ಯಡಿಯೂರಪ್ಪ ಆಪ್ತನ ಮೇಲೆ ಐಟಿ ದಾಳಿ ಬೆನ್ನಲ್ಲೇ ಮುಖ್ಯಮಂತ್ರಿ ಬೊಮ್ಮಾಯಿ ಇಂದು ದೆಹಲಿ ಪ್ರಯಾಣ
ಬಸವರಾಜ ಬೊಮ್ಮಾಯಿ ಸಿಎಂ ಪಟ್ಟಕ್ಕೇರಿದ ಬಳಿಕ ನಾಲ್ಕನೇ ಬಾರಿ ದೆಹಲಿಗೆ ಹೊರಟಿದ್ದಾರೆ. ಉಪ ಚುನಾವಣೆಯ ಸವಾಲಿನ ಜೊತೆಗೆ ಸಚಿವ ಸಂಪುಟ ವಿಸ್ತರಣೆಯ ಪ್ರಶ್ನೆಗಳಿಗೆ ಉತ್ತರ ಸಿಗಬಹುದು ಎಂಬ ಕಾರಣಕ್ಕೆ ಸಿಎಂ ದೆಹಲಿ ದಂಡಯಾತ್ರೆ ಮಹತ್ವ ಪಡೆದುಕೊಂಡಿದೆ.
ಬೆಂಗಳೂರು: ಒಂದೆಡೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಆಪ್ತನ ಮೇಲೆ ಐಟಿ ದಾಳಿ ನಡೆಸಿದೆ. ಇದ್ರ ಬೆನ್ನಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ದಿಢೀರ್ ಅಂತಾ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ರಾಜ್ಯ ರಾಜಕಾರಣದಲ್ಲಿ, ಅದ್ರಲ್ಲೂ ಕಮಲ ಪಾಳಯದಲ್ಲಿ ಸಂಚಲನ ಸೃಷ್ಟಿಸಿರೋ ಐಟಿ ರೇಡ್ ಬಗ್ಗೆ ದೆಹಲಿ ಮಟ್ಟದಲ್ಲೂ ಚರ್ಚೆಯಾಗುತ್ತಾ ಅನ್ನೋ ಕುತೂಹಲದ ಪ್ರಶ್ನೆ ಎಲ್ಲರಲ್ಲೂ ಮೂಡುತ್ತಿದೆ.
ನಿನ್ನೆ ಬೆಳಗ್ಗೆಯಿಂದ ರಾತ್ರಿವರೆಗೂ ಮಾಜಿ ಸಿಎಂ ಬಿಎಸ್ವೈ ಆಪ್ತನ ಮನೆಯಲ್ಲಿ ನಡೆದ ಐಟಿ ಶೋಧ ರಾಜ್ಯ ರಾಜಕಾರಣದಲ್ಲೇ ಭಾರಿ ಸಂಚಲನ ಸೃಷ್ಟಿಸಿತ್ತು. ಇದ್ರ ಬೆನ್ನಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ದಿಢೀರ್ ದೆಹಲಿ ಪ್ರವಾಸ ಕೈಗೊಂಡಿರೋದು ಕುತೂಹಲಕ್ಕೆ ಕಾರಣವಾಗಿದೆ. ಇಂದು ಬೆಳಗ್ಗೆ 8 ಗಂಟೆಗೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ಸಿಎಂ ಬೊಮ್ಮಾಯಿ ಹೊರಟಿದ್ದು, ರಾತ್ರಿ ವಾಪಸ್ ಆಗಲಿದ್ದಾರೆ. ಬೆಳಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಆರೋಗ್ಯ ಸಚಿವ ಮನಸುಖ್ ಮಾಂಡವಿಯರನ್ನು ಸಿಎಂ ಭೇಟಿಯಾಗಿ ಚರ್ಚೆ ಮಾಡಲಿದ್ದಾರೆ. ಆದ್ರೆ ಐಟಿ ರೇಡ್ ಬೆನ್ನಲ್ಲೇ ಒಂದು ದಿನದ ಮಟ್ಟಿಗೆ ದೆಹಲಿಯತ್ತ ತೆರಳ್ತಿರೋದು ಬಿಜೆಪಿ ಪಾಳಯದಲ್ಲೇ ಚರ್ಚೆಗೆ ಕಾರಣವಾಗಿದೆ. ಹೀಗಾಗಿ ಬಿಜೆಪಿ ಹೈಕಮಾಂಡ್ ಭೇಟಿ ಮಾಡಿ ನಡೆಸಲಿರುವ ಮಾತುಕತೆ ಇದೀಗ ಮಹತ್ವ ಪಡೆದಿದೆ.
ಸಚಿವ ಸ್ಥಾನ ಆಕಾಂಕ್ಷಿಗಳಿಂದ ಮತ್ತೆ ಲಾಬಿ ಇತ್ತ ದೆಹಲಿ ಭೇಟಿಗೆ ಸಿಎಂ ಸಿದ್ಧತೆ ನಡೆಸಿದಾಗಲೇ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಚರ್ಚೆ ಮತ್ತೆ ಗರಿಗೆದರಿದೆ. ಸಾಲು ಸಾಲು ಚುನಾವಣೆಗಳು ಸದ್ಯದಲ್ಲೇ ಇರುವುದರಿಂದ ಸಹಜವಾಗಿಯೇ ಸಚಿವ ಸಂಪುಟ ವಿಸ್ತರಣೆ ಆಗಬೇಕು ಎಂಬ ಒತ್ತಡವಿದೆ. ಸಚಿವ ಸ್ಥಾನಕ್ಕಾಗಿ ಕಾದು ಕೂತಿರೋ ಆಕಾಂಕ್ಷಿಗಳು, ದೆಹಲಿ ಪ್ರವಾಸದ ವೇಳೆ ಸಚಿವ ಸಂಪುಟ ವಿಸ್ತರಣೆಗೆ ಅನುಮತಿ ಪಡೆದುಕೊಳ್ಳುವಂತೆ ಒತ್ತಡ ಹೇರಿದ್ದಾರೆನ್ನಲಾಗಿದೆ. ಜೊತೆಗೆ ಎರಡು ಕ್ಷೇತ್ರಗಳ ಬೈ ಇಲೆಕ್ಷನ್ ಕೂಡ ಇದ್ದು ರಾಜ್ಯ ಬಿಜೆಪಿಯ ಸ್ಥಿತಿಗತಿಯನ್ನು ಸಿಎಂ ಹೈಕಮಾಂಡ್ ಗಮನಕ್ಕೆ ತರುವ ಸಾಧ್ಯತೆ ಇದೆ.
ಒಟ್ನಲ್ಲಿ ಬಿಎಸ್ವೈ ಆಪ್ತನ ಮನೆ ಮೇಲೆ ಐಟ ರೇಡ್ ನಡೆದ ಬೆನ್ನಲ್ಲೇ ಸಿಎಂಗೆ ಹೈಕಮಾಂಡ್ ಬುಲಾವ್ ಕೊಟ್ಟಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದೆ. ಮತ್ತೊಂದೆಡೆ ಸಿಎಂ ದೆಹಲಿ ಭೇಟಿ ಒಂದೇ ದಿನಕ್ಕಾದರೂ ಸಚಿವ ಸ್ಥಾನದ ಆಕಾಂಕ್ಷಿಗಳ ಉತ್ಸಾಹ ಮತ್ತೆ ಗರಿಗೆದರಿದೆ. ಇಂಥ ಆಸೆಗಳಿಗೆ ಸಿಎಂ ದೆಹಲಿ ಪ್ರವಾಸ ನೀರೆರೆಯುತ್ತಾ ಅಥವಾ ನಿರಾಸೆ ಮಾಡತ್ತಾ ಅನ್ನೋದನ್ನು ಕಾದು ನೋಡಬೇಕು.
ಇದನ್ನೂ ಓದಿ: ಐಟಿ ದಾಳಿ ಹಿನ್ನೆಲೆ ಸಿಎಂ ಕಚೇರಿ ಡ್ಯೂಟಿಯಿಂದ ಬಿಎಸ್‌ವೈ ಆಪ್ತ ಉಮೇಶ್ಗೆ ಗೇಟ್ ಪಾಸ್ ನೀಡಿದ ಸಿಎಂ ಬೊಮ್ಮಾಯಿ
Published On - 8:51 am, Fri, 8 October 21