ಭಾಷಣ ವೇಳೆ ಎಡವಟ್ಟು: ಬಾಯಿ ತಪ್ಪಿ ರಾಹುಲ್ ಬದಲು ಮೋದಿ ಪಾದಯಾತ್ರೆ ಮಾಡ್ತಿದ್ದಾರೆ ಎಂದ ಮಾಜಿ ಸಿಎಂ ಸಿದ್ದರಾಮಯ್ಯ
ಅಚ್ಛೇ ದಿನ್ ಬಗ್ಗೆಯೂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದು, ಮೋದಿ ಪಕೋಡ ಮಾರಲು ಹೋಗಿ ಅಂತಾರೆ. ಎಣ್ಣೆ ಬೆಲೆ ಜಾಸ್ತಿ ಆಗಿದೆ ಹೇಗೆ ಮಾರೋದು ಎಂದು ಪ್ರಶ್ನಿಸಿದರು.
ಬೆಂಗಳೂರು: ದೇಶದ ಅಭಿವೃದ್ಧಿಗಾಗಿ ನರೇಂದ್ರ ಮೋದಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ರಾಹುಲ್ ಅನ್ನುವ ಬದಲು ಮೋದಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ಮೈಸೂರಿನಲ್ಲಿ ‘ಭಾರತ್ ಜೋಡೋ’ ಪೂರ್ವಭಾವಿ ಸಭೆ ಭಾಷಣ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಎಡವಟ್ಟು ಮಾಡಿಕೊಂಡಿದ್ದು, ಬಾಯಿ ತಪ್ಪಿ ಮೋದಿ ಪಾದಯಾತ್ರೆ ಮಾಡ್ತಿದ್ದಾರೆ ಎಂದರು. ನಂತರ ಸರಿಪಡಿಸಿಕೊಂಡು ನರೇಂದ್ರ ಮೋದಿ ಅಲ್ಲ ರಾಹುಲ್ ಗಾಂಧಿ ಎಂದು ಹೇಳಿದರು. ನಾನು ನರೇಂದ್ರ ಮೋದಿ ಅಂತಾ ಹೇಳಿದ್ನಾ ಎಂದು ಸಭೆಯಲ್ಲಿದ್ದವರನ್ನು ಸಿದ್ದರಾಮಯ್ಯ ಕೇಳಿದರು. ಇದೇ ವೇಳೆ ಅಚ್ಛೇ ದಿನ್ ಬಗ್ಗೆಯೂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದು, ಮೋದಿ ಪಕೋಡ ಮಾರಲು ಹೋಗಿ ಅಂತಾರೆ. ಎಣ್ಣೆ ಬೆಲೆ ಜಾಸ್ತಿ ಆಗಿದೆ ಹೇಗೆ ಮಾರೋದು ಎಂದು ಪ್ರಶ್ನಿಸಿದರು.
ಬಿಜೆಪಿಯವರು ಲಜ್ಜೆಗೆಟ್ಟವರು: ಸಿದ್ದರಾಮಯ್ಯ
ಪಿಎಸ್‌ಐ ಹುದ್ದೆಗಳ ಪರೀಕ್ಷೆಯಲ್ಲಿ ಯುವಕರಿಂದ 300 ಕೋಟಿ ಹಣ ಲೂಟಿ ಮಾಡಿದ್ದಾರೆ ಎಂದು ಬಿಜೆಪಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು. ಅದರಲ್ಲಿ ಮಂತ್ರಿಗಳು ಇದ್ದಾರೆ, ಬಿಜೆಪಿಯವರು ಲಜ್ಜೆಗೆಟ್ಟವರು. ಸರ್ಕಾರದಲ್ಲಿ 40 ಪರ್ಸೆಂಟ್ ಕಮಿಷನ್ ಇದೆ ಎಂದು ಪತ್ರ ಬರೆಯಲಾಗಿದೆ. ಕೆಂಪಯ್ಯ ಪ್ರಧಾನಿಗೆ ಎರಡನೇ ಪತ್ರ ಕೂಡ ಬರೆದಿರಬೇಕು. ಇಂಥ ಭ್ರಷ್ಟ ಸರ್ಕಾರ ನನ್ನ ರಾಜಕೀಯ ಜೀವನದಲ್ಲಿ ನೋಡಿಲ್ಲ. ಎಡಿಜಿಪಿ ಕಚೇರಿಯಲ್ಲಿ ಪಿಎಸ್‌ಐ ಪರೀಕ್ಷೆ ಉತ್ತರ ಬರೆಸಿದ್ದಾರೆ. ಖಾಲಿ ಪೇಪರ್ ಪಡೆದು ನಂತರ ಉತ್ತರವನ್ನ ಬರೆಯಲಾಗಿದೆ. ಎಡಿಜಿಪಿ ಅಮೃತ್ಪಾಲ್ ಬಗ್ಗೆಯೂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದು, ಹೆಸರು ಮಾತ್ರ ಅಮೃತ್ ಆದರೆ, ಆತ ಅಮೃತ ಅಲ್ಲ ವಿಷಾಮೃತ ಎಂದು ಹೇಳಿದರು.
ಧರ್ಮ ಅನುಸರಿಸಲು ಪ್ರತಿಯೊಬ್ಬರಿಗೂ ಸ್ವಾತಂತ್ರ್ಯಯಿದೆ
ಅಲ್ಪಸಂಖ್ಯಾತರಿಗೆ ನೋವು ಕೊಡಲು ಕಾಯ್ದೆ ತಂದಿದ್ದಾರೆ. ಮತಾಂತರ ನಿಷೇಧ ಕಾಯ್ದೆಗೆ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದ್ದು, ಧರ್ಮ ಅನುಸರಿಸಲು ಪ್ರತಿಯೊಬ್ಬರಿಗೂ ಸ್ವಾತಂತ್ರ್ಯ ಇದೆ. ನಮಗೆಲ್ಲಾ ನಮ್ಮ ಧರ್ಮ ಆಚರಿಸಲು ಅವಕಾಶ ಇದೆ. ಎಲ್ಲರನ್ನೂ ಮನುಷ್ಯರಾಗಿ ನೋಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಮೇಕೆದಾಟು ಬಳ್ಳಾರಿ ಪಾದಯಾತ್ರೆ ಇದೆಲ್ಲಾ ಚಿಕ್ಕದು
ಹೆಚ್ಚು ಜನರನ್ನು ಕರೆದುಕೊಂಡು ಬಂದರೆ ನಿಮಗೆ ರಾಜಕೀಯ ಲಾಭ. ಮುಂದೆ ಚುನಾವಣೆ ಬರುತ್ತಿದೆ. ಒಬ್ಬೊಬ್ಬ ಶಾಸಕ 5 ಸಾವಿರ ಜನರನ್ನು ಕರೆದುಕೊಂಡು ಬನ್ನಿ ಎಂದು ಸಭೆಯಲ್ಲಿದ್ದವರಿಗೆ ಸಿದ್ದರಾಮಯ್ಯ ಕರೆ ನೀಡಿದರು. ಎಲ್ಲಾ ಶಾಸಕರು ಮಾಜಿ ಶಾಸಕರು, ಮಾಜಿ ಎಂಪಿ, ಎಂ.ಎಲ್.ಸಿ, ಪಾಲಿಕೆ ಸದಸ್ಯರು ಜಿ.ಪಂ ತಾ.ಪಂ ಗ್ರಾ.ಪಂ ಸದಸ್ಯರು ಭಾಗವಹಿಸಬೇಕು. ಮೇಕೆದಾಟು ಬಳ್ಳಾರಿ ಪಾದಯಾತ್ರೆ ಇದೆಲ್ಲಾ ಚಿಕ್ಕ ಚಿಕ್ಕ ಪಾದಯಾತ್ರೆ. ರಾಹುಲ್ ಗಾಂಧಿ ಪಾದಯಾತ್ರೆ ದೊಡ್ಡದು ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.