ಪೊಲೀಸ್ ಅಧಿಕಾರಿಗಳಿಗೆ ಸಿಎಂ ಖಡಕ್ ವಾರ್ನಿಂಗ್; SP, DCP, IGಗಳಿಗೆ ಠಾಣೆ ಭೇಟಿಗೆ ಸೂಚನೆ
ಸಿಎಂ ಸಿದ್ದರಾಮಯ್ಯನವರು ಕರ್ನಾಟಕ ಪೊಲೀಸರಿಗೆ ತರಾಟೆಗೆ ತೆಗೆದುಕೊಂಡಿದ್ದು ಕೆಲವೊಂದು ಸೂಚನೆಗಳನ್ನು ನೀಡಿದ್ದಾರೆ. ನಿಮ್ಮ ವ್ಯಾಪ್ತಿಯಲ್ಲಿ ಕ್ಲಬ್ಗಳು, ಇಸ್ಪೀಟ್, ಬೆಟ್ಟಿಂಗ್, ಡ್ರಗ್ಸ್ಗಳನ್ನು ನಿಲ್ಲಿಸದಿದ್ದರೆ SP ಮತ್ತು IG ಮಟ್ಟದ ಅಧಿಕಾರಿಗಳನ್ನೂ ನೇರ ಹೊಣೆ ಮಾಡಿ ಕ್ರಮ ತೆಗೆದುಕೊಳ್ಳಲಾಗುವುದು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು, ಜುಲೈ.06: ಪ್ರತಿ SP, DCP, IGಗಳು ಪೊಲೀಸ್ ಮ್ಯಾನ್ಯುಯಲ್ ತಮ್ಮ ವ್ಯಾಪ್ತಿಯ ಪ್ರಕಾರ ಪ್ರತಿ ಠಾಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದು ಕಡ್ಡಾಯ ಎಂದು ಪೊಲೀಸ್ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ (Siddaramaiah) ಸ್ಪಷ್ಟ ಸೂಚನೆ ನೀಡಿದ್ದಾರೆ. ಹಾಗೂ ಕಳೆದ ಒಂದು ವರ್ಷದಲ್ಲಿ ಕೋಮು ಗಲಭೆ ಇಲ್ಲದಂತೆ ಕಾನೂನು ಸುವ್ಯವಸ್ಥೆ ಕಾಪಾಡಿದಕ್ಕೆ ಗೃಹ ಸಚಿವರಿಗೆ ಮತ್ತು ಕರ್ನಾಟಕ ಪೊಲೀಸ್ ಇಲಾಖೆ (Karnataka Police Department) ಸಿಎಂ ಸಿದ್ದರಾಮಯ್ಯನವರು ಅಭಿನಂದಿಸಿದ್ದಾರೆ.
ನಿಮ್ಮ ವ್ಯಾಪ್ತಿಯಲ್ಲಿ ಕ್ಲಬ್ಗಳು, ಇಸ್ಪೀಟ್, ಬೆಟ್ಟಿಂಗ್, ಡ್ರಗ್ಸ್ಗಳನ್ನು ನಿಲ್ಲಿಸದಿದ್ದರೆ SP ಮತ್ತು IG ಮಟ್ಟದ ಅಧಿಕಾರಿಗಳನ್ನೂ ನೇರ ಹೊಣೆ ಮಾಡಿ ಕ್ರಮ ತೆಗೆದುಕೊಳ್ಳಲಾಗುವುದು. SP-IG ಗಳು ಪ್ರತಿ ಠಾಣೆಗಳಿಗೆ ಹೋಗಿ ಪರಿಶೀಲನೆ ನಡೆಸಿದರೆ ಇವನ್ನೆಲ್ಲಾ ತಪ್ಪಿಸಬಹುದು ಎಂದು ಸಿಎಂ ಎಚ್ಚರಿಕೆ ನೀಡಿದ್ದಾರೆ. ನಾಳೆಯಿಂದಲೇ SP, IG ಗಳು ಠಾಣೆಗಳಿಗೆ ಭೇಟಿ ನೀಡಬೇಕು. ಭೇಟಿ ನೀಡಿ ಅರ್ಧಗಂಟೆಯಲ್ಲಿ ಶಾಸ್ತ್ರ ಮುಗಿಸಬಾರದು. ಕೂಲಂಕುಶ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದ್ದಾರೆ.
ಫೇಕ್ ನ್ಯೂಸ್ ಪ್ರಸಾರ ತಡೆಗಟ್ಟಿ. ಇಲ್ಲಾಂದ್ರೆ ಕ್ರಮ ಎದುರಿಸಿ ಎಂದು ಪೊಲೀಸ್ ಇಲಾಖೆ ಉನ್ನತ ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ ನೀಡಿದ್ದಾರೆ. ಫೇಕ್ ನ್ಯೂಸ್ಗಳು ಸಮಾಜದ ನೆಮ್ಮದಿಗೆ ಕಂಟಕವಾಗಿವೆ, ಇವು ವಿಪರೀತ ಹೆಚ್ಚಾಗುತ್ತಿವೆ. ಇವುಗಳ ತಡೆಗೆ fact check ಘಟಕಗಳನ್ನು ಮಾಡಿದ್ದೇವೆ, ಆದರೂ ಫೇಕ್ ನ್ಯೂಸ್ಗಳು ಹೆಚ್ಚಾಗುತ್ತಿವೆ, ಇದನ್ನು ಸಹಿಸಲು ಸಾಧ್ಯವಿಲ್ಲ. ಸದ್ಯ ಫೇಕ್ ನ್ಯೂಸ್ ತಡೆಯಲು ಆಗುತ್ತಿರುವ ಕೆಲಸ ಸಾಲುತ್ತಿಲ್ಲ. ಕೃತಕ ಬುದ್ದಿಮತ್ತೆ ಬಳಸಿ, ಸ್ವಯಂ ಪ್ರೇರಿತ ದೂರುಗಳನ್ನು ಹೆಚ್ಚೆಚ್ಚು ದಾಖಲಿಸಿ. ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲೇಬೇಕು ಎಂದು ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಮುಡಾ ಹಗರಣ: ಮುಖ್ಯಮಂತ್ರಿ ಪತ್ನಿಯ ಅಣ್ಣ ನಕಲಿ ಕಾಗದಪತ್ರ ಸೃಷ್ಟಿಸಿ ಜಮೀನು ತನ್ನದು ಎಂದಿದ್ದಾರೆ: ಆರ್ಟಿಐ ಕಾರ್ಯಕರ್ತ
ಡ್ರಗ್ಸ್ ಪೂರ್ತಿ ನಿಂತಿಲ್ಲ ಏಕೆ?
ಇನ್ನು ಮತ್ತೊಂದೆಡೆ ಸಿಎಂ ಸಿದ್ದರಾಮಯ್ಯನವರು, ಪೊಲೀಸ್ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಡ್ರಗ್ಸ್ ಪೂರ್ತಿ ನಿಂತಿಲ್ಲ ಏಕೆ? ಎಂದು ಪ್ರಶ್ನೆ ಮಾಡಿದ್ದಾರೆ. ಡ್ರಗ್ಸ್ ಮಾರೋರು ಯಾರು? ರೌಡಿಗಳು ಯಾರು? ರಿಯಲ್ ಎಸ್ಟೇಟ್ ಮಾಡೋರು ಯಾರು ಎನ್ನುವುದು ಆಯಾ ಠಾಣಾಧಿಕಾರಿಗಳಿಗೆ ಗೊತ್ತಿರತ್ತೆ. ಆದರೂ ಯಾಕೆ ನಿಲ್ಲುತ್ತಿಲ್ಲ? ನಿಮಗೆ ಗನ್ಗಳನ್ನು ಕೊಟ್ಟಿರುವುದು ಏಕೆ ? ಈ ಬಗ್ಗೆ ರೌಡಿಗಳಿಗೆ ಏಕೆ ಭಯವಿಲ್ಲ? ರೌಡಿಗಳಿಗೆ ಪೊಲೀಸ್ ಭಯ ಇರಬೇಕು ಎಂದು ಎಚ್ಚರಿಸಿದ್ದಾರೆ. ಕೆಲವು ಪೊಲೀಸರಿಗೆ ಇ-ಬೀಟ್ ವ್ಯವಸ್ಥೆ ಜಾರಿಯಲ್ಲಿರುವುದೇ ಗೊತ್ತಿಲ್ಲ ಎಂದರೆ ನಾಚಿಕೆಗೇಡು. ಇದನ್ನು ಸರಿಪಡಿಸಿಕೊಳ್ಳಿ ಎಂದು ಸಿಎಂ ಸಿದ್ದರಾಮಯ್ಯನವರು ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:26 pm, Sat, 6 July 24