ಸಾಮಾಜಿಕ ಜಾಲತಾಣಗಳ ಸುಳ್ಳು ಸುದ್ದಿಗಳನ್ನು ಮಾಧ್ಯಮಗಳೂ ನಂಬುವಂತಾಗಿದ್ದು ದುರದೃಷ್ಟಕರ

ಯಶವಂತಪುರದ ಪೀಪಲ್ಸ್ ಟ್ರೀ ಆಸ್ಪತ್ರೆಯಲ್ಲಿ ಯಾವುದೇ ಹಲ್ಲೆ, ಗಲಭೆ ನಡೆದಿಲ್ಲ ಎನ್ನುವುದನ್ನು ಹಿರಿಯ ಪೊಲೀಸ್ ಅಧಿಕಾರಿ ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಅವರು ಟ್ವೀಟ್ ಮಾಡಿರುವುದನ್ನು ಬೆಂಗಳೂರಿನ ಪೊಲೀಸ್ ಕಮೀಷನರ್ ಕಮಲ್ ಪಂತ್ ರೀಟ್ವೀಟ್ ಮಾಡಿ ಸ್ಪಷ್ಟಪಡಿಸಿದ್ದಾರೆ.

  • TV9 Web Team
  • Published On - 23:35 PM, 29 Apr 2021
ಸಾಮಾಜಿಕ ಜಾಲತಾಣಗಳ ಸುಳ್ಳು ಸುದ್ದಿಗಳನ್ನು ಮಾಧ್ಯಮಗಳೂ ನಂಬುವಂತಾಗಿದ್ದು ದುರದೃಷ್ಟಕರ
ದೆಹಲಿ ಆಸ್ಪತ್ರೆಯೊಂದರಲ್ಲಿ ದಾಂಧಲೆ

ಸಾಮಾಜಿಕ ಜಾಲತಾಣಗಳ ದುರುಪಯೋಗವಾಗುತ್ತಿರುವ ಬಗ್ಗೆ ಪದೇಪದೆ ವರದಿಯಾಗುತ್ತಿದೆ. ಮಾಡಲು ಕೆಲಸವಿಲ್ಲದ ಜನರು ಬೇಕಾಬಿಟ್ಟಿ ಸುಳ್ಳುಸುದ್ದಿಗಳನ್ನು ಹರಡಿ ಜನರಲ್ಲಿ ಆತಂಕ ಸೃಷ್ಟಸುವುದನ್ನು ಮುಂದುವರೆಸಿದ್ದಾರೆ. ಅದರಿಂದ ಆಗುವ ಅನಾಹುತಗಳ ಬಗ್ಗೆ ಅವರಿಗೆ ಅರಿವೇ ಇಲ್ಲ. ನಮ್ಮ ಬೆಂಗಳೂರಿನಲ್ಲಿ ನಡೆದಿರುವ ಇಂಥ ಒಂದು ಘಟನೆ ಬಗ್ಗೆ ಓದುಗರ ಗಮನಕ್ಕೆ ತರುವುದು ಅತ್ಯವಶ್ಯಕವಾಗಿದೆ. ಇಲ್ಲಿನ ಚಿತ್ರವನ್ನು ಒಮ್ಮೆ ಗಮನವಿಟ್ಟು ನೋಡಿ. ಆಸ್ಪತ್ರೆಯೊಂದರಲ್ಲಿ ಅದರ ಸಿಬ್ಬಂದಿ ಮೇಲೆ ಜನರು ಹಲ್ಲೆ ನಡೆಸುತ್ತಿರುವ ದೃಶ್ಯಗಳಿವು. ಇದು ಬೆಂಗಳೂರಿನ ಯಶವಂತಪುರದಲ್ಲಿರುವ ಪೀಪಲ್ಸ್ ಟ್ರೀ ಆಸ್ಪತ್ರೆಯಲ್ಲಿ ನಡೆದಿದ್ದು ಎಂದು ಹೇಳುವ ಸೋಶಿಯಲ್ ಮೀಡಿಯಾದ ಪರಾಕ್ರಮಿಗಳು ಈ ಚಿತ್ರ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿ ಅವುಗಳೊಂದಿಗೆ ಕೆಳಗಿನಂತೆ ಸಂದೇಶಗಳನ್ನೂ ಹರಿಬಿಡುತ್ತಿದ್ದಾರೆ.

ಆಸ್ಪತ್ರೆಗಳಿಗೆ ಮತ್ತು ಅವುಗಳಲ್ಲಿ ಕೆಲಸ ಮಾಡುತ್ತಿರುವ ವೈದ್ಯ ಮತ್ತು ಇತರ ಸಿಬ್ಬಂದಿಗೆ ತುರ್ತಾಗಿ ಪೊಲೀಸ್ ರಕ್ಷಣೆ ಬೇಕಾಗಿದೆ.

ಆಸ್ಪತ್ರೆಗಳಲ್ಲಿ ಬೆಡ್​ಗಳಿಗಾಗಿ ಹುಡುಕಾಡಿ ಬೇಸತ್ತು ಹತಾಷೆಯಿಂದ ರೋಸಿ ಹೋಗಿರುವ ಜನ ಹಲ್ಲೆ, ಲೂಟಿ ಮತ್ತು ಗಲಭೆ ಸೃಸ್ಟಿಸುವ ಕಾರ್ಯಕ್ಕಿಳಿಯುವ ಸಾಧ್ಯತೆಯಿದೆ. ಆಸ್ಪತ್ರೆಗಳು ಸಾಕಷ್ಟು ಸಿಬ್ಬಂದಿ ಕೊರತೆಯ ಮಧ್ಯೆ ಹೆಚ್ಚುವರಿ ಅವಧಿವರೆಗೆ ಕೆಲಸ ಮಾಡಿದರೂ ಹಲ್ಲೆಗೊಳಗಾಗುವ ಭೀತಿಯಿದೆ.

ಇಂಥ ಭಯಾನಕ ಸ್ಥಿತಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಹೆದರಿಕೆಯಿಂದ ಆತ್ಮಸ್ಥೈರ್ಯ ಕಳೆದುಕೊಂಡರೆ ಇಡೀ ವ್ಯವಸ್ಥೆಯೇ ಕುಸಿದು ಬೀಳುತ್ತದೆ, ಎಂಬ ಸಂದೇಶಗಳನ್ನು ಅವರು ಹರಿಬಿಡುತ್ತಿದ್ದಾರೆ.

ಇಂಥ ಸಂದೇಶ ಮತ್ತು ವಿಡಿಯೋಗಳ ಬಗ್ಗೆ ಜನರು ಆತಂಕ ಪಡಬೇಕಾದ ಅವಶ್ಯಕತೆಯಿಲ್ಲ. ಯಾಕೆಂದರೆ ಅಸಲಿಗೆ ಇದು ಯಶವಂತಪುರದ ಪೀಪಲ್ಸ್ ಟ್ರೀ ಆಸ್ಪತ್ರೆಯಲ್ಲಿ ನಡೆದ ಘಟನೆಯೇ ಅಲ್ಲ. ದೆಹಲಿಯ ಸರಿತಾ ವಿಹಾರ್​ನಲ್ಲಿರುವ ಅಪೊಲ್ಲೊ ಆಸ್ಪತ್ರೆಯಲ್ಲಿ ನಡೆದಿರುವ ಘಟನೆ ಇದಾಗಿದೆ. ಸೋಂಕಿತನ್ನೊಬ್ಬನಿಗೆ ಐಸಿಯುನಲ್ಲಿ ಬೆಡ್ ಸಿಗದ ಕಾರಣ ಅವನ ಸಂಬಂಧಿಕರು ಆಸ್ಪತ್ರೆಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ದೃಶ್ಯಗಳಿವು. ಆ ಸೋಂಕಿತ ನಂತರ ಅಸುನೀಗಿದ ಎನ್ನುವುದು ಬೇರೆ ಮಾತು.

ಯಶವಂತಪುರದ ಪೀಪಲ್ಸ್ ಟ್ರೀ ಆಸ್ಪತ್ರೆಯಲ್ಲಿ ಯಾವುದೇ ಹಲ್ಲೆ, ಗಲಭೆ ನಡೆದಿಲ್ಲ ಎನ್ನುವುದನ್ನು ಹಿರಿಯ ಪೊಲೀಸ್ ಅಧಿಕಾರಿ ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಧರ್ಮೇಂದ್ರ ಕುಮಾರ್ ಅವರು ಟ್ವೀಟ್ ಮಾಡಿರುವುದನ್ನು ಬೆಂಗಳೂರಿನ ಪೊಲೀಸ್ ಕಮೀಷನರ್ ಕಮಲ್ ಪಂತ್ ರೀಟ್ವೀಟ್ ಮಾಡಿ ಸ್ಪಷ್ಟಪಡಿಸಿದ್ದಾರೆ.

ಪೊಲೀಸರು ಸದರಿ ಘಟನೆಗೆ ಸಂಬಂಧಿಸಿದಂತೆ ತನಿಖೆ ಆರಂಭಿಸಿದ್ದಾರೆ. ತಪ್ಪಿತಸ್ಥರನ್ನು ಪತ್ತೆಮಾಡಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವ ಅವಶ್ಯಕತೆಯಿದೆ. ಹಾಗೆಯೇ ಸಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಜನ ಇಂಥ ಸುದ್ದಿಗಳನ್ನು ಬೇರೆಯವರಿಗೆ ಫಾರ್ವರ್ಡ್​ ಮಾಡುವಾಗ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತಾಡಿ ಅದರ ಸತ್ಯಾಸತ್ಯತೆ ತಿಳಿದುಕೊಳ್ಳಬೇಕು.

ಆದರೆ ನಾವಿಲ್ಲಿ ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಿದೆ. ಯಾಕೆಂದರೆ ಇದನ್ನು ಕೆಲ ಮಾಧ್ಯಮಗಳು ಸುದ್ದಿಯಾಗಿ ಬಿತ್ತರಿಸಿವೆ ಮತ್ತು ಪ್ರಕಟಿಸಿವೆ. ಇಂಥ ಸೂಕ್ಷ್ಮ ಸಂಗತಿಗಳನ್ನು ವರದಿ ಮಾಡುವಾಗ ವಿವೇಚನೆಯ ಅವಶ್ಯಕತೆಯಿರುತ್ತದೆ. ಸುದ್ದಿ ಅಂದಾಕ್ಷಣ ಅದರ ಸತ್ಯಾಸತ್ಯತೆ, ಸುದ್ದಿಮೂಲ ಮುಂತಾದವುಗಳ ಬಗ್ಗೆ ಯೋಚಿಸದೆ, ಇದನ್ನು ನಾನೇ ಮೊದಲು ಬಿತ್ತರಿಸಿದ್ದು ಎನ್ನುವ ಒಣಹಮ್ಮಿಗೆ ಬಿದ್ದು ಮುಂದುವರಿದರೆ ಕೇವಲ ಅನಾಹುತಗಳು ಮಾತ್ರ ಸಾಧ್ಯ.

ವಾಸ್ತವ ಸಂಗತಿ ಅರಿಯದೆ, ಸುದ್ದಿಯ ನೈಜ್ಯತೆಯನ್ನು ತಿಳಿಯದೆ ಅದನ್ನು ಬಿತ್ತರಿಸುವುದು ಸರಿಯೇ ಎನ್ನುವುದನ್ನು ಎಲ್ಲ ಮಾಧ್ಯಮಗಳು ಯೋಚಿಸಬೇಕಿದೆ. ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಮ್​ಗಳ ಒಕ್ಕೂಟವು ಯಾವುದಾದರೂ ಖಾಸಗಿ ಅಸ್ಪತ್ರೆ ಮೇಲೆ ಹಲ್ಲೆ ನಡೆದರೆ ತಾನೇ ಎಲ್ಲರಿಗಿಂತ ಮೊದಲು ಅದನ್ನು ಇತರರಿಗೆ ಗೊತ್ತುಮಾಡಬೇಕು.

ಜನರು ಕೊವಿಡ್ ಹಾವಳಿಯಿಂದ ತತ್ತರಿಸಿರಉವ ಪರಿಸ್ಥಿತಿಯಲ್ಲಿ ಇಂಥ ಸುದ್ದಿಗಳು ನಮಗೆ ಬೇಕೆ? ಜನರೇ ನಿರ್ಧರಿಸಲಿ

ಇದನ್ನೂ ಓದಿ: Covid 19 Treatment in Bengaluru: ಬೆಂಗಳೂರಿನಲ್ಲಿ ತುರ್ತು ಕೊರೊನಾ ಆರೋಗ್ಯ ಸೇವೆಗಳಿಗಾಗಿ ಈ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಿ