ಕಮಲ್ ಪಂತ್ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದ ವಕೀಲ ಜಗದೀಶ್ ಅರೆಸ್ಟ್! 14 ದಿನಗಳ ಕಾಲ ನ್ಯಾಯಾಂಗ ಬಂಧನ
ಈ ಬಗ್ಗೆ ವಕೀಲ ಜಗದೀಶ್ ಸಾಮಾಜಿಕ ಜಾಲತಾಣದಲ್ಲಿ ಲೈವ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಕಮಲ್ ಪಂಥ್ ಮತ್ತು ಪ್ರವೀಣ್ ಸೂದ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ನನ್ನ ಮಗನ ಮೇಲೆ ಹಲ್ಲೆಯಾಗಿದೆ.
ಬೆಂಗಳೂರು: ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ (Kamal Pant) ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದ ವಕೀಲ ಜಗದೀಶ್ ಬಂಧನಕ್ಕೊಳಗಾಗಿದ್ದಾರೆ. ಹಲಸೂರು ಗೇಟ್ ಪೊಲೀಸರು ಜಗದೀಶ್ ಅವರನ್ನು ಅರೆಸ್ಟ್ ಮಾಡಿದ್ದಾರೆ. ಫೆಬ್ರವರಿ 11ಕ್ಕೆ ಸಿಟಿ ಸಿವಿಲ್ ಕೋರ್ಟ್ (Civil Court) ಆವರಣದಲ್ಲಿ ವಕೀಲ ಜಗದೀಶ್ ಮಗ ಮತ್ತು ಆಪ್ತರ ಮೇಲೆ ವಕೀಲರ ಗುಂಪೊಂದು ಹಲ್ಲೆ ಮಾಡಿದ್ದಾರೆ ಎಂದು ವಕೀಲ ಜಗದೀಶ್ ಆರೋಪಿಸಿದ್ದರು. ಇಷ್ಟಾದರೂ ಅಲ್ಲಿದ್ದ ಪೊಲೀಸರು ರಕ್ಷಣೆ ಮಾಡಿಲ್ಲ. ಎಲ್ಲರೂ ಗೂಂಡಾಗಳ ರೀತಿ ವರ್ತನೆ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದರು.
ಈ ಬಗ್ಗೆ ವಕೀಲ ಜಗದೀಶ್ ಸಾಮಾಜಿಕ ಜಾಲತಾಣದಲ್ಲಿ ಲೈವ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಕಮಲ್ ಪಂಥ್ ಮತ್ತು ಪ್ರವೀಣ್ ಸೂದ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ನನ್ನ ಮಗನ ಮೇಲೆ ಹಲ್ಲೆಯಾಗಿದೆ. ಮಗ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದಾನೆ. ಕಮಲ್ ಪಂಥ್, ಪ್ರವೀಣ್ ಸೂದ್ ರಾಜೀನಾಮೆ ತೆಗೆದುಕೊಂಡು ಮನೆಗೆ ಹೋಗ್ರಯ್ಯಾ. ಕಮಲ್ ಪಂಥ್, ಪ್ರವೀಣ್ ಸೂದ್ ಜೈಲಲ್ಲಿ ಇರ್ತಿಯಾ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು.
ನೀವೆಲ್ಲಾ ಯೂನಿಫಾರಂ ಹಾಕೊಂಡಿರುವ ಗೂಂಡಾಗಳು. ಮಗನಿಗೆ ಏನಾದರೂ ಆದರೆ ನಿಮಗೆ ನೇಣು ಹಾಕಿಸಿಲ್ಲ ಅಂದರೆ ನಾನು ಜಗದೀಶ್ ಅಲ್ಲ ಎಂದು ಹೇಳಿದ್ದರು. 40 ಜನಗಳ ಮೇಲೆ ಅಟ್ಯಾಕ್ ಆಗಿದೆ. ರೌಡಿ ಥರ ವರ್ತಿಸಿದ್ದಾರೆ. ವಕೀಲರನ್ನು ಹೇಗೆ ನೋಡ್ತಿದ್ದೀರಾ? ಎಲ್ಲಾ ಫೂಟೇಜ್ ಇದೆ. ಕರ್ನಾಟಕದಲ್ಲಿ ಪೊಲೀಸ್, ಕಾನೂನು ಇಲ್ಲ. ಎಲ್ಲಾ ಗೂಂಡಾಗಳೇ ಇರೋದು. ಮೊದಲು ತಂದೆ ನಾನು. ಆಮೇಲೆ ಅಡ್ವೊಕೇಟ್ ಎಂದು ಲೈವ್ನಲ್ಲಿ ಹೇಳಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಜಗದೀಶ್ ಅವರನ್ನು ಬಂಧಿಸಲಾಗಿದೆ.
ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ ಹಾಗೂ ಪದಾಧಿಕಾರಿಗಳಿಂದ ನಿನ್ನೆ ಜಗದೀಶ್ ವಿರುದ್ಧ ದೂರು ದಾಖಲಾಗಿತ್ತು. ನ್ಯಾಯಾಲಯ ಆವರಣದಲ್ಲಿ ವಕೀಲರಲ್ಲದವರನ್ನು ಸೇರಿಸಿ ಗಲಾಟೆ ಮಾಡಲು ಪ್ರಚೋದನೆ ನೀಡಿದ್ದಾರೆ ಎಂದು ದೂರು ನೀಡಿದ್ದರು. ನ್ಯಾಯಾಲಯ ರಿಜಿಸ್ಟ್ರಾರ್ಗೆ ಗೌರವ ನೀಡದೆ ದುರ್ವರ್ತನೆ ತೋರಿದ ಆರೋಪವೂ ಮಾಡಲಾಗಿತ್ತು. ದೂರಿನ ಆಧಾರದ ಮೇಲೆ ವಕೀಲ ಜಗದೀಶ್ ಕರೆತಂದು ವಿಚಾರಣೆ ನಡೆಸಲಾಗುತ್ತಿದೆ.
ಜಗದೀಶ್ ಪುತ್ರನ ಮೇಲೆ ಎಫ್ಐಆರ್ ದಾಖಲು: ವಕೀಲ ಜಗದೀಶ್ ಪುತ್ರ ಆರ್ಯಗೌಡ ಮೇಲೆ ಎಫ್ಐಆರ್ ದಾಖಲಾಗಿದೆ. ಪುನೀತ್ ಕೆರೆಹಳ್ಳಿ ಎಂಬುವರು ನೀಡಿದ ದೂರಿನ ಮೇರೆಗೆ ಕೊಡಿಗೇಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಪುನೀತ್ ಕೆರೆಹಳ್ಳಿ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಕಾಲೇಜೊಂದರ ಬಳಿ ಹೋದಾಗ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಹೇಳಿದ್ದಾರೆ. ಐಪಿಸಿ ಸೆಕ್ಷನ್ 323, 504 ಹಾಗೂ 506 ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.
14 ದಿನಗಳ ಕಾಲ ನ್ಯಾಯಾಂಗ ಬಂಧನ: ವಕೀಲ ಜಗದೀಶ್ ವೈದ್ಯಕೀಯ ಪರೀಕ್ಷೆ ಮುಕ್ತಾಯವಾಗಿದೆ. ಕೊವಿಡ್ ಟೆಸ್ಟ್ ನೆಗೆಟಿವ್ ಬಂದಿದೆ. ವೈದ್ಯಕೀಯ ಪರೀಕ್ಷೆ ಬಳಿಕ ಎಸ್ಆರ್ ನಗರ ಠಾಣೆಯಲ್ಲಿ ಇರಿಸಲಾಗಿತ್ತು. ಇಲ್ಲಿಂದ ನೇರವಾಗಿ ಜಡ್ಜ್ ನಿವಾಸಕ್ಕೆ ಕರೆದುಕೊಂಡು ಹೋಗಿದ್ದರು. ಒಂದನೇ ಎಸಿಎಂಎಂ ನ್ಯಾಯಾಧೀಶರು ವಕೀಲ ಜಗದೀಶ್ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ಮಾಡಿ ಆದೇಶ ನೀಡಿದ್ದಾರೆ.
ಇದನ್ನೂ ಓದಿ
ಮೈಸೂರಿನಲ್ಲಿ ಮಾರ್ಚ್ 11ರಿಂದ 10 ದಿನಗಳ ಕಾಲ ಬಹುರೂಪಿ ರಾಷ್ಟ್ರೀಯ ರಂಗೋತ್ಸವ
ಕರ್ನಾಟಕ ಜನತೆಗೆ ಶಾಕ್! ಏಪ್ರಿಲ್ನಲ್ಲಿ ವಿದ್ಯುತ್ ದರ ಏರಿಕೆ ಸಾಧ್ಯತೆ
Published On - 11:28 am, Sun, 13 February 22