
ಬೆಂಗಳೂರು, ಆಗಸ್ಟ್ 22: ರಾಜ್ಯದ ಸರ್ಕಾರಿ ಉದ್ಯಾನಗಳ ಜಾಗವನ್ನು ವಿವಿಧ ಸಾರ್ವಜನಿಕ ಉದ್ದೇಶಗಳಿಗೆ ಬಳಸಿಕೊಳ್ಳಲು ಅವಕಾಶ ಕಲ್ಪಿಸುವ ಮಹತ್ವದ ತಿದ್ದುಪಡಿ ಮಸೂದೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ತೋಟಗಾರಿಕೆ ಇಲಾಖೆ ರೂಪಿಸಿರುವ ‘ಕರ್ನಾಟಕ ಸರ್ಕಾರಿ ಉದ್ಯಾನಗಳ (ಸಂರಕ್ಷಣೆ) ಕಾಯ್ದೆ-1975’ಕ್ಕೆ ತಿದ್ದುಪಡಿ ತರಲು ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದ್ದು, ಇದೇ ವಿಧಾನಸಭೆ ಅಧಿವೇಶನದಲ್ಲಿ ಮಸೂದೆ ಮಂಡನೆಯಾಗುವ ಸಾಧ್ಯತೆಯಿದೆ.
ತಿದ್ದುಪಡಿಯ ಪ್ರಕಾರ, ರಾಜ್ಯದಲ್ಲಿರುವ ಸರ್ಕಾರಿ ಉದ್ಯಾನಗಳ ಒಟ್ಟು ವಿಸ್ತೀರ್ಣದ ಗರಿಷ್ಠ ಶೇ 5ರಷ್ಟು ಜಾಗವನ್ನು ಸಾರ್ವಜನಿಕ ಉಪಯೋಗಕ್ಕಾಗಿ ಬಳಸಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ. ಈ ಜಾಗವನ್ನು ಮಾರಾಟ, ಗುತ್ತಿಗೆ, ಉಡುಗೊರೆ, ವಿನಿಮಯ, ಅಡಮಾನ ಅಥವಾ ಇತರ ಕಾನೂನುಬದ್ಧ ವಿಧಾನಗಳ ಮೂಲಕ ಹಸ್ತಾಂತರಿಸುವ ಸಾಧ್ಯತೆ ಇದೆ.
ಸರ್ಕಾರಿ ಇಲಾಖೆಗಳು, ಶಾಸನಬದ್ಧ ಪ್ರಾಧಿಕಾರಗಳು, ಸರ್ಕಾರಿ ಕಂಪನಿಗಳು ಹಾಗೂ ಸ್ಥಳೀಯ ಪ್ರಾಧಿಕಾರಗಳು ತಮ್ಮ ಅಗತ್ಯಗಳಿಗೆ ಉದ್ಯಾನಗಳ ವ್ಯಾಪ್ತಿಯಲ್ಲಿನ ಈ ಜಾಗವನ್ನು ಬಳಸಿಕೊಳ್ಳಲು ಅವಕಾಶ ಸಿಗಲಿದೆ. ಆದರೆ, ಯಾವುದೇ ಪ್ರಸ್ತಾವನೆಗೆ ಸರ್ಕಾರದ ಅನುಮೋದನೆ ನೀಡುವ ಮುನ್ನ ಭೂ ಬಳಕೆಯ ಅಗತ್ಯ ಮತ್ತು ಪರಿಣಾಮವನ್ನು ಸಮಗ್ರವಾಗಿ ಮೌಲ್ಯಮಾಪನ ಮಾಡಬೇಕೆಂದು ತಿದ್ದುಪಡಿ ಮಸೂದೆ ಪ್ರಸ್ತಾಪಿಸುತ್ತದೆ.
ಭೂಮಿಯನ್ನು ಹಸ್ತಾಂತರಿಸುವ ಕುರಿತು ಸರ್ಕಾರಕ್ಕೆ ಶಿಫಾರಸು ಮಾಡುವ ಮೊದಲು ನಿರ್ದಿಷ್ಟ ಮೌಲ್ಯಮಾಪನ ಪ್ರಕ್ರಿಯೆ ಅನುಸರಿಸುವ ಪ್ರಸ್ತಾವನೆ ಇದೆ. ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಆಯಾ ಕ್ಷೇತ್ರದ ಪರಿಣತರನ್ನು ಒಳಗೊಂಡ ಅಧಿಕೃತ ಮೌಲ್ಯಮಾಪನ ವ್ಯವಸ್ಥೆ ರೂಪಿಸುವ ಅಂಶವೂ ಮಸೂದೆಯಲ್ಲಿದೆ.
ಮುಖ್ಯವಾಗಿ, ಶೇ 5ರ ಮಿತಿ ಇನ್ನು ಮುಂದೆ ಹಸ್ತಾಂತರಿಸುವ ಜಾಗಕ್ಕೆ ಮಾತ್ರವಲ್ಲದೆ ಈ ಹಿಂದೆ ಹಸ್ತಾಂತರಿಸಿರುವ ಭೂಮಿಯನ್ನೂ ಒಳಗೊಂಡಿರಲಿದೆ. ಇದರ ಮೂಲಕ ಉದ್ಯಾನಗಳ ಉಳಿದ ಭಾಗದಲ್ಲಿರುವ ನೈಸರ್ಗಿಕ ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸುವ ಉದ್ದೇಶವನ್ನು ಮಸೂದೆ ಹೊಂದಿದೆ.
ತೋಟಗಾರಿಕೆ ಇಲಾಖೆಯು ತನ್ನ ಆಡಳಿತಾತ್ಮಕ ಹಾಗೂ ಸಂಬಂಧಿತ ಸಾಮಾನ್ಯ ಅಭಿವೃದ್ಧಿ ಚಟುವಟಿಕೆಗಳಿಗಾಗಿ ಬಳಸುವ ಜಾಗ ಈ ಶೇ 5ರ ನಿರ್ಬಂಧಕ್ಕೆ ಒಳಪಡುವುದಿಲ್ಲ ಎಂದು ಪ್ರಸ್ತಾವಿತ ತಿದ್ದುಪಡಿಯಲ್ಲಿ ಸ್ಪಷ್ಟಪಡಿಸಲಾಗಿದೆ.
ಪ್ರಮುಖ ತೋಟಗಾರಿಕಾ ಯೋಜನೆಗಳನ್ನು ಜಾರಿಗೊಳಿಸಲು ತೋಟಗಾರಿಕಾ ಪ್ರದೇಶದೊಳಗಿನ ಅಲ್ಪ ಪ್ರಮಾಣದ ಜಾಗವನ್ನು ಬಳಸಿಕೊಳ್ಳಲು ವಿಶೇಷ ಕಾನೂನು ಅವಕಾಶ ಕಲ್ಪಿಸುವ ಪ್ರಸ್ತಾವನೆಯೂ ಇದೆ. ಕೊಯ್ಲಿನ ನಂತರದ ಸಂಸ್ಕರಣಾ ಸೌಲಭ್ಯಗಳು, ಶೀತಲ ಸಂಗ್ರಹಣಾ ಘಟಕಗಳು, ಸುಧಾರಿತ ತಳಿಗಳ ಉತ್ಪಾದನಾ ಕೇಂದ್ರಗಳು ಹಾಗೂ ಸ್ಥಳೀಯ ಕೃಷಿ ಸಮುದಾಯಕ್ಕೆ ನೇರ ಪ್ರಯೋಜನ ನೀಡುವ ಕೃಷಿ ಆಧಾರಿತ ಕೈಗಾರಿಕೆಗಳಿಗೆ ಇಂತಹ ಜಾಗ ಬಳಕೆಯಾಗಬಹುದು.
ಆದರೆ, ಇಂತಹ ಬಳಕೆಗೆ ಸಾರ್ವಜನಿಕ ಹಿತಾಸಕ್ತಿ ಮತ್ತು ತುರ್ತು ಅಗತ್ಯವಿರುವುದನ್ನು ಸಮರ್ಥಿಸುವ ದಾಖಲೆಗಳನ್ನು ಒದಗಿಸಬೇಕಾಗುತ್ತದೆ.
ಸರ್ಕಾರದ ಈ ನಿರ್ಧಾರಕ್ಕೆ ಬೆಂಗಳೂರಿನ ನಾಗರಿಕರಿಂದ ವಿರೋಧ ವ್ಯಕ್ತವಾಗಿದೆ. ಉದ್ಯಾನಗಳ ಜಾಗವನ್ನು ಗುತ್ತಿಗೆ ಅಥವಾ ಇತರ ಉದ್ದೇಶಗಳಿಗೆ ನೀಡುವುದರಿಂದ ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಲಭ್ಯವಿರುವ ಹಸಿರು ಪ್ರದೇಶ ಕಡಿಮೆಯಾಗಬಹುದು ಎಂಬ ಆತಂಕವನ್ನು ನಾಗರಿಕರು ವ್ಯಕ್ತಪಡಿಸಿದ್ದಾರೆ.
ಮಕ್ಕಳ ಆಟ, ವಾಯುವಿಹಾರ, ವ್ಯಾಯಾಮ ಹಾಗೂ ಹಿರಿಯರ ಆರೋಗ್ಯ ಚಟುವಟಿಕೆಗಳಿಗೆ ಉದ್ಯಾನಗಳು ಪ್ರಮುಖವಾಗಿವೆ. ಇಂತಹ ಸಾರ್ವಜನಿಕ ಬಳಕೆಯ ಜಾಗವನ್ನು ಅಭಿವೃದ್ಧಿಯ ಹೆಸರಿನಲ್ಲಿ ವಾಣಿಜ್ಯ ಉದ್ದೇಶಗಳಿಗೆ ಬಳಸುವುದು ಸರಿಯಲ್ಲ ಎಂಬ ಆಕ್ಷೇಪ ಕೇಳಿಬಂದಿದೆ.
ಈಗ ಶೇ 5ರಷ್ಟು ಜಾಗಕ್ಕೆ ಅವಕಾಶ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಈ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಆತಂಕವೂ ನಾಗರಿಕರಲ್ಲಿದೆ. ಬೆಂಗಳೂರಿನಲ್ಲಿ ಈಗಾಗಲೇ ಸಾರ್ವಜನಿಕರಿಗೆ ಲಭ್ಯವಿರುವ ಹಸಿರು ಪ್ರದೇಶದ ಪ್ರಮಾಣದ ಬಗ್ಗೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ಉದ್ಯಾನಗಳ ಜಾಗದ ಬಳಕೆಗೆ ಹೊಸ ಅವಕಾಶ ಕಲ್ಪಿಸುವ ಸರ್ಕಾರದ ನಿರ್ಧಾರವನ್ನು ಜನರು ಪ್ರಶ್ನಿಸುತ್ತಿದ್ದಾರೆ.
ಉದ್ಯಾನಗಳನ್ನು ಉಳಿಸುವುದರ ಜೊತೆಗೆ ಅವುಗಳ ವಾಣಿಜ್ಯೀಕರಣಕ್ಕೆ ಅವಕಾಶ ನೀಡಬಾರದು. ಸಾರ್ವಜನಿಕರ ಬಳಕೆಗೆ ಮೀಸಲಾದ ಹಸಿರು ಪ್ರದೇಶಗಳನ್ನು ಯಾವುದೇ ಕಾರಣಕ್ಕೂ ಕಡಿಮೆ ಮಾಡಬಾರದು ಎಂದು ಬೆಂಗಳೂರಿನ ನಾಗರಿಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ