ಬಿಲ್ಡರ್ ಸಂತೋಷ್ ನಿವಾಸದಲ್ಲಿ ಐಟಿ ದಾಳಿ ಮುಕ್ತಾಯ, ನೋಟಿಸ್ ನೀಡಿ ದಾಖಲೆಗಳ ಸಮೇತ ತೆರಳಿದ ಅಧಿಕಾರಿಗಳು
ಪಂಚ ರಾಜ್ಯ ಚುನಾವಣೆ ದಿನಾಂಕ ಘೋಷಣೆ ಬೆನ್ನಲ್ಲೇ ಆಕ್ಟಿವ್ ಆಗಿರುವ ಐಟಿ ಅಧಿಕಾರಿಗಳು ಬೆಂಗಳೂರಿನಲ್ಲಿ ಭರ್ಜರಿ ಬೇಟೆಗಿಳಿದಿದ್ದಾರೆ. ಇತ್ತೀಚೆಗಷ್ಟೇ ಕಾಂಗ್ರೆಸ್ ಮಾಜಿ ಕಾರ್ಪೊರೇಟರ್ ಅವರಿಗೆ ಸೇರಿದ ಮನೆಗಳ ಮೇಲೆ ದಾಳಿ ನಡೆಸಿ 42 ಕೋಟಿ ಜಪ್ತಿ ಮಾಡಿದ್ದ ಅಧಿಕಾರಿಗಳು ನಿನ್ನೆ ತಡರಾತ್ರಿ ಬಿಲ್ಡರ್ ಸಂತೋಷ್ ಮನೆಗೆ ದಾಳಿ ನಡೆಸಿದ್ದರು. ಈ ದಾಳಿ ಇದೀಗ ಮುಕ್ತಾಯಗೊಂಡಿದೆ.
ಬೆಂಗಳೂರು, ಅ.15: ಬಿಲ್ಡರ್ ಸಂತೋಷ್ ಮನೆ ಮೇಲೆ ನಡೆದ ಐಟಿ ದಾಳಿ (IT Raid) ಮುಕ್ತಾಯಗೊಂಡಿದ್ದು, ಕೆಲವು ಮಹತ್ವದ ದಾಖಲೆಗಳೊಂದಿಗೆ ಅಧಿಕಾರಿಗಳು ತೆರಳಿದ್ದಾರೆ. ಈ ವೇಳೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಮೂಲಕ ಸೂಚನೆ ನೀಡಿದ್ದಾರೆ.
ನಿನ್ನೆ ಮುಂಜಾನೆ ಮನೆ ದಾಳಿ ನಡೆಸುವ ಮೂಲಕ ಬಿಲ್ಡರ್ ಸಂತೋಷ್ಗೆ ಐಟಿ ಅಧಿಕಾರಿಗಳು ಶಾಕ್ ನೀಡಿದ್ದರು. ದಾಳಿ ವೇಳೆ ಕೋಟ್ಯಂತ ರೂಪಾಯಿ ಪತ್ತೆಯಾಗಿದೆ ಎನ್ನಲಾಗುತ್ತಿದೆ. ಅಲ್ಲದೆ, ಶೋಧ ಕಾರ್ಯದ ವೇಳೆ ಹಲವು ದಾಖಲೆಗಳು ಪತ್ತೆಯಾಗಿದ್ದು, ಇವುಗಳ ಪರಿಶೀಲನೆ ನಡೆಸಲಾಗುತ್ತಿತ್ತು. ರಾತ್ರಿ ಇಡೀ ಸಂತೋಷ್ ಮನೆಯಲ್ಲೇ ಇದ್ದ ಅಧಿಕಾರಿಗಳು ಇಂದು ಮುಂಜಾನೆಯಿಂದ ಪರಿಶೀಲನೆ ಮುಂದುವರಿಸಿದ್ದರು. ಸದ್ಯ ಐಟಿ ಅಧಿಕಾರಿಗಳು ದಾಳಿ ಮುಕ್ತಾಯಗೊಳಿಸಿ 3 ಟ್ರಂಕ್, 3 ಬ್ಯಾಗ್, 1 ಸೂಟ್ಕೇಸ್ನಷ್ಟು ವಸ್ತು ವಶಕ್ಕೆ ಪಡೆದು ಸಂತೋಷ್ಗೆ ನೋಟಿಸ್ ನೀಡಿ 2 ಕಾರುಗಳಲ್ಲಿ ತೆರಳಿದ್ದಾರೆ.
ತಳುಕು ಹಾಕಿದ ಕಾಂಗ್ರೆಸ್ ಮುಖಂಡನ ಹೆಸರು
ಮನೆಯಲ್ಲಿ ಕೋಟ್ಯಂತರ ರೂಪಾಯಿ ಪತ್ತೆಯಾಗಿರುವ ಬಗ್ಗೆ ಸಂತೋಷ್ ಅವರನ್ನು ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಮಾಜಿ ಎಂಎಲ್ಸಿ, ಕಾಂಗ್ರೆಸ್ ಮುಖಂಡ ಬೆಮೆಲ್ ಕಾಂತರಾಜು ಹೆಸರು ಬಾಯಿಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ಅದರಂತೆ, ಮಾಜಿ ಎಂಎಲ್ಸಿ ಸಹೋದರರನ್ನು ಫ್ಲ್ಯಾಟ್ಗೆ ಕರೆಸಿಕೊಂಡು ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ: ಸತತ 42 ಗಂಟೆಗಳ ಬಳಿಕ ಗುತ್ತಿಗೆದಾರ ಅಂಬಿಕಾಪತಿ ನಿವಾಸದಲ್ಲಿ ಐಟಿ ದಾಳಿ ಅಂತ್ಯ: ವಿಚಾರಣೆಗೆ ಹಾಜರಾಗುವಂತೆ ನೋಟಿಸ್
ಈ ಬಗ್ಗೆ ನೆಲಮಂಗಲದಲ್ಲಿ ಬೆಮೆಲ್ ಕಾಂತರಾಜು ಅವರನ್ನು ಟಿವಿ9 ಪ್ರಶ್ನಿಸಿದಾಗ, ಕೇತಮಾರನಹಳ್ಳಿಯಲ್ಲಿ ಐಟಿ ದಾಳಿ ಬಗ್ಗೆ ನನಗೆ ಏನೂ ಮಾಹಿತಿ ಇಲ್ಲ. ಬಿಲ್ಡರ್ ಸಂತೋಷ್‌ರನ್ನು ನಾನು ನೋಡೇ ಇಲ್ಲ. ಆತನ ಮನೆಯಲ್ಲಿ ಪತ್ತೆಯಾದ ಹಣಕ್ಕೂ ನನಗೂ ಸಂಬಂಧವಿಲ್ಲ. ನನ್ನ ಹೆಸರು ಯಾಕೆ ತಳುಕು ಹಾಕುತ್ತಿದ್ದಾರೆ ಗೊತ್ತಿಲ್ಲ. ನಾನು ನೆಲಮಂಗಲದಲ್ಲಿ ಅರಮಾಗಿ ಓಡಾಟ ಮಾಡಿಕೊಂಡು ಇದ್ದೇನೆ. ದಯವಿಟ್ಟು ಮಾಧ್ಯಮದವರು ನನ್ನ ಹೆಸರು ಹಾಗೂ ಪೋಟೋ ಬಳಸದಂತೆ ಮನವಿ ಮಾಡಿದ್ದಾರೆ.
ಇತ್ತೀಚೆಗೆ ಕಾಂಗ್ರೆಸ್ ಮಾಜಿ ಕಾರ್ಪೊರೇಟರ್ ಅಶ್ವತ್ತಮ್ಮ ಪತಿ ಅಂಬಿಕಾಪತಿ ಮತ್ತು ಸಹೋದರ ಪ್ರದೀಪ್ಗೆ ಸೇರಿದ ಮನೆಗಳ ಮೇಲೆ ಐಟಿ ದಾಳಿ ನಡೆದಿತ್ತು. ಈ ವೇಳೆ ಫ್ಲ್ಯಾಟ್ನ ರೂಮ್ನಲ್ಲಿದ್ದ ಮಂಚದಡಿ 42 ಕೋಟಿ ರೂ. ಪತ್ತೆಯಾಗಿತ್ತು. ಈ ಹಣವನ್ನು ತೆಲಂಗಾಣ ಚುನಾವಣೆಗೆ ಸಾಗಿಸಲು ಇಟ್ಟಿರುವ ಆರೋಪ ಕೇಳಿಬಂದಿದೆ. ಇದೀಗ ಬಿಲ್ಡರ್ ಸಂತೋಷ್ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದಾಗ 40 ಕೋಟಿ ರೂ. ಪತ್ತೆಯಾಗಿದೆ ಎನ್ನಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ