ಬಿ ಖಾತಾದಿಂದ ಎ ಖಾತಾಗೆ ಬದಲಾವಣೆ: ಜನರ ಪ್ರಶ್ನೆಗಳಿಗೆ ಯಾರಿಗೂ ಉತ್ತರವೇ ಗೊತ್ತಿಲ್ಲ
ಗ್ರೇಟರ್ ಬೆಂಗಳೂರು ಪ್ರಾಧಿಕಾರವು (GBA) ಬಿ ಖಾತಾ ಆಸ್ತಿಯನ್ನ ಎ ಖಾತಾಗೆ ಪರಿವರ್ತಿಸಲು ಅವಕಾಶ ನೀಡಿದೆ. ನವೆಂಬರ್ 1ರಿಂದ ಫೆಬ್ರವರಿ ಮೊದಲ ವಾರದವರೆಗೆ, ಅಂದರೆ 100 ದಿನಗಳ ಅಭಿಯಾನ ಆರಂಭಿಸಿದೆ. ಹೀಗಂತ ಸ್ವತಃ ಬೆಂಗಳೂರು ಉಸ್ತುವಾರಿ ಸಚಿವ, ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಆದ್ರೆ, ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿಯೇ ಇಲ್ವಂತೆ. ಈ ಸಂಬಂಧ ವ್ಯಕ್ತಿಯೊಬ್ಬರು, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವಾರ್ಡ್ ಕಚೇರಿಗೆ ಭೇಟಿ ನೀಡಿದರೆ ಅಧಿಕಾರಿಗಳನ್ನು ವಿಚಾರಿಸಿದ್ದು, ಈ ವೇಳೆ ಏನೆಲ್ಲಾ ಅವರಿಗೆ ಅನುಭವಾಗಿದೆ ಎನ್ನುವ ಸಂಪೂರಣ ವಿವರವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ (Greater Bengaluru Authority) ಅಂತಾದ ಮೇಲೆ ಬೆಂಗಳೂರು ವ್ಯಾಪ್ತಿಯಲ್ಲಿ ಬಿ ಖಾತಾ (b khata) ಆಸ್ತಿಗಳು, ಅದರಲ್ಲೂ ನಿವೇಶನ ಹಾಗೂ ಕಟ್ಟಿರುವ ಮನೆಗಳನ್ನು ಎ ಖಾತಾಗೆ ಮಾಡಿಕೊಡುವುದಾಗಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಘೋಷಣೆ ಮಾಡಿದ್ದಾರೆ. ಅದಕ್ಕೆ ನವೆಂಬರ್ ಒಂದನೇ ತಾರೀಕಿನಿಂದ ಅರ್ಜಿ ಪ್ರಕ್ರಿಯೆ ಶುರು ಮಾಡುವುದಾಗಿಯೂ ಹಾಗೂ ನೂರು ದಿನಗಳ ಒಳಗಿನ ಗಡುವು ಸಹ ಹೇಳಿದ್ದರು. ಇವತ್ತಿಗೆ ಏನಾಗಿದೆ ಅಂದರೆ, ನವೆಂಬರ್ ಮೂರನೇ ತಾರೀಕಿನಂದು ಆಯಾ ವಾರ್ಡ್ ಗಳ ಪ್ರಾಧಿಕಾರ ಕಚೇರಿಗೆ ತೆರಳಿ ಈ ಬಗ್ಗೆ ವಿಚಾರಿಸಿದರೆ, ನಮಗೇನೂ ಮಾಹಿತಿ ಬಂದಿಲ್ಲ, ಅದೇನು ಮಾಡ್ತಾರೋ ಗೊತ್ತಿಲ್ಲ ಎಂಬ ಉತ್ತರ ಕೊಡುತ್ತಾರೆ. ಆನ್ ಲೈನ್ ಹಾಗೂ ಆಫ್ ಲೈನ್ ಎರಡೂ ರೀತಿಯಲ್ಲೂ ಅರ್ಜಿ ಸಲ್ಲಿಕೆಗೆ ಅವಕಾಶ ಇದೆ. ಆದರೆ ಇಂಥದ್ದೊಂದು ಮಹತ್ತರವಾದ ಯೋಜನೆ ಆರಂಭ ಆಗಿದೆ ಎಂಬ ಬಗ್ಗೆ ಕೂಡ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿಲ್ಲ. ಇನ್ನು ಈ ಬಗ್ಗೆ ಮಾಹಿತಿ ಬೇಕು ಅಂತಾದಲ್ಲಿ ಎಷ್ಟು ಮೊತ್ತ ಕಟ್ಟಬೇಕು, ಲೆಕ್ಕಾಚಾರ ಹೇಗೆ, ಪಾವತಿಗೆ ಕಾಲಾವಕಾಶ ಹೇಗೆ ಇತ್ಯಾದಿ ಬಗ್ಗೆಯಂತೂ ಏನೆಂದರೆ ಏನೂ ಸುದ್ದಿ- ಸುಳಿವು ಇಲ್ಲ.
ಕನ್ವರ್ಶನ್ ಶುಲ್ಕ, ಇವತ್ತಿಗೆ ನಿವೇಶನದ ಸರ್ಕಾರಿ ನೋಂದಣಿ ಮೌಲ್ಯ ಏನಿದೆ, ಅದರ ಶೇಕಡಾ ಐದರಷ್ಟು ಮೊತ್ತ ಹಾಗೂ ಜೊತೆಗೆ ಇತರ ಅನ್ವಯಿತ ಶುಲ್ಕ- ಹೀಗೆ ಮೂರು ಮೊತ್ತದ ಬಗ್ಗೆ ವೆಬ್ ಸೈಟ್- https://bbmp.karnataka.gov.in/BtoAKhata ಇದರಲ್ಲಿ ಮಾಹಿತಿ. ಆದರೆ ಲೆಕ್ಕಾಚಾರ ಹೇಗೆ ಎಂಬ ಬಗ್ಗೆ ಒಂದು ಉದಾಹರಣೆಯನ್ನು ನೀಡಿಬಿಟ್ಟಿದ್ದರೆ ಅನುಕೂಲ ಆಗುತ್ತಿತ್ತು. ಅದು ಕೂಡ ಎಲ್ಲೂ ಲಭ್ಯವಿಲ್ಲ. ಈಗಿನ ಸನ್ನಿವೇಶದಲ್ಲಿ ಈ ಬಗ್ಗೆ ಇರುವ ಪ್ರಶ್ನೆ ಏನೆಂದರೆ, ನಿಜವಾಗಿಯೂ ಬಿ ಖಾತಾ ಆಸ್ತಿಗಳನ್ನು ಎ ಖಾತಾ ಮಾಡಿಕೊಡುವ ಕುರಿತು ಸ್ಪಷ್ಟವಾದ ಚಿತ್ರಣವೊಂದು ಸರ್ಕಾರಕ್ಕೆ ಇದೆಯಾ ಅಥವಾ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಆದ ನಂತರ ಬಾಕಿ ಇರುವ ಚುನಾವಣೆಯನ್ನು ಗೆಲ್ಲುವುದಕ್ಕೆ ಹೀಗೊಂದು ಘೋಷಣೆ ಮಾಡಿಬಿಟ್ಟಿದ್ದಾರ?
ಇದನ್ನೂ ಓದಿ: ಇಂದಿನಿಂದ ಬಿ-ಖಾತಾದಿಂದ ಎ-ಖಾತಾ ಪರಿವರ್ತನೆಗೆ ಅವಕಾಶ: ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸೋದು ಹೇಗೆ? ಇಲ್ಲಿದೆ ಮಾಹಿತಿ
ಅರ್ಜಿ ಸಲ್ಲಿಕೆ ಹೇಗೆ ಮಾಡಬೇಕು, ಯಾವ ದಾಖಲೆಗಳನ್ನು ಸಲ್ಲಿಸಬೇಕು ಎಂಬುದಕ್ಕೆ ಟೆಂಪ್ಲೇಟ್ ಸಹಿತ ಈ ಖಾತಾ ಬದಲಾವಣೆಯ ಮಾಹಿತಿ ವೆಬ್ ಸೈಟ್ ನಲ್ಲಿ ಇದೆ. ಆದರೆ ಮೂರು ಶುಲ್ಕವನ್ನು ಪಾವತಿ ಮಾಡಬೇಕಲ್ಲ, ಅದಕ್ಕೆ ಎಲ್ಲೂ ಲೆಕ್ಕಾಚಾರ ಸಹಿತ ಮುಂದಿಟ್ಟಿಲ್ಲ. ಅದೇನು ಸಾಮಾಜಿಕ- ಆರ್ಥಿಕ- ಶೈಕ್ಷಣಿಕ ಸಮೀಕ್ಷೆಯಲ್ಲಿ ತೊಡಗಿಕೊಂಡಿದ್ದರು ಅಂತಲೋ ಹೇಗೋ ಜಿಬಿಎ ಅಧಿಕಾರಿಗಳು, ಸಿಬ್ಬಂದಿಗೂ ಈ ಬಗ್ಗೆ ಗೊತ್ತಿಲ್ಲ. ಹೀಗೆ ಅಂದುಕೊಂಡಲ್ಲಿ ಮಾಹಿತಿ ಕೇಳಿಕೊಂಡು ಹೋಗಿದ್ದವರಿಗೆ ಒಂಚೂರು ಸಮಾಧಾನ. ಅಥವಾ ಇನ್ನೂ ಇಡೀ ಪ್ರಕ್ರಿಯೆ ಬಗ್ಗೆಯೇ ಸರಿಯಾದ ರೂಪು- ರೇಷೆ ಇಲ್ಲ ಅಂತಾದಲ್ಲಿ ಮುಂದೆ ಹೇಗೆ ಎಂಬ ಪ್ರಶ್ನೆ ಎದುರಾಗುತ್ತದೆ.
ಸರ್ಕಾರಕ್ಕೆ ಇದರಲ್ಲಿ ಎಷ್ಟು ಆದಾಯ ಬರುತ್ತದೋ ಏನೋ ಗೊತ್ತಿಲ್ಲ. ಆದರೆ ಜನರಂತೂ ದೊಡ್ಡ ಮೊತ್ತದ ಹಣವನ್ನು ಕಟ್ಟಲೇ ಬೇಕು ಎಂಬುದು ಮೇಲುನೋಟಕ್ಕೇ ಗೊತ್ತಾಗುತ್ತದೆ. ಆದ್ದರಿಂದ ಒಂದು ಬ್ರೋಷರ್ ಅಥವಾ ಬುಕ್ ಲೆಟ್ ಬಿಡುಗಡೆ ಮಾಡಬೇಕಿತ್ತು ಅಲ್ಲವಾ? ಈಗಾಗಲೇ ತರಬೇತಿ ಅಂತ ಜಿಬಿಎ ಅಧಿಕಾರಿಗಳು, ಸಿಬ್ಬಂದಿಗೆ ಆಗಿ, ಸಾಮಾನ್ಯ ಮಾಹಿತಿಗಳಾದರೂ ತಿಳಿದಿರಬೇಕಿತ್ತು. ಬಹಳ ಪ್ರಶ್ನೆಗಳಿಗೆ ಒಂದೋ ಉತ್ತರವೇ ಇಲ್ಲ, ಇನ್ನು ಪದೇ ಪದೇ ಕಿವಿಗೆ ಬೀಳುವ “ಸ್ಟ್ಯಾಂಡರ್ಡ್ ಉತ್ತರ” ಗೊತ್ತಿಲ್ಲ, ಗೊತ್ತಿಲ್ಲ, ಗೊತ್ತಿಲ್ಲ.
-ಎಮ್. ಶ್ರೀನಿವಾಸ




