ಬಳ್ಳಾರಿ ವಿಮ್ಸ್ ಪ್ರಕರಣ: ಸಚಿವ ಕೆ ಸುಧಾಕರ್ ರಾಜಿನಾಮೆಗೆ ವಿಪಕ್ಷಗಳ ಒತ್ತಾಯ; ಸಿಎಂ ಬೊಮ್ಮಾಯಿ ಆಕ್ರೋಶ
ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ಸಮಸ್ಯೆಯಿಂದ ವೆಂಟಿಲೇಟರ್ ಸ್ಥಗಿತಗೊಂಡು, ಮೂವರು ರೋಗಿಗಳು ಸಾವನ್ನಪ್ಪಿದ್ದು, ಘಟನೆಗೆ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಕಾರಣ, ಕೂಡಲೇ ರಾಜೀನಾಮೆ ನೀಡಬೇಕೆಂಬ ವಿಪಕ್ಷಗಳ ಒತ್ತಾಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಳ್ಳಿಹಾಕಿದ್ದಾರೆ.
ಬೆಂಗಳೂರು: ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ಸಮಸ್ಯೆಯಿಂದ (electricity failure) ವೆಂಟಿಲೇಟರ್ (Ventilator) ಸ್ಥಗಿತಗೊಂಡು, ಮೂವರು ರೋಗಿಗಳು ಸಾವನ್ನಪ್ಪಿದ್ದು, ಘಟನೆಗೆ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಕಾರಣ, ಕೂಡಲೇ ರಾಜೀನಾಮೆ ನೀಡಬೇಕೆಂಬ ವಿಪಕ್ಷಗಳ ಒತ್ತಾಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಳ್ಳಿಹಾಕಿದ್ದಾರೆ ಎಂದು ಖಾಸಗಿ ಸುದ್ದಿ ಸಂಸ್ಥೆ ಮಿಂಟ್ ವರದಿ ಮಾಡಿದೆ.
ಪ್ರತಿಪಕ್ಷಗಳು ವಿಮ್ಸ್ ಆಸ್ಪತ್ರೆಯಲ್ಲಿ ಆದ ಅವಘಡಕ್ಕೆ ಡಾ.ಸುಧಾಕರ್ ಕಾರಣ ಎಂದು ಆರೋಪಿಸಿದ್ದವು. ಇದಕ್ಕೆ ಉತ್ತರಿಸಿದ ಸಿಎಂ ಬೊಮ್ಮಾಯಿ ಸುಧಾಕರ್ ರಾಜೀನಾಮೆ ಕೇಳುವುದು ಪ್ರತಿಪಕ್ಷಗಳ ಕೆಲಸ. ಕಾಂಗ್ರೆಸ್ ಪ್ರತಿಯೊಂದು ವಿಷಯದಲ್ಲೂ ರಾಜಕೀಯ ಮಾಡುವ ಪ್ರವೃತ್ತಿ ಬೆಳೆಸಿಕೊಂಡಿದೆ ಎಂದು ಕಿಡಿಕಾರಿದಾರು.
ಈ ಹಿಂದೆ ಕಾಂಗ್ರೆಸ್ ಸರ್ಕಾರ ಕರ್ನಾಟಕ ಖಾಸಗಿ ಆಸ್ಪತ್ರೆಗಳ ಮಸೂದೆಯನ್ನು ಮಂಡಿಸಿದಾಗ ವೈದ್ಯರು 5 ದಿನಗಳ ಮುಷ್ಕರ ನಡೆಸಿದರು. ಆಗ 80 ಜನ ಸಾವನ್ನಪ್ಪಿದ್ದರು. ಕಾಂಗ್ರೆಸ್ ಸರ್ಕಾರ ನೈತಿಕ ಹೊಣೆ ಹೊತ್ತುಕೊಂಡಿದೆಯೇ? ಆ ಸಮಯದಲ್ಲಿ ಯಾರಾದರೂ ರಾಜೀನಾಮೆ ನೀಡಿದ್ದೀರಾ? ಆಗಿನ ಆರೋಗ್ಯ ಸಚಿವರು ರಾಜೀನಾಮೆ ನೀಡಿದ್ರಾ? ಪ್ರತಿಯೊಂದು ವಿಚಾರದಲ್ಲೂ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ,” ಎಂದು ಸಿಎಂ ಬೊಮ್ಮಾಯಿ ಆಕ್ರೋಶ ವ್ಯಕ್ತಪಡಿಸಿದರು.
ಹಿನ್ನೆಲೆ
ವಿಜಯನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ (ವಿಮ್ಸ್)ನಲ್ಲಿ ಸೆ. 14ರಂದು ವಿದ್ಯುತ್ ಸಮಸ್ಯೆಯಿಂದ ವೆಂಟಿಲೇಟರ್ ಸ್ಥಗಿತಗೊಂಡು, ಮೂವರು ರೋಗಿಗಳು ಸಾವನ್ನಪ್ಪಿದ್ದರು. ಕಿಡ್ನಿ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ವೆಂಟಿಲೇಟರ್ನಲ್ಲಿದ್ದ ಮೌಲಾ ಹುಸೇನ್ (35) ಮತ್ತು ಹಾವು ಕಡಿತಕ್ಕೆ ಒಳಗಾದ ಚೆಟ್ಟೆಮ್ಮ (30) ಸಾವನ್ನಪ್ಪಿದ್ದರು. ಮೂತ್ರಕೋಶ ವೈಫಲ್ಯದಿಂದ ಬಳಲುತ್ತಿದ್ದ ಮತ್ತೊಬ್ಬ ರೋಗಿ ಸಹ ಸಾವನ್ನಪ್ಪಿದ್ದರು. ಐಸಿಯುನಲ್ಲಿದ್ದ 10 ರೋಗಿಗಳ ಪೈಕಿ, ಈ ಮೂವರು ರೋಗಿಗಳು ಅಸುನೀಗಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ