ಸಚಿವ ಪ್ರಿಯಾಂಕ್ ಖರ್ಗೆ ಕಾರಿಗೆ ಬಿತ್ತು ಟ್ರಾಫಿಕ್ ಫೈನ್!; 4 ಕೇಸ್, 2,500 ದಂಡ ಬಾಕಿ; 50% ಆಫರ್ ಬಳಸಿ ಬೇಗ ಕಟ್ಟಿ ಎಂದು ಕಾಲೆಳೆದ ಬಿಜೆಪಿ

ರಾಜ್ಯದಲ್ಲಿ ಬಾಕಿ ಉಳಿದ ಸಂಚಾರ ಇ-ಚಲನ್ ದಂಡಗಳ ಮೇಲೆ ಶೇ. 50ರಷ್ಟು ರಿಯಾಯಿತಿ ಘೋಷಿಸಲಾಗಿದೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಈ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರೂ, ಅವರ ಅಧಿಕೃತ ಕಾರು ವೇಗದ ಮಿತಿ ಉಲ್ಲಂಘನೆ ಮತ್ತು ಸೀಟ್‌ಬೆಲ್ಟ್ ಇಲ್ಲದೆ ಚಲಿಸಿದ್ದು, 2,500 ರೂ. ದಂಡ ಬಾಕಿ ಉಳಿಸಿದೆ ಎಂದು ಬಿಜೆಪಿ ಆರೋಪಿಸಿದೆ. ಬಿಜೆಪಿ ಸಚಿವರನ್ನು ತರಾಟೆಗೆ ತೆಗೆದುಕೊಂಡು, ತಕ್ಷಣ ರಿಯಾಯಿತಿ ಬಳಸಿ ದಂಡ ಪಾವತಿಸಲು ಆಗ್ರಹಿಸಿದೆ.

ಸಚಿವ ಪ್ರಿಯಾಂಕ್ ಖರ್ಗೆ ಕಾರಿಗೆ ಬಿತ್ತು ಟ್ರಾಫಿಕ್ ಫೈನ್!; 4 ಕೇಸ್, 2,500 ದಂಡ ಬಾಕಿ; 50% ಆಫರ್ ಬಳಸಿ ಬೇಗ ಕಟ್ಟಿ ಎಂದು ಕಾಲೆಳೆದ ಬಿಜೆಪಿ
ಪ್ರಿಯಾಂಕ ಖರ್ಗೆ
Image Credit source: Tv9 kannada

Updated on: Jun 25, 2026 | 12:36 PM

ಮುಖ್ಯಾಂಶಗಳು

  • ಸರ್ಕಾರದ ನಿಯಮಗಳನ್ನು ಸ್ವತಃ ಗೃಹ ಸಚಿವರೇ ಉಲ್ಲಂಘಿಸುತ್ತಿದ್ದಾರೆ
  • ಈ ಬಗ್ಗೆ ಎಕ್ಸ್​​ನಲ್ಲಿ ಪ್ರಿಯಾಂಕ ಖರ್ಗೆಗೆ ಪ್ರತಿಕ್ರಿಯಿಸಿ ತಿರುಗೇಟು ನೀಡಿದ ಬಿಜೆಪಿ
  • ಒಟ್ಟು 4 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಬಾಕಿ

ಬೆಂಗಳೂರು, ಜೂ.25: ರಾಜ್ಯದಲ್ಲಿ ಜೂನ್ 21 ರಿಂದ ಜುಲೈ 10ರ ವರೆಗೆ ಬಾಕಿ ಇರುವ ಸಂಚಾರ ಉಲ್ಲಂಘನೆ ಇ-ಚಲನ್ ದಂಡಗಳ (Traffic E-Challan Fines) ಮೇಲೆ ಕರ್ನಾಟಕ ಸರ್ಕಾರವು ಶೇಕಡಾ 50 ರಷ್ಟು ಭರ್ಜರಿ ರಿಯಾಯಿತಿ ಘೋಷಿಸಿತ್ತು. ಈ ಬಗ್ಗೆ ಎಕ್ಸ್​​ನಲ್ಲಿ ಗೃಹಸಚಿವ ಪ್ರಿಯಾಂಕ ಖರ್ಗೆ ಕೂಡ ಪೋಸ್ಟ್​​ನ್ನು ಹಂಚಿಕೊಂಡಿದ್ದರು. ಆದರೆ ಜಾಗೃತಿ ಮೂಡಿಸುತ್ತಿರುವ ಸರ್ಕಾರದ ನಿಯಮಗಳನ್ನು ಸ್ವತಃ ಗೃಹ ಸಚಿವರೇ ಉಲ್ಲಂಘಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಎಕ್ಸ್​​ನಲ್ಲಿ ಪ್ರಿಯಾಂಕ ಖರ್ಗೆಗೆ ಪ್ರತಿಕ್ರಿಯಿಸಿ ತಿರುಗೇಟು ನೀಡಿದ ಬಿಜೆಪಿ, ಒಂದು ಕಡೆ ಸಂಚಾರ ನಿಯಮವನ್ನು ಪಾಲಿಸುವಂತೆ ಸರ್ಕಾರ ಹೇಳುತ್ತಿದೆ. ಇನ್ನೊಂದೆಡೆ ಅದೇ ಸರ್ಕಾರ ಗೃಹ ಸಚಿವರೇ ನಿಯಮ ಉಲ್ಲಂಘನೆ ಮಾಡಿದ್ದಾರೆ ಎಂದು ಬಿಜೆಪಿ ಟ್ವೀಟ್ ಮಾಡಿದೆ. ಸಂಚಾರ ನಿಯಮಗಳು ರಸ್ತೆಯ ಮೇಲಿನ ಕೇವಲ ಗೆರೆಗಳಲ್ಲ, ಅವು ಪ್ರತಿಯೊಬ್ಬರ ಜೀವನಾಡಿ ಎಂದು ಜಾಗೃತಿ ಮೂಡಿಸುವ ಗೃಹಸಚಿವರೇ ಈಗ ಸಂಚಾರ ನಿಯಮವನ್ನು ಪಾಲಿಸಿಲ್ಲ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ರಾಜ್ಯದ ಮಾಹಿತಿ ತಂತ್ರಜ್ಞಾನ ಮತ್ತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಅಧಿಕೃತ ಕಾರು ಸಂಚಾರ ನಿಯಮಗಳನ್ನು ಉಲ್ಲಂಘಿಸಿ ದಂಡವನ್ನು ಬಾಕಿ ಉಳಿಸಿಕೊಂಡಿರುವುದನ್ನು ಮುಂದಿಟ್ಟುಕೊಂಡು ಬಿಜೆಪಿ ಕರ್ನಾಟಕ ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಲೇವಡಿ ಮಾಡಿದೆ. ಎಕ್ಸ್​​ನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಅಧಿಕೃತ ಕಾರು ಎನ್ನಲಾದ KA42 GA 0099 ಸಂಖ್ಯೆಯ ವಾಹನದ ಇ-ಚಲನ್ ವಿವರಗಳನ್ನು ಬಿಜೆಪಿ ಹಂಚಿಕೊಂಡಿದೆ. ಸಂಚಾರ ಪೊಲೀಸರ ಕ್ಯಾಮೆರಾಗಳಲ್ಲಿ ಈ ವಾಹನವು ನಿಗದಿತ ವೇಗಕ್ಕಿಂತ ಹೆಚ್ಚು ವೇಗವಾಗಿ ಚಲಿಸಿರುವುದು ಹಾಗೂ ಸೀಟ್‌ಬೆಲ್ಟ್ ಧರಿಸದೆ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿರುವುದು ದಾಖಲಾಗಿದೆ. ಪ್ರಸ್ತುತ ಈ ವಾಹನದ ಹೆಸರಿನಲ್ಲಿ ಒಟ್ಟು 4 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಬಾಕಿ ಇದ್ದು, ಒಟ್ಟು 2,500 ರೂ. ದಂಡ ಪಾವತಿಸಬೇಕಾಗಿದೆ ಎಂಬ ಪೋಸ್ಟ್​​ನ್ನು ಹಂಚಿಕೊಂಡಿದ್ದಾರೆ.

ಬಿಜೆಪಿ ಎಕ್ಸ್​​  ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್:

ಬಿಜೆಪಿ ತನ್ನ ಅಧಿಕೃತ ಎಕ್ಸ್​​​ ಖಾತೆಯಲ್ಲಿ ಸಚಿವರನ್ನು ಟ್ಯಾಗ್ ಮಾಡಿ ಕಾಲೆಳೆದಿದೆ. “ಸಂಚಾರ ನಿಯಮಗಳು ಎಲ್ಲರ ಜೀವನಾಡಿ ಎಂಬ ನಿಮ್ಮ ಮಾತನ್ನು ನಾವು ಸಂಪೂರ್ಣವಾಗಿ ಒಪ್ಪುತ್ತೇವೆ ಪ್ರಿಯಾಂಕ್ ಖರ್ಗೆ ಅವರೇ! ಆದರೆ… ಸೀಟ್‌ಬೆಲ್ಟ್ ಧರಿಸುವುದು ಮತ್ತು ವೇಗದ ಮಿತಿ ನಿಯಮಗಳು ನಿಮಗೆ ಅನ್ವಯಿಸುವುದಿಲ್ಲವೇ? ನಿಮ್ಮ KA42 GA 0099 ವಾಹನವು ಅತಿ ವೇಗ ಹಾಗೂ ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿ ಸಿಕ್ಕಿಬಿದ್ದಿದೆ! ಎಂದು ಟ್ವೀಟ್ ಮಾಡಿದೆ. ಅಲ್ಲದೆ, ಸದ್ಯ ರಾಜ್ಯ ಸರ್ಕಾರವೇ ಜೂನ್ 21 ರಿಂದ ಜುಲೈ 10 ರವರೆಗೆ ಶೇ. 50ರಷ್ಟು ದಂಡ ರಿಯಾಯಿತಿ ನೀಡಿರುವುದರಿಂದ, ಸಚಿವರು ತಕ್ಷಣವೇ ‘ಕೆಎಸ್‌ಪಿ ಆಪ್’ (KSP App), ‘ಆಸ್ಟ್ರಂ ಆಪ್’ (ASTram App) ಅಥವಾ ‘ಕರ್ನಾಟಕ ಒನ್’ ಮೂಲಕ ಈ ಡಿಸ್ಕೌಂಟ್ ಆಫರ್ ಬಳಸಿ ತಮ್ಮ ಬಾಕಿ ದಂಡವನ್ನು ಶೀಘ್ರವಾಗಿ ಪಾವತಿಸಿ ಮುಗಿಸಲಿ ಎಂದು ಬಿಜೆಪಿ ಲೇವಡಿ ಮಾಡಿದೆ. ಸಾರ್ವಜನಿಕರಿಗೆ ಬುದ್ಧಿ ಹೇಳುವ ಸಚಿವರೇ ನಿಯಮ ಉಲ್ಲಂಘಿಸಿರುವುದು ಸರಿಯೇ ಎಂದು ಎಕ್ಸ್​​​ನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಕೋರ್ಟ್‌ಗೆ ಅಲೆಯಬೇಕಿಲ್ಲ! ಕಳವಾಗಿದ್ದ ಬೈಕ್‌ಗಳನ್ನು ಠಾಣೆಯಲ್ಲೇ ಮಾಲೀಕರಿಗೆ ಒಪ್ಪಿಸಿ ವಿಜಯಪುರ ಪೊಲೀಸರ ವಿನೂತನ ಕಾರ್ಯ

ರಾಜ್ಯದಲ್ಲಿ ಬಾಕಿ ಉಳಿಸಿಕೊಂಡಿರುವ ಎಲ್ಲಾ ಸಂಚಾರ ಇ-ಚಲನ್ ದಂಡಗಳ ಮೇಲೆ ಬರೋಬ್ಬರಿ ಶೇಕಡಾ 50 ರಷ್ಟು (50% Discount) ವಿನಾಯಿತಿ ನೀಡಿ ಸರ್ಕಾರ ಅಧಿಕೃತ ಆದೇಶ ಹೊರಡಿಸಿತ್ತು. ಈ ವಿಶೇಷ ರಿಯಾಯಿತಿ ಕೊಡುಗೆಯು 2026ರ ಜೂನ್ 21 ರಿಂದ ಆರಂಭವಾಗಿದ್ದು, ಜುಲೈ 10ರ ವರೆಗೆ ಮಾತ್ರ ಲಭ್ಯವಿರುತ್ತದೆ. ಈ ಅವಧಿಯೊಳಗೆ ವಾಹನ ಸವಾರರು ತಮ್ಮ ವಾಹನಗಳ ಮೇಲಿರುವ ಬಾಕಿ ದಂಡದ ಅರ್ಧದಷ್ಟು ಹಣವನ್ನು ಮಾತ್ರ ಪಾವತಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ ಎಂದು ಆದೇಶವನ್ನು ನೀಡಿತ್ತು. ಇದೀಗ ಈ ಬಗ್ಗೆ ಸರ್ಕಾರದ ಸಚಿವರೇ ನಿಯಮ ಪಾಲಿಸಿಲ್ಲ ಎಂದು ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Published On - 10:45 am, Thu, 25 June 26

Follow Us