ಬೆಂಗಳೂರು: ನಗರದಲ್ಲಿ ಹಲವೆಡೆ ಬುಧವಾರ ರಾತ್ರಿಯಿಡೀ ಧಾರಾಕಾರ ಮಳೆಯಾಗಿದೆ. ಹಲವು ದಿನಗಳಿಂದ ರಣ ಬಿಸಿಲು ಕಂಡಿದ್ದ ಜನರಿಗೆ ವರುಣನ ಆಗಮನ ಖುಷಿ ನೀಡಿದೆ. ಬೆಂಗಳೂರು ದಕ್ಷಿಣ ಭಾಗದಲ್ಲಿ ಹೆಚ್ಚು ಮಳೆ ದಾಖಲಾಗಿದ್ದು, ಇಂದು (ಏಪ್ರಿಲ್ 15) ಗುರುವಾರ ಬೆಳಿಗ್ಗೆಯಿಂದ ನಗರದಲ್ಲಿ ತಂಪಾದ ವಾತಾವರಣವಿದೆ. ನಗರದ ಸುದ್ದುಗುಂಟೆ ಪಾಳ್ಯ, ಸಿದ್ದಾಪುರ, ಜಯನಗರದಲ್ಲಿ 45 ಮಿಲಿಮೀಟರ್ ಮಳೆಯಾಗಿದೆ.
ಕೋರಮಂಗಲದಲ್ಲಿ 24 ಮಿಲಿಮೀಟರ್ ಮಳೆಯಾಗಿದೆ. ಹೊಯ್ಸಳ ನಗರ 18 ಮಿ.ಮಿ, ಗುಟ್ಟಹಳ್ಳಿ 15 ಮಿ.ಮೀ, ಮನೋರಾಯನ ಪಾಳ್ಯದಲ್ಲಿ 15 ಮಿಲಿಮೀಟರ್ ಮಳೆಯಾಗಿದೆ. ಹೆಚ್ಆರ್ಎಸ್ ಲೇಔಟ್ನಲ್ಲಿ 13 ಮಿ.ಮೀ, ಶಾಂತಲನಗರ 10 ಮಿ.ಮೀ, ಈಜೀಪುರ 10 ಮಿ.ಮೀ ಮಳೆ ದಾಖಲಾಗಿದೆ. ವರ್ತೂರಿನಲ್ಲಿ 22 ಮಿ.ಮೀ ಮಳೆಯಾಗಿದ್ದು, ಬೆಳ್ಳಂದೂರಿನಲ್ಲಿ 21 ಮಿಲಿಮೀಟರ್ ಮಳೆ ದಾಖಲಾಗಿದೆ.
ನಗರದ ಹಲವೆಡೆ ರಾತ್ರಿ ಪೂರ್ತಿ ಮಳೆಯಾಗಿದ್ದು, ಬೆಳಿಗ್ಗೆ ರಸ್ತೆಯ ಅಕ್ಕ-ಪಕ್ಕದ ಮರಗಳೆಲ್ಲಾ ಹಚ್ಚಹಸಿರಿನಂದ ಕಂಗೊಳಿಸುತ್ತಿದೆ. ತಂಪಾದ ವಾತಾವರಣ ಇದ್ದು, ಬೆಳಿಗ್ಗೆ ಜಾಗಿಂಗ್ ಹೊರಟಿರುವವರ ಮನಸ್ಸಿಗೆ ಖುಷಿ ತಂದಿದೆ. ಜಯನಗರ, ಬಿಟಿಎಂ ಲೇಔಟ್, ಹೊಯ್ಸಳ ನಗರದಲ್ಲಿ ಅಧಿಕ ಮಳೆಯಾಗಿದ್ದು, ಬೆಳಗಿನ ಜಾವ ಹಲವೆಡೆ ಭಾರೀ ಮಳೆಯಾಗಿದೆ. ಬೆಂಗಳೂರಲ್ಲಿ ಇನ್ನೂ ಮೂರು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಳೆಯ ಜೊತೆಗೆ ಗಾಳಿಯ ಆರ್ಭಟವೂ ಜೋರಾಗಿದ್ದು, ರಸ್ತೆಯಲ್ಲಿ ಸಾಗುತ್ತಿದ್ದ ದ್ವಿಚಕ್ರ ವಾಹನ ಸವಾರರು ಜಾರಿ ಬಿದ್ದಿರುವ ಘಟನೆ ಕೆಲವೆಡೆ ನಡೆದಿದೆ. ಅವರಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳೂ ಆಗಿವೆ. ಕೆ.ಜಿ ರಸ್ತೆಯ ಕಂದಾಯ ಭವನದ ಬಳಿ ದ್ವಿಚಕ್ರ ವಾಹನ ಸವಾರರು ಜಾರಿಬಿದ್ದಿದ್ದು, ಕೆಲಕಾಲ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಗಿದೆ. ಪೊಲೀಸರು ತಕ್ಷಣವೇ ಸ್ಥಳಕ್ಕೆ ಆಗಮಿಸಿದ್ದು, ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಗಾಳಿ ಜೊತೆಗೆ ಮಳೆಯಾಗುತ್ತಿರುವುದರಿಂದ ವಾಹನ ಸವಾರರು ಅಥವಾ ರಸ್ತೆಯಲ್ಲಿ ನಡೆದು ಸಾಗುವವರು ಹೆಚ್ಚು ಎಚ್ಚರದಿಂದ ಸಾಗಬೇಕು. ಹಲವು ಜಿಲ್ಲೆಗಳಲ್ಲಿ ಗುಡು ಸಹಿತ ಮಳೆ ಕಾಣಿಸಿಕೊಂಡಿದೆ. ಗುರುವಾರವೂ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇದನ್ನೂ ಓದಿ: Bengaluru Rain: ಬಿಸಿಲಿನಿಂದ ಬೆಂದಿದ್ದ ಸಿಲಿಕಾನ್ ಸಿಟಿಗೆ ತಂಪೆರೆದ ವರುಣ; ರಾಜಧಾನಿಯ ಹಲವೆಡೆ ಜಿಟಿಜಿಟಿ ಮಳೆ