ಚರ್ಚೆ ನಡೆದಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಅಶೋಕ್ ಸೇರಿ ಬಿಜೆಪಿ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಆ ಕುರಿತ ಇನ್ಸೈಡ್ ಡಿಟೇಲ್ಸ್ ಇಲ್ಲಿದೆ.

ಬೆಂಗಳೂರು, ನವೆಂಬರ್ 03: ರೇಸ್ಕೋರ್ಸ್ ರಸ್ತೆಯಲ್ಲಿರುವ ಭಾರತೀಯ ವಿದ್ಯಾ ಭವನದಲ್ಲಿ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಪಕ್ಷದ ನಿಲುವು ಮಂಡನೆ ವಿಧಾನದ ಕುರಿತು ಆರ್‌ಎಸ್‌ಎಸ್ ಹಾಗೂ ಬಿಜೆಪಿ ಕಾರ್ಯಾಗಾರ ನಡಯಿತು. ಈ ವೇಳೆ RSS ಚಟುವಟಿಕೆಗಳಿಗೆ ರಾಜ್ಯ ಸರ್ಕಾರ ನಿರ್ಬಂಧ ವಿಧಿಸಲು ಮುಂದಾಗಿರುವ ವಿಷಯವೂ ಚರ್ಚೆಯಾಗಿದ್ದು, ಈ ರೀತಿಯ ಸಂದರ್ಭ ಸೃಷ್ಟಿಯಾಗದಾಗ ಯಾವ ರೀತಿ ಕೌಂಟರ್ ಮಾಡಬೇಕು ಎಂಬುದನ್ನು RSS ಮುಖಂಡರು ಬಿಜೆಪಿ ಜನಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ಏನೆಲ್ಲ ಸಲಹೆ?
ಕಾಂಗ್ರೆಸ್ ಸೇರಿ ಬೇರೆ ಸರ್ಕಾರಗಳು ಬಂದಾಗ ನರೇಟಿವ್ ಸೆಟ್ ಆಗುತ್ತಲೇ ಇರುತ್ತೆ. ಆರ್‌ಎಸ್‌ಎಸ್ ನಿಷೇಧ ಮಾಡಿದಾಗಲೂ ಇಂತಹದ್ದೇ ಸನ್ನಿವೇಶ ಸೃಷ್ಟಿಯಾಗಿತ್ತು. ಆ ಕಾಲದಲ್ಲಿ ಸಾಮಾಜಿಕ ಮಾಧ್ಯಮಗಳು ಇರಲಿಲ್ಲ. ಈಗ ಸಾಮಾಜಿಕ ಮಾಧ್ಯಮಗಳು ಮುಂಚೂಣಿಯಲ್ಲಿದ್ದು, ಅಲ್ಲೇ ಡ್ರಾ ಅಲ್ಲೇ ಬಹುಮಾನ ಎಂಬ ಪರಿಸ್ಥಿತಿ ಇದೆ. ಕೆಲವೊಂದಕ್ಕೆ ಮೌನವೇ ಉತ್ತರವಾಗಿರಬೇಕು. ಪಕ್ಷದಲ್ಲಿ ಒಂದು ರಿಸರ್ಚ್ ವಿಂಗ್ ಇಟ್ಟುಕೊಳ್ಳಿ. ಈ ರೀತಿಯ ಸಂದರ್ಭ ಬಂದಾಗ ಏನು ಮಾಡಬೇಕೆಂದು ಯೋಚಿಸಿ ಎಂದು RSS ಮುಖಂಡರು ಬಿಜೆಪಿ ನಾಯಕರಿಗೆ ತಿಳಿಸಿದ್ದಾರೆ. ಧರ್ಮಸ್ಥಳ ಪ್ರಕರಣವನ್ನು ಅವರು ಯಾವ ರೀತಿ ಮುನ್ನೆಲೆಗೆ ತಂದರು ಎಂಬುದನ್ನ ನೋಡಿದ್ದೇವೆ. ಇಂತಹ ಸಂದರ್ಭ ಬಂದಾಗ ಅದನ್ನು ಸರಿಯಾಗಿ ಕೌಂಟರ್ ಮಾಡಬೇಕಾಗುತ್ತದೆ ಎಂದು ಕಾರ್ಯಾಗಾರದಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಕೂಡ ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: RSS ಪರೇಡ್ಗೆ ಏಕೆ ಅನುಮತಿ ಕೊಡ್ಬೇಕು?: ಸಚಿವ ಪ್ರಿಯಾಂಕ್ ಖರ್ಗೆ ಗರಂ
ಕಾರ್ಯಾಗಾರದಲ್ಲಿ ಯಾರೆಲ್ಲ ಭಾಗಿ?
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕರಾದ ಅಶೋಕ್, ಛಲವಾದಿ ನಾರಾಯಣಸ್ವಾಮಿ, ಪರಿಷತ್ ಸದಸ್ಯ ಸಿ.ಟಿ.ರವಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್, ಶಾಸಕರಾದ ಡಾ.ಅಶ್ವತ್ಥ್ ನಾರಾಯಣ, ಜನಾರ್ದನ ರೆಡ್ಡಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಕೆಲವು ಸಂಸದರು, ಶಾಸಕರು ಮತ್ತು ಎಂಎಲ್ಸಿಗಳು ಕಾರ್ಯಾಗಾರದಲ್ಲಿ ಭಾಗಿಯಾಗಿದ್ದರು. ಪಕ್ಷದ ರಾಜ್ಯ ಮತ್ತು ಜಿಲ್ಲಾ ವಕ್ತಾರರು, ನಿಯಮಿತವಾಗಿ ಸುದ್ದಿಗೋಷ್ಠಿ ನಡೆಸುವ ಬಿಜೆಪಿ ಜನಪ್ರತಿನಿಧಿಗಳೂ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:27 pm, Mon, 3 November 25



