ಮುಸ್ಲಿಂ ಮೀಸಲಾತಿ ಸಮರ: ಪ್ರಧಾನಿ ಮೋದಿ ವಿರುದ್ದ ಚುನಾವಣಾ ಆಯೋಗಕ್ಕೆ ದೂರು

| Updated By: ರಮೇಶ್ ಬಿ. ಜವಳಗೇರಾ

Updated on: Apr 25, 2024 | 6:26 PM

ದಲಿತರು, ಹಿಂದುಳಿದವರ ಮೀಸಲಾತಿ‌ ಕಿತ್ತು ಮುಸ್ಲಿಂ ಸಮುದಾಯಕ್ಕೆ ನೀಡುತ್ತಾರೆ ಎಂಬ ಪ್ರಧಾನಿ‌ ಮೋದಿ ಹೇಳಿಕೆ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಸುಳ್ಳು ಎಂದು ತಿರುಗೇಟು ನೀಡಿದೆ. ಅಲ್ಲದೇ ಇದೀಗ ಪ್ರಧಾನಿ ಮೋದಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಮುಸ್ಲಿಂ ಮೀಸಲಾತಿ ಸಮರ: ಪ್ರಧಾನಿ ಮೋದಿ ವಿರುದ್ದ ಚುನಾವಣಾ ಆಯೋಗಕ್ಕೆ ದೂರು
ಪ್ರಧಾನಿ ಮೋದಿ
Follow us on

ಬೆಂಗಳೂರು, (ಏಪ್ರಿಲ್ 25): ಒಬಿಸಿ ಕೋಟಾಕ್ಕೆ ಮುಸ್ಲಿಮರನ್ನು(Muslim Reservation) ಸೇರಿಸುವ ಮೂಲಕ ಕರ್ನಾಟಕದಲ್ಲಿ ಹಿಂದುಳಿದ ವರ್ಗಕ್ಕಿದ್ದ ದೊಡ್ಡ ಪಾಲನ್ನು ಕಿತ್ತುಕೊಳ್ಳಲಾಗಿದೆ. ಈ ವಿಧಾನವನ್ನು ದೇಶದಾದ್ಯಂತ ಜಾರಿಗೆ ತರಲು ಕಾಂಗ್ರೆಸ್​ ಯೋಜಿಸಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್(Congress)​ , ನರೇಂದ್ರ ಮೋದಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಇಂದು (ಏಪ್ರಿಲ್ 25) ಮಾಜಿ ಸಂಸದ ವಿಎಸ್ ಉಗ್ರಪ್ಪ ಅವರ ನೇತೃತ್ವದ ಕಾಂಗ್ರೆಸ್​ ನಿಯೋಗ ಮೋದಿ ವಿರುದ್ದ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ದೂರು ನೀಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಉಗ್ರಪ್ಪ, ನರೇಂದ್ರ ಮೋದಿ ಮಾನಸಿಕ ಸ್ಮಿತೆ ಕಳೆದುಕೊಂಡಿದ್ದಾರೆ. ರಾಜಸ್ಥಾನದ ಚುನಾವಣಾ ರ್ಯಾಲಿ ಭಾಗಿ ಆಗಿದ್ದಾಗ ಈ ರೀತಿ ಮಾತನಾಡಿದ್ದಾರೆ. ದೇಶದ ಆಸ್ತಿ ಸರ್ವೆ ಮಾಡುತ್ತಾರೆ ಎಂದು ಮಾತನಾಡಿದ್ದಾರೆ. ಸಾವನ್ನಪ್ಪಿದ ಮೇಲೆ ಅವರ ಆಸ್ತಿಗಳನ್ನು ಹಂಚಿಕೆ ಮಾಡುತ್ತಾರೆ ಎಂದು ಹೇಳಿದ್ದಾರೆ. ದಲಿತರ ಮೀಸಲಾತಿಯನ್ನು ಕಡಿತ ಮಾಡಿ ಮುಸ್ಲಿಮರಿಗೆ ಕೊಡುತ್ತಾರೆ ಎಂದು ಆರೋಪಿಸಿದ್ದಾರೆ. ಸಂವಿಧಾನ ಆಧಾರದ ಮೇಲೆ ನಾವು ಮೀಸಲಾತಿ ಕೊಡುವುದು ಮಾಡಿದ್ದೇವೆ. ಸಂವಿಧಾನದ ವಿರುದ್ಧ ನಾವು ಯಾವುದು ಮಾಡಿಲ್ಲ. ಯಾರ ಆಸ್ತಿಯನ್ನು ಸರ್ವೆ ಮಾಡಲು ನಾವು ಪ್ರಣಾಳಿಕೆಯಲ್ಲೂ ಕೊಟ್ಟಿಲ್ಲ. ಈ ಹಿನ್ನಲೆ ಪ್ರಧಾನಿ ಮೋದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿಕೊಳ್ಳಬೇಕು. ಅಲ್ಲದೇ ಮೋದಿ ಅವರನ್ನು ಚುನಾವಣಾ ಪ್ರಚಾರದಿಂದ ಕೈ ಬಿಡಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ: ಮುಸ್ಲಿಮರನ್ನು ಒಬಿಸಿಗೆ ಸೇರಿಸಿದ ರಾಜ್ಯ ಸರ್ಕಾರ: ರಾಷ್ಟ್ರೀಯ ಆಯೋಗದ ತನಿಖೆಯಲ್ಲಿ ಬಹಿರಂಗ

ಮೋದಿ ಹೇಳಿದ್ದೇನು?

ಲೋಕಸಭಾ ಚುನಾವಣಾ ಪ್ರಚಾರದ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್‌ನವರು ನಿಮ್ಮ ಆಸ್ತಿ, ನಿಮ್ಮ ಸಂಪತ್ತು, ನಿಮ್ಮ ಚಿನ್ನವನ್ನ ಕಸಿದುಕೊಳ್ಳುತ್ತಾರೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಮತ್ತೊಂದು ಬಾಣ ಬಿಟ್ಟ ಮೋದಿ, ಎಸ್‌ಸಿ-ಎಸ್‌ಟಿ, ಒಬಿಸಿ ಕೋಟಾದಲ್ಲಿರುವ ಮೀಸಲಾತಿಯನ್ನ ಕದ್ದು ಧರ್ಮ ಆಧಾರದಲ್ಲಿ ನೀಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ದು, ಇದಕ್ಕೆ ಕರ್ನಾಟಕವನ್ನೇ ಉದಾಹರಣೆಯಾಗಿ ಕೊಟ್ಟಿದ್ದರು.

ಒಬಿಸಿ ಮೀಸಲಾತಿಯಡಿ ಎಲ್ಲಾ ಮುಸ್ಲಿಂ ಜಾತಿಗಳನ್ನು ಸೇರಿಸುವ ಮೂಲಕ ಹಿಂಬಾಗಿಲಿನ ಮೂಲಕ ಕರ್ನಾಟಕದಲ್ಲಿ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲು ಕಾಂಗ್ರೆಸ್ ಮುಂದಾಗಿದೆ. ನಿಮ್ಮ ಭವಿಷ್ಯ ಪೀಳಿಗೆಯನ್ನು ಸಂಪೂರ್ಣವಾಗಿ ನಾಶಪಡಿಸಲು ಕಾಂಗ್ರೆಸ್ ಹುನ್ನಾರ ನಡೆಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದರು.

ಒಬಿಸಿ ಸಮುದಾಯದ ದೊಡ್ಡ ಶತ್ರು ಎಂದರೆ ಅದು ಕಾಂಗ್ರೆಸ್, ಒಬಿಸಿಗಳ ಹಕ್ಕುಗಳನ್ನು ಕಸಿದುಕೊಳ್ಳುವ ಮೂಲಕ ಸಾಮಾಜಿಕ ನ್ಯಾಯವನ್ನು ಕೊಲೆ ಮಾಡಿದೆ, ಸಂವಿಧಾನದ ಆಶಯವನ್ನು ಉಲ್ಲಂಘಿಸಿ ಅಂಬೇಡ್ಕರ್ ಅವರನ್ನು ಅವಮಾನಿಸಿದೆ ಎಂದು ಕಿಡಿಕಾರಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.